More

    ಇಂಡೋನೇಷ್ಯಾ ತಾಳೆಎಣ್ಣೆ ರಫ್ತು ನಿಷೇಧ ಜಾರಿಗೆ

    ಯೂಕ್ರೇನ್ ಮೇಲೆ ರಷ್ಯಾ ಸಮರ ಸಾರಿದ ಪರಿಣಾಮ ಜಾಗತಿಕ ಪೂರೈಕೆ ಜಾಲಕ್ಕೆ ಭಾರಿ ಅಡಚಣೆ ಉಂಟಾಗಿದೆ. ಜಗತ್ತಿನ ಅತಿದೊಡ್ಡ ತಾಳೆ ಎಣ್ಣೆ ರಫ್ತುದಾರ ರಾಷ್ಟ್ರ ಇಂಡೋನೇಷ್ಯಾಕ್ಕೂ ಖಾದ್ಯ ತೈಲ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಮಲೇಷ್ಯಾದಲ್ಲೂ ರಫ್ತು ತೆರಿಗೆ ಹೆಚ್ಚಳ ಮಾಡಲಾಗಿದೆ. ಹೀಗಾಗಿ ಕಳೆದ ವಾರ ತಾಳೆ ಎಣ್ಣೆ ರಫ್ತು ನಿಷೇಧಿಸುವ ನಿರ್ಧಾರವನ್ನು ಅದು ಪ್ರಕಟಿಸಿತ್ತು. ಇದು ಗುರುವಾರ (ಏ.28)ದಿಂದ ಜಾರಿಗೆ ಬಂದಿದೆ. ಆದಾಗ್ಯೂ ಈ ನಿಷೇಧವು ರೀಫೈನ್ಡ್, ಬ್ಲೀಚ್ಡ್, ಡಿಯೋಡೋರೈಸ್ಡ್ ಪಾಮೋಲಿನ್​ಗೆ ಮಾತ್ರ ಅನ್ವಯವಾಗಲಿದೆ. ಕಚ್ಚಾ ತಾಳೆ ಎಣ್ಣೆಗೆ ಈ ನಿಷೇಧ ಅನ್ವಯವಾಗುವುದಿಲ್ಲ ಎಂದು ಇಂಡೋನೇಷ್ಯಾ ಸ್ಪಷ್ಟಪಡಿಸಿದೆ.

    ಭಾರತದ ಬೇಡಿಕೆ – ಪೂರೈಕೆ: ತಾಳೆ ಎಣ್ಣೆ ಆಮದು ಮಾಡಿಕೊಳ್ಳುವ ಜಗತ್ತಿನ ಅತಿದೊಡ್ಡ ರಾಷ್ಟ್ರ ಭಾರತ. ತಾಳೆ ಎಣ್ಣೆ ಬೇಡಿಕೆ ಈಡೇರಿಸಿಕೊಳ್ಳಲು ಇಂಡೋನೇಷ್ಯಾ ಮತ್ತು ಮಲೇಷ್ಯಾವನ್ನೇ ಅವಲಂಬಿಸಿದೆ. ಪ್ರತಿವರ್ಷ 13.5 ದಶಲಕ್ಷ ಟನ್​ಗಿಂತ ಹೆಚ್ಚು ಖಾದ್ಯ ತೈಲವನ್ನು ಭಾರತ ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ, 8 ರಿಂದ 8.5 ದಶಲಕ್ಷ ಟನ್ (63%) ತಾಳೆ ಎಣ್ಣೆ. ಈ ಪೈಕಿ ಶೇಕಡ 45 ಪಾಲು ಇಂಡೋನೇಷ್ಯಾ ಮತ್ತು ಶೇಕಡ 55 ಪಾಲು ಮಲೇಷ್ಯಾ ಪೂರೈಸುತ್ತದೆ. ಇಂಡೋನೇಷ್ಯಾದಿಂದ ಭಾರತವು ಪ್ರತಿ ವರ್ಷ 40 ಲಕ್ಷ ಟನ್ ತಾಳೆ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತದೆ.

    ಭಾರತದಲ್ಲಿ ವಿಶೇಷ ಉಪಕ್ರಮ: ಭಾರತದಲ್ಲಿ ತಾಳೆ ಎಣ್ಣೆ ಬಳಕೆಯ ಪ್ರಮಾಣವನ್ನು ಗಮನಿಸಿದ ಕೇಂದ್ರ ಸರ್ಕಾರ ಕಳೆದ ವರ್ಷ ನ್ಯಾಷನಲ್ ಮಿಷನ್ ಆನ್ ಎಡಿಬಲ್ ಆಯಿಲ್- ಆಯಿಲ್ ಪಾಮ್ (ಎನ್​ಎಂಇಒ-ಒಪಿ)ಗೆ ಚಾಲನೆ ನೀಡಿತ್ತು. ಇದಕ್ಕಾಗಿ 11,000 ಕೋಟಿ ರೂಪಾಯಿಯನ್ನು ಮುಂದಿನ 5 ವರ್ಷಗಳ ಅವಧಿಗೆಗೆ ಹೂಡಿಕೆ ಮಾಡಲು ನಿರ್ಧರಿಸಿದೆ. ತಾಳೆ ಎಣ್ಣೆಯ ಪ್ರಾದೇಶಿಕ ಉತ್ಪಾದನೆ 2025-26ರ ವೇಳೆಗೆ 1.1 ದಶಲಕ್ಷ ಟನ್​ಗೆ ಏರಿಸುವ ಗುರಿಯನ್ನು ಹಾಕಿಕೊಂಡಿದೆ.

    ತಾಳೆ ಎಣ್ಣೆ ಬಳಕೆ ಎಲ್ಲಿ?: ತಾಳೆ ಎಣ್ಣೆ ಮತ್ತು ಅದರ ಉಪ ಉತ್ಪನ್ನಗಳನ್ನು ಆಹಾರ ಉತ್ಪನ್ನ, ಡಿಟರ್ಜೆಂಟ್ಸ್, ಕಾಸ್ಮೆಟಿಕ್ಸ್ ಮತ್ತು ಜೈವಿಕ ಇಂಧನಗಳಲ್ಲಿ ಬಳಸಲಾಗುತ್ತದೆ. ನಿತ್ಯ ಬಳಕೆಯ ಸೋಪು, ಮಾರ್ಗರೈನ್, ಶ್ಯಾಂಪು, ನೂಡಲ್ಸ್, ಬಿಸ್ಕತ್ತು, ಚಾಕೊಲೇಟ್ಸ್ ತಯಾರಿಸಲು ತಾಳೆ ಎಣ್ಣೆಯನ್ನು ಬಳಸಲಾಗುತ್ತದೆ. ತಾಳೆ ಎಣ್ಣೆಯ ಬೆಲೆ ಏರಿಕೆ ಯಾವುದೇ ರೀತಿಯಲ್ಲಿ ಆದರೂ, ಅದರ ನೇರ ಪರಿಣಾಮ ಈ ಎಲ್ಲ ಉತ್ಪನ್ನಗಳ ಮೇಲಾಗುತ್ತದೆ ಮತ್ತು ಕಚ್ಚಾ ವಸ್ತು ವೆಚ್ಚ ಹೆಚ್ಚಳವಾದಾಗ ಉತ್ಪನ್ನಗಳ ಬೆಲೆಯೂ ಏರಿಕೆಯಾಗುತ್ತದೆ.

    ಪಿಎಸ್ಐ ಪರೀಕ್ಷೆ ಅಕ್ರಮದ ಕಿಂಗ್‌ಪಿನ್ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts