ಈ 3 ಯೂಟ್ಯೂಬ್​ ಚಾನೆಲ್​ಗಳ ವಿರುದ್ಧ ಕಾನೂನು ಸಮರ ಸಾರಿದ ಸಮಂತಾ! ದೂರಿನಲ್ಲಿ ಸ್ಯಾಮ್​ ಹೇಳಿದ್ದಿಷ್ಟು...

Samantha
Published on

ಹೈದರಾಬಾದ್​: ಅಕ್ಟೋಬರ್​ 2ರಂದು ಸಮಂತಾ-ನಾಗಚೈತನ್ಯ ಅಧಿಕೃತವಾಗಿ ಡಿವೋರ್ಸ್​ ಘೋಷಣೆ ಮಾಡಿದ ಬೆನ್ನಲ್ಲೇ ಅನೇಕ ವದಂತಿಗಳು ಹರಿದಾಡುತ್ತಿವೆ. ಎರಡು ಕುಟುಂಬಗಳ ಇತಿಹಾಸ ಕೆದಕ್ಕುತ್ತಿರುವುದಲ್ಲದೆ, ಡಿವೋರ್ಸ್​ ಹಿಂದಿನ ಕಾರಣಗಳನ್ನು ತಿಳಿಯಲು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಪ್ರಯತ್ನಿಸಲಾಗುತ್ತಿದೆ. ಅದರಲ್ಲೂ ಯೂಟ್ಯೂಬ್​​ನಲ್ಲಿ ಕೆಲ ಯೂಟ್ಯೂಬರ್ಸ್​ ತೀರಾ ವೈಯಕ್ತಿಕ ವಿಚಾರಗಳನ್ನು ಊಹಾಪೋಹಗಳನ್ನು ಸೇರಿಸಿ ಹರಿಬಿಡುತ್ತಿರುವುದು ಸಮಂತಾ ಮನಸ್ಸನ್ನು ಕದಡಿದೆ. ಹೀಗಾಗಿಯೇ ಸ್ಯಾಮ್​ ನ್ಯಾಯಾಲಯದ ಮೆಟ್ಟಿಲೇರಲು ನಿರ್ಧಾರ ಮಾಡಿದ್ದಾರೆ.

ಬುಧವಾರ ಕೊಕ್ಕಟಪಲ್ಲಿಯ ನ್ಯಾಯಲಯದಲ್ಲಿ ಸಮಂತಾ ತಮ್ಮ ವಕೀಲ ನೆರವಿನಿಂದ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಸುಮನ್​ ಟಿವಿ, ತೆಲುಗು ಪಾಪ್ಯುಲರ್​ ಟಿವಿ ಮತ್ತು ಸಿಎಲ್​ ವೆಂಕಟರಾವ್​ ಹೆಸರಿನ ಯೂಟ್ಯೂಬ್​ ಚಾನೆಲ್​​ಗಳ ವಿರುದ್ಧ ಸಮಂತಾ ಮಾನನಷ್ಟ ಮೊಕದ್ದಮ್ಮೆ ದಾಖಲಿಸಿದ್ದಾರೆ.

ಆಕ್ಷೇಪಾರ್ಹ ವಿಡಿಯೋಗಳ ಮೂಲಕ ವೈಯಕ್ತಿಕ ಜೀವನ ಬಗ್ಗೆ ಅನೇಕ ಊಹಾಪೋಹಗಳನ್ನು ಹರಿಬಿಟ್ಟು ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಸಮಂತಾ ಉಲ್ಲೇಖಿಸಿದ್ದಾರೆ.

ಸಮಂತಾ ತಮ್ಮ ಫ್ಯಾಷನ್​ ಡಿಸೈನರ್​ ಪ್ರೀತಂ ಝುಕಲ್ಕರ್​ ಜತೆ ಕ್ಯಾಮೆರಾಗೆ ಪೋಸ್​​ ನೀಡಿರುವ ಫೋಟೋವನ್ನು ಯೂಟ್ಯೂಬ್​ನಲ್ಲಿ ಥಂಬ್​ನೈಲ್​ ಆಗಿ ಬಳಸಿ ಊಹಾಪೋಹಗಳನ್ನು ಹರಿಬಿಡಲಾಗಿದೆ. ಅಲ್ಲದೆ, ಸಮಂತಾಗೆ ಅಫೇರ್​ ಇದೆ ಮತ್ತು ಗರ್ಭಪಾತ ಕೂಡ ಆಗಿದೆ ಎಂದೆಲ್ಲಾ ವದಂತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಇದರಿಂದ ಸಮಂತಾರ ಘನತೆಗೆ ಧಕ್ಕೆಯಾಗಿದ್ದು, ಸುಳ್ಳು ಮಾಹಿತಿ ಹರಡಿದ ಯೂಟ್ಯೂಬರ್ಸ್​ ವಿರುದ್ಧ ಸಮಂತಾ ಸಮರ ಸಾರಿದ್ದಾರೆ.

