ನಿಯೋಜನೆಗೆ ಇತಿಶ್ರೀ?: ಸರ್ಕಾರಿ ನೌಕರರ ವಲಸೆ ತಡೆಗೆ ಸುಗ್ರೀವಾಜ್ಞೆಯ ಅಸ್ತ್ರ

Front
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಸರ್ಕಾರಿ ನೌಕರರನ್ನು ಬೇರೆ ಬೇರೆ ಇಲಾಖೆಗಳಿಗೆ ನಿಯೋಜಿಸುವುದರಿಂದ ಸಿಬ್ಬಂದಿ ಕೊರತೆ ಸಮಸ್ಯೆ ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ನಿಯೋಜನೆ ಪ್ರಕ್ರಿಯೆಯನ್ನೇ ಪೂರ್ಣ ಪ್ರಮಾಣದಲ್ಲಿ ನಿಷೇಧಿಸುವತ್ತ ಹೆಜ್ಜೆ ಇರಿಸಿದೆ. ಕಂದಾಯ ಸಚಿವ ಆರ್. ಅಶೋಕ್ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಆಡಳಿತ ಸುಧಾರಣೆ ಕುರಿತ ಸಚಿವ ಸಂಪುಟ ಉಪ ಸಮಿತಿ ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಂಡಿದೆ. ಸಚಿವ ಅಶೋಕ್ ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಜತೆ ಒಂದು ಸುತ್ತಿನ ಮಾತುಕತೆ ಸಹ ನಡೆಸಿದ್ದಾರೆ.

ಶೀಘ್ರ ತಿದ್ದುಪಡಿ: ಸರ್ಕಾರಿ ನೌಕರರ ನಿಯೋಜನೆಗೆ ಸಾಮಾನ್ಯ ನೇಮಕಾತಿ ನಿಯಮ 16(2)ರಲ್ಲಿ ಅವಕಾಶ ಇದೆ. ಆ ಅವಕಾಶವನ್ನು ನೌಕರರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ವೃಂದ - ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತಂದು ನಿಯೋಜನೆ ನಿಷೇಧಿಸಲು ತೀರ್ವನಿಸಲಾಗಿದೆ.

ಡಿಪಿಎಆರ್​ಗೆ ಸೂಚನೆ: ಸಂಪುಟ ಉಪ ಸಮಿತಿಯು ನಿಯೋಜನೆ ನಿಷೇಧಕ್ಕೆ ಸೂಕ್ತ ಕಾನೂನು ರೂಪಿಸುವಂತೆ ಆಡಳಿತ ಸುಧಾರಣಾ ಇಲಾಖೆಗೆ ನಿರ್ದೇಶನ ನೀಡಿದೆ. ನಿಯಮಕ್ಕೆ ತಿದ್ದುಪಡಿ ತಂದರೆ ನೌಕರರು ಮತ್ತೊಂದು ಮಾರ್ಗ ಹುಡುಕಿಕೊಳ್ಳುತ್ತಾರೆ. ಆದ್ದರಿಂದ ಹೊಸ ಕಾನೂನು ತಂದರೆ ಮಾತ್ರ ಕಡಿವಾಣ ಸಾಧ್ಯ ಎಂಬುದು ಸರ್ಕಾರದ ಚಿಂತನೆ.

ಎಷ್ಟು ನೌಕರರು?: ಎಲ್ಲ ಇಲಾಖೆಗಳಿಂದ 4 ಸಾವಿರಕ್ಕೂ ಹೆಚ್ಚು ನೌಕರರು ಮೂಲ ಇಲಾಖೆಯಿಂದ ಬೇರೆ ಕಡೆ ನಿಯೋಜನೆ ಮೇಲೆ ತೆರಳಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಇರುವುದಾಗಿ ಉನ್ನತ ಮೂಲಗಳು ಹೇಳುತ್ತವೆ.

ವಾಪಸ್​ಗೆ ಆದೇಶ: ಪಶು ಸಂಗೋಪನೆ ಸೇರಿ ಕೆಲವೊಂದು ಇಲಾಖೆಗಳು ನಿಯೋಜನೆ ಮೇಲೆ ತೆರಳಿದವರನ್ನು ವಾಪಸ್ ಕರೆಸಿಕೊಳ್ಳಲು ಆದೇಶ ಹೊರಡಿಸಿದ್ದರೂ ಬೆಲೆ ಇಲ್ಲದಂತಾಗಿದೆ. ಸರ್ಕಾರ ಚಾಪೆ ಕೆಳಗೆ ತೂರಿದರೆ ನೌಕರರು ರಂಗೋಲಿ ಕೆಳಗೆ ತೂರುತ್ತಿದ್ದಾರೆ. ಬೇರೆ ಬೇರೆ ಅವಕಾಶ ಹುಡುಕಿಕೊಂಡು ನಿಯೋಜನೆಯಲ್ಲಿಯೇ ಮುಂದುವರಿದಿದ್ದಾರೆ.

