

ಕಲಬುರಗಿ: ಸುಳ್ಳು ಹೇಳಿ ಆ ಕ್ಷಣಕ್ಕೆ ತಪ್ಪಿಸಿಕೊಂಡರೂ, ಸತ್ಯ ಎಂಬುದು ಬೂದಿ ಮುಚ್ಚಿದ ಕೆಂಡ ಇದ್ದಂತೆ. ಒಂದಲ್ಲ ಒಂದು ದಿನ ಸತ್ಯ ಹೊರಬರಲೇಬೇಕು ಎನ್ನುವ ಮಾತಿಗೆ ಈ ಘಟನೆ ತಾಜಾ ಉದಾಹರಣೆ ಆಗಿದೆ. ವ್ಯಕ್ತಿಯೊಬ್ಬನ ಅಂತ್ಯಸಂಸ್ಕಾರ ಆದ ಎರಡು ತಿಂಗಳ ಬಳಿಕ ಸಾವಿನ ರಹಸ್ಯ ಬಯಲಾಗಿದೆ. ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಕೊಲೆ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ರಾಜಪ್ಪರೆಡ್ಡಿ (38) ಎಂಬಾತ ಕಳೆದ ಆಗಸ್ಟ್ 24ರಂದು ಮೃತಪಟ್ಟಿದ್ದ. ರಾಜಪ್ಪರೆಡ್ಡಿ ಕುಡುಕನಾಗಿದ್ದ. ಪ್ರತಿದಿನ ಕಂಠಪೂರ್ತಿ ಕುಡಿದು ತೇಲಾಡುತ್ತಿದ್ದ. ಆತನ ಸಾವಿನ ಬಳಿಕ ಕುಡಿದು ಸತ್ತಿದ್ದಾನೆಂದು ನಂಬಿದ ಗ್ರಾಮಸ್ಥರು ಆತನ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದರು. ಪತ್ನಿ ಅನಸೂಯಾ ಕೂಡ ಕುಡಿದು ಸತ್ತಿದ್ದಾನೆಂದು ಹೇಳಿದ್ದಳು. ಅದನ್ನು ಗ್ರಾಮಸ್ಥರು ನಂಬಿದ್ದರು. ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಈರ್ನಾಪಲ್ಲಿಯಲ್ಲಿ ಘಟನೆ ನಡೆದಿತ್ತು.
ಬಯಲಾಯ್ತು ಪತ್ನಿಯ ಕರಾಳ ಮುಖ
ಗಂಡ ಮೃತಪಟ್ಟರು ಕಿಂಚಿತ್ತೂ ಕಣ್ಣೀರಾಕದ ಅನಸೂಯಾ ತನ್ನ ಪ್ರಿಯಕರನೊಂದಿಗೆ ಸರಸ ಸಲ್ಲಾಪವನ್ನು ಮುಂದುವರಿಸಿದ್ದಳು. ಒಮ್ಮೆ ಪ್ರಿಯಕರನೊಂದಿಗೆ ಸರಸವಾಡುವಾಗ ಆತನ ಸಮೇತ ಅನಸೂಯ ಸಿಕ್ಕಿಬಿದ್ದಿದ್ದ. ಗ್ರಾಮಸ್ಥರು ಪ್ರಿಯಕರನನ್ನು ಕಂಬಕ್ಕೆ ಕಟ್ಟಿ ಥಳಿಸಿದಾಗ ರಾಜಪ್ಪರೆಡ್ಡಿ ಸಾವಿನ ಅಸಲಿ ಕಥೆಯನ್ನು ಪ್ರಿಯಕರ ಬಿಚ್ಚಿಟ್ಟಿದ್ದಾರೆ.
ಲಾಕ್ಡೌನ್ ಲವ್ವಿಡವ್ವಿ
ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ರಾಜಪ್ಪ ರೆಡ್ಡಿ ತೆಲಂಗಾಣದ ಅಂತಾವರಂನಲ್ಲಿರುವ ಪತ್ನಿಯ ಮೆನೆಗೆ ತೆರಳಿದ್ದಳು. ಕೆಲ ತಿಂಗಳುಗಳ ಕಾಲ ಅಲ್ಲಿಯೇ ಉಳಿದಿದ್ದ. ಲಾಕ್ಡೌನ್ ಸಮಯದಲ್ಲಿ ಅನಸೂಯ ಪಕ್ಕದ ಮನೆಯ, ವಯಸ್ಸಿನಲ್ಲಿ ತನಗಿಂತ ಕಿರಿಯವನಾದ ಶ್ರೀಶೈಲ್ ಎಂಬಾತನ ಜತೆ ಅಕ್ರಮ ಸಂಬಂದ ಹೊಂದಿದ್ದಳು. ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಗೊತ್ತಾದ ತಕ್ಷಣ ರಾಜಪ್ಪ ರೆಡ್ಡಿ ತವರು ಮನೆಯಿಂದ ಕರೆದುಕೊಂಡು ಬಂದಿದ್ದ.
