ಕಿರುತೆರೆ ನಟಿ ಸವಿ ಮಾದಪ್ಪ ಸಾವಿನ ಪ್ರಕರಣ: ಮರಣೋತ್ತರ ವರದಿ ಬಿಚ್ಚಿಟ್ಟ ರಹಸ್ಯವಿದು..!

Savi Madappa
Published on

ರಾಮನಗರ: ಕಿರುತೆರೆ ನಟಿ ಸೌಜನ್ಯ ಅಲಿಯಾಸ್​ ಸವಿ ಮಾದಪ್ಪ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷಾ ವರದಿಯು ಕುಂಬಳಗೂಡು ಪೊಲೀಸರ ಕೈ ಸೇರಿದೆ.

ಸವಿ ಮಾದಪ್ಪ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಯ ವೈದ್ಯರು ಪ್ರಾಥಮಿಕ ವರದಿಯನ್ನು ನೀಡಿದ್ದಾರೆ. ಸೆಪ್ಟೆಂಬರ್ 30ರಂದು ತಾನು ವಾಸವಿದ್ದ ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯ ಸನ್ ವರ್ತ್​ ಅಪಾರ್ಟ್​ಮೆಂಟ್​ನಲ್ಲಿ ಸವಿ ಮಾದಪ್ಪರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಅಪಾರ್ಟ್ಮೆಂಟ್​ನಲ್ಲಿ ನಟಿಯೇ ಬರೆದಿದ್ದಾರೆನ್ನಲಾದ ಐದು ಪುಟಗಳ ಡೆತ್​ನೋಟ್ ಕೂಡ ಪತ್ತೆಯಾಗಿತ್ತು. ಸಾವಿಗೆ ಯಾರು ಕಾರಣರಲ್ಲ ಎಂದು ಬರೆಯಲಾಗಿತ್ತು. ಆದರೆ, ಮಗಳ ಸಾವಿಗ ಬಗ್ಗೆ ಆಕೆಯ ಕುಟುಂಬ ಅನುಮಾನ ‌ವ್ಯಕ್ತಪಡಿಸಿ, ಕುಂಬಳಗೂಡು ಠಾಣೆಗೆ ದೂರು ನೀಡಿತ್ತು. ಬಾಯ್​ಫ್ರೆಂಡ್ ವಿವೇಕ್ ಹಾಗೂ ಮೇಕಪ್ ಮ್ಯಾನ್ ಮಹೇಶ್ ವಿರುದ್ಧ ಸವಿ‌ ಮಾದಪ್ಪ ತಂದೆ ಪ್ರಭು ಮಾದಪ್ಪ ದೂರು ನೀಡಿದ್ದರು.

ಸದ್ಯ ಮರಣೋತ್ತರ ಪರೀಕ್ಷೆಯಲ್ಲಿ ನೇಣುಬಿಗಿದುಕೊಂಡು ಸಾವು ಎಂದು ವರದಿ ಬಂದಿದ್ದು, ಎಫ್ಎಸ್ಎಲ್ ವರದಿ ಬಂದ ನಂತರ ಪ್ರಕರಣ ಸಂಬಂಧ ಪೊಲೀಸರು ಅಂತಿಮ ವರದಿಯನ್ನು ನೀಡಲಿದ್ದಾರೆ. ದೇಹದ ಇತರೆ ಭಾಗಕ್ಕೆ ಬೇರೆ ಏನಾದರೂ ಸೇರಿದೆಯಾ ಎಂದು ತಿಳಿಯಲು ಸವಿ ಮಾದಪ್ಪರ ದೇಹದ ಕೆಲ ಭಾಗಗಳನ್ನು ಎಫ್ಎಸ್ಎಲ್​ಗೆ ಕಳುಹಿಸಲಾಗಿದೆ. ಅದರ ವರದಿ ಬಂದ ನಂತರ ಸಾವಿನ ಅಂತಿಮ ವರದಿಯನ್ನು ವೈದ್ಯರು ಕುಂಬಳಗೂಡು ಪೊಲೀಸರಿಗೆ ನೀಡಲಿದ್ದಾರೆ.

ಇನ್ನು ಡೆತ್​ನೋಟ್​ಗಳನ್ನು ಸಹ ಎಫ್ಎಸ್ಎಲ್​ಗೆ ಕಳುಹಿಸಲು ಪೊಲೀಸರು‌ ಮುಂದಾಗಿದ್ದಾರೆ. ಡೆತ್​ನೋಟ್​ನಲ್ಲಿರುವ ಬರವಣಿಗೆ ಸವಿ ಮಾದಪ್ಪ ಅವರದ್ದಾ ಎಂದು ತಿಳಿದುಕೊಳ್ಳಲು ಎಫ್ಎಸ್ಎಲ್​ಗೆ ರವಾನೆ ಮಾಡಿರುವುದಾಗಿ ರಾಮನಗರ ಎಸ್​ಪಿ ಗಿರೀಶ್.ಎಸ್ ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net