ಸಮಸ್ಯೆಯ ಮೂಲ: ಸಚಿವಾಲಯದ ಕೆಲ ನೌಕರರು ಕಂದಾಯ ಇಲಾಖೆಗೆ ನಿಯೋಜನೆ ಪಡೆದುಕೊಂಡಿದ್ದಾರೆ. ಕೆಲವರಿಗೆ ತಹಸೀಲ್ದಾರ್ ಅಂತಹ ಪ್ರಮುಖ ಹುದ್ದೆ ಸಿಕ್ಕಿದೆ. ಇವರಿಗೆ ಕಂದಾಯ ಇಲಾಖೆಯ ಕಾನೂನುಗಳ ಅರಿವಿಲ್ಲ ಎಂಬ ಆಕ್ಷೇಪ ಇಲಾಖೆಯ ನೌಕರರಿಂದ ಕೇಳಿ ಬಂತು. ಸಚಿವಾಲಯ ನೌಕರರು ನಿಯೋಜನೆ ನಮ್ಮ ಹಕ್ಕು ಎಂದು ವಾದಿಸಲಾರಂಭಿಸಿದರು. ಇಲ್ಲಿಂದ ಆರಂಭವಾದ ಸಮಸ್ಯೆ ಈಗ ನಿಯೋಜನೆಯನ್ನೇ ನಿಷೇಧಿಸುವ ಹಂತಕ್ಕೆ ಬಂದಿದೆ.

ಮಾಹಿತಿ ಕೋರಿಕೆ: ಸಚಿವ ಅಶೋಕ್ ನೇತೃತ್ವದ ಉಪ ಸಮಿತಿ ಅಧಿವೇಶನ ಮುಗಿಯುವುದರೊಳಗೆ ಎಲ್ಲ ಇಲಾಖೆಗಳಿಂದ ಮತ್ತೊಮ್ಮೆ ಮಾಹಿತಿ ಕೋರಿದೆ. ಖಚಿತ ಮಾಹಿತಿ ಬಂದ ಕೂಡಲೇ ಸಮಿತಿ ಮತ್ತೊಂದು ಸುತ್ತಿನ ಸಭೆ ನಡೆಸಲಿದೆ.

ಸುಗ್ರೀವಾಜ್ಞೆ ಅಸ್ತ್ರ: ಬೆಳಗಾವಿಯಲ್ಲಿ ನಡೆಯುವ ವಿಧಾನಮಂಡಲ ಅಧಿವೇಶನದಲ್ಲಿ ವಿಧೇಯಕ ಮಂಡನೆ ಸಾಧ್ಯವಿಲ್ಲ. ಅದಕ್ಕೆ ಇನ್ನಷ್ಟು ಚರ್ಚೆ ಹಾಗೂ ಸಿಎಂ ಅನುಮತಿಯ ಅಗತ್ಯವಿದೆ. ಆದ್ದರಿಂದ ಅಧಿವೇಶನ ಮುಗಿದ ಕೂಡಲೇ ಮತ್ತೊಂದು ಸಭೆ ಮಾಡಿ ವಿಧೇಯಕ ಅಂತಿಮ ಮಾಡಿ ಸಿಎಂ ಒಪ್ಪಿಗೆ ಪಡೆಯಲಾಗುತ್ತದೆ. ಆ ನಂತರ ಮೊದಲಿಗೆ ಸುಗ್ರೀವಾಜ್ಞೆ ತರಲಾಗುತ್ತದೆ. ವಿಧಾನಮಂಡಲದ ಜಂಟಿ ಅಧಿವೇಶನ ಅಥವಾ ಬಜೆಟ್ ಅಧಿವೇಶನದಲ್ಲಿ ವಿಧೇಯಕ ಮಂಡನೆ ಮಾಡಲಾಗುತ್ತದೆ.

