ಪಿಎಸ್​ಐ ನೇಮಕಾತಿ ಹಗರಣ: 18 ದಿನದಿಂದ ತಲೆಮರೆಸಿಕೊಂಡಿದ್ದ ದಿವ್ಯಾ ಹಾಗರಗಿ ಕೊನೆಗೂ ಬಂಧನ

Divya Hagaragi
Published on

ಕಲಬುರಗಿ: ರಾಜ್ಯದಲ್ಲಿ ನಡೆದಿದೆ ಎನ್ನಲಾದ 545 ಪಿಎಸ್​ಐ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 18 ದಿನಗಳಿಂದ ತಲೆಮರೆಸಿಕೊಂಡಿದ್ದ ಬಿಜೆಪಿ ನಾಯಕಿ ದಿವ್ಯಾ ಹಾಗರಗಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.

ದಿವ್ಯ ಹಾಗರಗಿ ಕಳೆದ 18 ದಿನಗಳಿಂದ ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಂಡಿದ್ದರು. ಪುಣೆಯ ಬಳಿ ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ಆಕೆಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.

ಅಂದಹಾಗೆ ದಿವ್ಯಾ ಹಾಗರಗಿ ಜ್ಞಾನ ಜ್ಯೋತಿ ಆಂಗ್ಲ ಮಾದ್ಯಮ ಶಾಲೆಯ ಒಡತಿ. ಪಿಎಸ್ಐ ನೇಮಕಾತಿ ಅಕ್ರಮ ಬಯಲಾಗುತ್ತಿದ್ದಂತೆ ಪರಾರಿಯಾಗಿದ್ದಳು. ದಿವ್ಯಾ ಮಹಾರಾಷ್ಟ್ರ ಬಿಟ್ಟು ಬೇರೆಲ್ಲು ತೆರಳಿರಲಿಲ್ಲ. ಮಹಾರಾಷ್ಟ್ರದಲ್ಲೇ ದಿನಕ್ಕೊಂದು ಪ್ಲೇಸ್ ಬದಲಿಸ್ತಿದ್ದರು. ಈ ಬಗ್ಗೆ ದಿಗ್ವಿಜಯ ನ್ಯೂಸ್​ ಸಹ ನಿಖರ ಮಾಹಿತಿಯನ್ನು ಬಿತ್ತರಿಸಿತ್ತು.

ದಿವ್ಯಾ ಅವರಿಗಾಗಿ ಸಿಐಡಿ ತಂಡ ಎಲ್ಲಾ ಕಡೆ ಹುಡುಕಾಟ ನಡೆಸುತ್ತಿತ್ತು. ಸಾಕಷ್ಟು ದಿನಗಳವರೆಗೆ ಪತ್ತೆಯಾಗದ ಹಿನ್ನೆಲೆಯಲ್ಲಿ ದಿವ್ಯಾ ಹಾಗರಗಿ ಸೇರಿ ಆರು ಆರೋಪಿಗಳಿಗೆ ಅರೆಸ್ಟ್ ವಾರಂಟ್ ಜಾರಿಯಾಗಿತ್ತು. ಆರೋಪಿಗಳಾದ ದಿವ್ಯಾ ಹಾಗರಗಿ, ಮಂಜುನಾಥ್, ಕಾಶೀನಾಥ್, ರವೀಂದ್ರ, ಶಾಂತಿಬಾಯಿ, ಅರ್ಚನಾ ಅವರನ್ನು ಬಂಧಿಸುವಂತೆ ಕಲಬುರಗಿಯ ಮೂರನೇ ಜೆಎಂಎಫ್​ಸಿ ಕೋರ್ಟ್​ನಿಂದ ಅರೆಸ್ಟ್ ವಾರಂಟ್ ಜಾರಿಗೊಳಿಸಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net