ಮೊಟ್ಟೆ ವಿರೋಧಿಸಿದ್ರೆ ನಿಮ್ಮ ಮಠಕ್ಕೆ ಬಂದು ಮೊಟ್ಟೆ ತಿಂದು ಹೋಗ್ತೀವಿ ಎಂದ ವಿದ್ಯಾರ್ಥಿನಿ

ನೀವು ವಿರೋಧ ಮಾಡಿದ್ರೆ ಮಠಕ್ಕೆ ಬಂದು ಮೊಟ್ಟೆ ತಿಂತೀವಿ: ಸ್ವಾಮೀಜಿಗಳಿಗೆ ವಿದ್ಯಾರ್ಥಿನಿ ಎಚ್ಚರಿಕೆ #Student #Egg - youtube
Published on

ಕೊಪ್ಪಳ: ಶಾಲಾಮಕ್ಕಳಿಗೆ ಬಾಳೆಹಣ್ಣಿನ ಜತೆ ಮೊಟ್ಟೆ ಕೊಡುವ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವ ನಡುವೆಯೇ ಗಂಗಾವತಿಯ ವಿದ್ಯಾರ್ಥಿನಿಯೊಬ್ಬಳು ನಾವು ಮೊಟ್ಟೆ ತಿಂದು ಬದುಕುತ್ತೇವೆ, ಇಲ್ಲವಾದರೆ ಸಾಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾಳೆ.

ಶಾಲೆಯಲ್ಲಿ ಮೊಟ್ಟೆ ನೀಡಲು ಕೆಲ‌ ಮಠಾಧೀಶರ ವಿರೋಧ ಹಿನ್ನೆಲೆಯಲ್ಲಿ ಎಸ್ಎಫ್ಐ ಸಂಘಟನೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ವಿದ್ಯಾರ್ಥಿನಿ ಮಾತನಾಡಿದ್ದಾಳೆ. ಮೊಟ್ಟೆ ತಿಂದರೇನೇ ನಾವು ಮುಂದೆ ಬದುಕುತ್ತೇವೆ, ಇಲ್ಲವಾದಲ್ಲಿ ನಾವು ಸಾಯುತ್ತೇವೆ. ನಾವು ಸಾಯುವುದು ಬೇಕಾ? ಅಥವಾ ಮೊಟ್ಟೆ ಕೊಡದೇ ಇರುವುದು ಬೇಕಾ? ನೀವೇ ಹೇಳಿ ಎಂದು ವಿದ್ಯಾರ್ಥಿನಿ ಪ್ರಶ್ನಿಸಿದ್ದಾಳೆ.

ನಮಗೆ ಮೊಟ್ಟೆ ಕೊಡಬೇಡಿ ಎಂದು ವಿರೋಧ ಮಾಡಿದರೆ, ನಾವು ನಿಮ್ಮ ಮಠಕ್ಕೆ ಬಂದು ಮೊಟ್ಟೆ ತಿಂದು ಹೋಗುತ್ತೇವೆ ಎಂದು ವಿದ್ಯಾರ್ಥಿನಿ ಎಚ್ಚರಿಕೆಯನ್ನು ನೀಡಿದ್ದಾಳೆ. ನಮಗೆ ಯಾಕೆ ವಿರೋಧ ಮಾಡುತ್ತಿದ್ದೀರಾ? ಮಕ್ಕಳು ದೇವರ ಸಮಾನ ಅಂತಾರೆ, ಹಾಗಾದರೆ ದೇವರ ಆಸೆ ಯಾಕೆ ಈಡೇರಿಸುವುದಿಲ್ಲ? ನಾವು ರೋಡಿಗೆ ಬಂದು ಹೋರಾಟ ಮಾಡಬೇಕಾ? ಎಂದು ಮಠಾಧೀಶರನ್ನು ವಿದ್ಯಾರ್ಥಿನಿ ಪ್ರಶ್ನಿಸಿದ್ದಾಳೆ.

ನಾವು ಒಂದಲ್ಲ ಎರಡು ಮೊಟ್ಟೆ ತಿಂತೀವಿ. ಅದನ್ನ ಕೇಳಲು ನೀವು ಯಾರು? ನಿಮ್ಮ ಮಠಕ್ಕೆ ಸ್ನಾನ ಮಾಡಿ ಬಂದು ಪೂಜೆ ಮಾಡಿಲ್ವಾ? ನಿಮಗೆ ದಕ್ಷಿಣೆ ಹಾಕಿಲ್ವಾ ಎಂದು ವಿದ್ಯಾರ್ಥಿನಿ ಸಾಲು ಸಾಲು ಪ್ರಶ್ನೆಗಳನ್ನು ಹಾಕಿದ್ದಾಳೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net