ಅ.2ರಂದು ಸಮಂತಾ ಮತ್ತು ನಾಗಚೈತನ್ಯ ಇಬ್ಬರೂ ತಂತಮ್ಮ ಇನ್​ಸ್ಟಾಗ್ರಾಂ ಖಾತೆಗಳಲ್ಲಿ ಒಂದೇ ರೀತಿಯ ಸಂದೇಶಗಳನ್ನು ಪೋಸ್ಟ್​ ಮಾಡುವ ಮೂಲಕ ಡಿವೋರ್ಸ್​ ಅನ್ನು ಅಧಿಕೃತವಾಗಿ ಘೋಷಣೆ ಮಾಡಿದರು. “ಸಾಕಷ್ಟು ಸಮಾಲೋಚನೆಯ ಬಳಿಕವು ನಾವಿಬ್ಬರೂ ಗಂಡ-ಹೆಂಡತಿಯ ಸಂಬಂಧ ಬಿಟ್ಟು ಬೇರೆ ಬೇರೆಯಾಗುವ ನಿರ್ಧಾರ ತೆಗೆದುಕೊಂಡಿದ್ದೇವೆ. ಒಂದು ದಶಕದ ಮಟ್ಟಿಗಿನ ಆಪ್ತಸ್ನೇಹವನ್ನು ನಾವು ಹೊಂದಿದ್ದೆವು. ಬಹುಶಃ ಅದೇ ನಮ್ಮಿಬ್ಬರ ಸಂಬಂಧದ ಸತ್ವವಾಗಿತ್ತು. ಇದರಿಂದಲೇ ಮುಂದೆಯೂ ನಮ್ಮಿಬ್ಬರ ನಡುವೆ ವಿಶೇಷ ನಂಟು ಮುಂದುವರಿಯುತ್ತದೆ ಎಂದು ನಂಬಿದ್ದೇವೆ” ಎಂದು ಸಮಂತಾ ಮತ್ತು ನಾಗಚೈತನ್ಯ ಬರೆದಿದ್ದಾರೆ. ಜೊತೆಗೆ, ತಮ್ಮ ಈ ಕಷ್ಟಕಾಲದಲ್ಲಿ ತಮ್ಮ ಅಭಿಮಾನಿಗಳು, ಹಿತೈಷಿಗಳು ಮತ್ತು ಮಾಧ್ಯಮದವರು ತಮಗೆ ಬೆಂಬಲ ನೀಡಬೇಕು. ತಾವು ಮೂವ್​ ಆನ್​ ಆಗಲು ಅಗತ್ಯವಾದ ಪ್ರೈವೆಸಿ ಕೊಡಬೇಕು ಎಂದೂ ಮನವಿ ಮಾಡಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ವಿಘ್ನೇಶ್ ಶಿವನ್ ನಿರ್ದೇಶನದ ಮತ್ತು ವಿಘ್ನೇಶ್ ಶಿವನ್ ರೌಡಿ ಪಿಕ್ಚರ್ಸ್ ಸಹಯೋಗದೊಂದಿಗೆ ಸೆವೆನ್ ಸ್ಕ್ರೀನ್ ಸ್ಟುಡಿಯೋದಿಂದ ಬಂಡವಾಳ ಹೂಡುತ್ತಿರುವ ತಮಿಳು ಸಿನಿಮಾ ಕಾತು ವಾಕುಲಾ ರಂಡು ಕಾದಲ್​ ನಲ್ಲಿ ನಯನತಾರಾ ಮತ್ತು ವಿಜಯ್ ಸೇತುಪತಿ ಜೊತೆ ಸಮಂತಾ ನಟಿಸುತ್ತಿದ್ದಾರೆ. ಇದರೊಂದಿಗೆ ಗುಣಶೇಖರ್ ನಿರ್ದೇಶನದ ಶಾಕುಂತಲಂ ಸಿನಿಮಾದಲ್ಲಿ ಶಾಕುಂತಲೆಯಾಗಿ ಸಮಂತಾ ಬಣ್ಣ ಹಚ್ಚಿದ್ದು, ಶಾಕುಂತಲಂ ಚಿತ್ರದ ಚಿತ್ರೀಕರಣವನ್ನು ಸಮಂತಾ ಸಂಪೂರ್ಣ ಮುಗಿಸಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net