ನೌಕರ ಸಂಘಟನೆಗಳ ವಾದ: ಲೆಕ್ಕಪತ್ರ ಇಲಾಖೆಯಲ್ಲಿ ನಿಯೋಜನೆ ಮೇಲೆ ಬೇರೆ ಬೇರೆ ಇಲಾಖೆಗಳಿಗೆ ಹೋಗಲೇಬೇಕಾಗಿದೆ. ಆದ್ದರಿಂದ ನಿಯೋಜನೆ ರದ್ದು ಸಾಧ್ಯವಾಗುವುದಿಲ್ಲ. ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮದಲ್ಲಿ ನೌಕರರ ಕೊರತೆ ಇದೆ. ಅಲ್ಲಿ ನಿಯೋಜನೆ ಮೇಲೆ ಹೋಗದಿದ್ದರೆ ಕೆಲಸವೇ ನಿಂತು ಹೋಗುತ್ತದೆ. ನಿಯೋಜನೆ ಮೇಲೆ ಅನಿವಾರ್ಯವಾಗಿ ಮಾತ್ರ ಹೋಗುತ್ತಾರೆ. ನೌಕರರ ಹಕ್ಕು ಕಸಿದುಕೊಳ್ಳಬಾರದು ಎಂದು ನೌಕರರ ಸಂಘಟನೆಗಳ ಪ್ರಮುಖರು ವಾದಿಸುತ್ತಾರೆ.

ಹುದ್ದೆ ಭರ್ತಿ ಮಾಡಲಿ: ವಿವಿಧ ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಇವೆ ಎಂಬ ಕಾರಣಕ್ಕೆ ನಿಯೋಜನೆ ಮೇಲೆ ತೆರಳುತ್ತಾರೆ. ಖಾಲಿ ಇರುವ ಸುಮಾರು 2.5 ಲಕ್ಷ ಹುದ್ದೆ ಭರ್ತಿ ಮಾಡಿದರೆ ನಿಯೋಜನೆ ಮೇಲೆ ತೆರಳುವುದಿಲ್ಲವೆಂಬುದು ನೌಕರರಲ್ಲಿರುವ ಅಭಿಪ್ರಾಯವೂ ಆಗಿದೆ.

ಆಪ್ತಶಾಖೆಗೆ ಹೇಗೆ?: ಸಿಎಂ ಹಾಗೂ ಸಚಿವರ ಆಪ್ತಶಾಖೆಗೆ ಸಿಬ್ಬಂದಿ ನೇಮಕ ನಿಯೋಜನೆ ಮೇಲೆ ನಡೆಯುತ್ತದೆ. ನಿಯೋಜನೆ ರದ್ದು ಮಾಡಿದರೆ ಆಗ ಸರ್ಕಾರ ಯಾವ ರೀತಿಯಲ್ಲಿ ಕೆಲಸ ನಿರ್ವಹಿಸಲಿದೆ ಎಂಬ ಪ್ರಶ್ನೆಯೂ ಇದೆ.

ಸರ್ಕಾರ ಇಷ್ಟೊಂದು ಹುದ್ದೆ ಖಾಲಿ ಇಟ್ಟು ನಿಯೋಜನೆ ರದ್ದು ಮಾಡುವುದು ಸರಿಯಲ್ಲ. ಕಾನೂನಿನಲ್ಲಿ ನೌಕರರಿಗೆ ಕೊಟ್ಟಿರುವ ಹಕ್ಕು ಕಿತ್ತುಕೊಳ್ಳುವ ಪ್ರಯತ್ನ ಇದು. ನೌಕರರ ಪ್ರತಿಕ್ರಿಯೆ ಪಡೆದು ಹೆಜ್ಜೆಯಿಡುತ್ತೇವೆ.

| ಪಿ. ಗುರುಸ್ವಾಮಿ, ಸಚಿವಾಲಯ ನೌಕರರ ಸಂಘ

ನಿಯೋಜನೆಗೆ ಕಾನೂನಿನಲ್ಲಿಯೇ ಅವಕಾಶ ಇದೆ. ಕೆಲವು ಇಲಾಖೆಗಳಲ್ಲಿ ನಿಯೋಜನೆ ಮೇಲೆ ಹೋಗಿರುವ ಸಿಬ್ಬಂದಿ ಇಲ್ಲದಿದ್ದರೆ ಅಂತಹ ಇಲಾಖೆ ಬಾಗಿಲು ಹಾಕುವ ಪರಿಸ್ಥಿತಿಯೂ ಇದೆ. ಖಾಲಿ ಹುದ್ದೆ ಭರ್ತಿ ಮಾಡುವುದೇ ಸಮಸ್ಯೆ ಪರಿಹಾರಕ್ಕೆ ಇರುವ ಮಾರ್ಗ.