ಗಂಡನ ಮನೆಯಲ್ಲೂ ಮುಂದುವರಿದ ಸರಸ ಸಲ್ಲಾಪ
ಅನಸೂಯಾಳನ್ನು ಗಂಡನ ಮನೆಗೆ ಕರೆತಂದರೂ ಆಕೆ ತನ್ನ ಬುದ್ಧಿಯನ್ನು ಬಿಡಲಿಲ್ಲ. ಶ್ರೀಶೈಲನನ್ನು ಕರೆಸಿಕೊಂಡು ಆಗಾಗ ಆತನೊಂದಿಗೆ ಸೇರುತ್ತಿದ್ದಳು. ಕೆಲವೊಮ್ಮೆ ಹೊರಗೆ ಹೋಗುತ್ತಿದ್ದ ಅನಸೂಯಾ ಸಂಜೆಯಾದರೂ ಮನೆಗೆ ಬರುತ್ತಿರಲಿಲ್ಲ. ಇತ್ತ ಹೆಂಡತಿಯ ಲವ್ವಿಡವ್ವಿ ಚೆನ್ನಾಗಿ ತಿಳಿದಿದ್ದ ರಾಜಪ್ಪರೆಡ್ಡಿ, ಆಕೆಯೊಂದಿಗೆ ಆಗಾಗ ಜಗಳ ಆಡುತ್ತಿದ್ದ.
ಸಂಚು ರೂಪಿಸಿ ಹತ್ಯೆ
ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಗಂಡನ ಕೊಲೆಗೆ ಅನುಸೂಯಾ ಸಂಚು ರೂಪಿಸಿದಳು. ಗಂಡ ಕುಡಿತದ ದಾಸನಾಗಿದ್ದು, ಆಕೆಯ ಕೆಲಸ ಸುಲಭವಾಗಲು ನೆರವಾಯಿತು. ಎಂದಿನಿಂತೆ ಆಗಸ್ಟ್ 24ರಂದು ರಾಜಪ್ಪರೆಡ್ಡಿ ಕಂಠ ಪೂರ್ತಿ ಕುಡಿದಿದ್ದ. ಈ ವೇಳ ಆತನಿಗೆ ಕೆಲ ಮಾತ್ರೆಗಳನ್ನು ಅನುಸೂಯಾ ನೀಡಿದ್ದಳು. ಕುಡಿದು ಮಾತ್ರೆ ಸೇವಿಸಿದ್ರು ಪತಿ ಸಾಯದಿದ್ದಾಗ, ಆತನ ಕತ್ತು ಹಿಸುಕಿ ಕೊಲೆ ಮಾಡಿದ್ದಳು. ರಾಜಪ್ಪರೆಡ್ಡಿಯ ಕೊಲೆಗೆ ಪ್ರಿಯಕರ ಶ್ರೀಶೈಲ್ ಕೂಡ ನೆರವು ನೀಡಿದ್ದ.
ಆದರೆ, ಗ್ರಾಮಸ್ಥರು ಕುಡಿದು ಸತ್ತಿದ್ದಾನೆಂದು ನಂಬಿದ್ದರು. ಅನುಸೂಯ ಕೂಡ ಕುಡಿದ ಮೃತಪಟ್ಟಿದ್ದಾನೆಂದು ಹೇಳಿದ ಮಾತನ್ನು ಗ್ರಾಮಸ್ಥರು ನಂಬಿ ಅಂತಿಮ ಕ್ರಿಯೆ ನೆರವೇರಿಸಿದ್ದರು. ಗಂಡ ಸತ್ತ ಬಳಿಕ ಪ್ರಿಯಕರನೊಂದಿಗೆ ಸರಸ ಸಲ್ಲಾಪವಾಡುವಾಗ ಸಿಕ್ಕಿಬಿದ್ದ ಇಬ್ಬರು, ಸತ್ಯಾಂಶವನ್ನು ತಿಳಿಸಿದ್ದು, ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಮುಧೋಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. (ದಿಗ್ವಿಜಯ ನ್ಯೂಸ್)