| ಸಿ.ಎಸ್. ಷಡಾಕ್ಷರಿ ಅಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘ

ನಿಯೋಜನೆಗೆ ಕಾರಣಗಳು: ಬಹಳಷ್ಟು ನೌಕರರು ಕಂದಾಯ, ಬಿಬಿಎಂಪಿ, ಸಚಿವರ ಆಪ್ತಶಾಖೆ, ಬಿಡಿಎ ಹೀಗೆ ಫಲವತ್ತಾದ ಜಾಗಗಳಿಗೆ ನಿಯೋಜನೆ ಮೇಲೆ ತೆರಳುತ್ತಿದ್ದಾರೆ. ಬೆಂಗಳೂರು ಅಥವಾ ಜಿಲ್ಲಾ ಕೇಂದ್ರದಿಂದ ಹೋಗಲು ಬಯಸದ, ಹುದ್ದೆ ತೊರೆಯಲು ಇಷ್ಟವಿಲ್ಲದವರು, ಪತಿ, ಪತ್ನಿ, ಪಾಲಕರ ಆರೋಗ್ಯ ಸಮಸ್ಯೆ, ವರ್ಗಾವಣೆ ಸಾಧ್ಯವಾಗದಿರುವ ಸಿಬ್ಬಂದಿ ನಿಯೋಜನೆ ಮೇಲೆ ಇಷ್ಟದ ಹುದ್ದೆಗಳಿಗೆ ತೆರಳುತ್ತಿದ್ದಾರೆ.

ಸಚಿವಾಲಯದಲ್ಲಿ ಬಹಳಷ್ಟು ಹುದ್ದೆ ಖಾಲಿ ಉಳಿದಿವೆ. ಅದಕ್ಕೆ ಕಾರಣ ನಿಯೋಜನೆ. ಆದ್ದರಿಂದ ಹೊಸ ಕಾನೂನಿನ ಮೂಲಕ ನಿಯೋಜನೆಯನ್ನೇ ನಿಷೇಧಿಸಲು ನಿರ್ಧರಿಸಲಾಗಿದೆ. ಮಾಹಿತಿ ನೀಡುವಂತೆ ಎಲ್ಲ ಇಲಾಖೆಗೆ ಸೂಚನೆ ನೀಡಿದ್ದೇನೆ. ಅಧಿವೇಶನ ನಂತರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುವ ಉದ್ದೇಶವಿದೆ.

| ಆರ್. ಅಶೋಕ್ ಕಂದಾಯ ಸಚಿವ

ಯಾಕಾಗಿ ನಿಷೇಧ?: ಪಶು ಸಂಗೋಪನೆ, ಯುವಜನ ಸೇವೆ, ತೋಟಗಾರಿಕೆ ಸೇರಿ ಅನೇಕ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಇರುವವರು ನಿಯೋಜನೆ ಮೇಲೆ ತೆರಳಿದ್ದಾರೆ. ಇಲಾಖೆ ಕೆಲಸ ಕಾರ್ಯ ವೇಗ ಪಡೆಯದೆ ಸಾರ್ವಜನಿಕ ಸೇವೆ ನೀಡಲು ತೊಂದರೆಯಾಗಿದೆ. ನಿಯೋಜನೆ ಮೇಲೆ ಹೋಗಿರುವವರು ವಾಪಸ್ ಬಂದರೆ ಯಾವ ಇಲಾಖೆಯಲ್ಲಿ ಎಷ್ಟು ಜನ ಕೆಲಸ ಮಾಡುತ್ತಿದ್ದಾರೆ? ಕೊರತೆ ಎಷ್ಟಿದೆ? ಜವಾಬ್ದಾರಿ ಹಂಚಿಕೆ ಹೇಗೆಂಬುದನ್ನು ನಿರ್ಧರಿಸಬಹುದು. ಆದ್ದರಿಂದ ಈ ನಿಲುವಿಗೆ ಬರಲಾಗಿದೆ.

ರದ್ದತಿಯಿಂದ ಲಾಭವೇನು?

  • ಇಲಾಖೆಗಳಲ್ಲಿ ನೌಕರರ ಸಮಸ್ಯೆ ಇರುವುದಿಲ್ಲ
  • ಸರ್ಕಾರದ ಕೆಲಸಕ್ಕೆ ವೇಗ ಸಿಗುತ್ತದೆ
  • ನೌಕರರು ಸಾರ್ವಜನಿಕರಿಗೆ ಸುಲಭವಾಗಿ ಸಿಗುತ್ತಾರೆ
  • ಆಯಾ ಇಲಾಖೆ ನೌಕರರ ಬಡ್ತಿಗೆ ಅನುಕೂಲವಾಗುತ್ತದೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net