

ಬೆಂ.ಗ್ರಾಮಾಂತರ: ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ತಾಲೂಕು ಘಾಟಿ ಬಳಿ ಶನಿವಾರ ತಡರಾತ್ರಿ ಖಾಸಗಿ ಬಸ್ ಉರುಳಿ ಬಿದ್ದು ಇಬ್ಬರು ಸಾವನ್ನಪ್ಪಿದ್ದು 15ಕ್ಕೂ ಹೆಚ್ಚು ಮಂದಿ ತೀವ್ರ ಗಾಯಗೊಂಡಿದ್ದಾರೆ.
ಶನಿವಾರ ರಾತ್ರಿ ಜೋರು ಮಳೆಯ ನಡುವೆ ಅಪಘಾತ ಸಂಭವಿಸಿದ್ದು ಬೆಳಗಿನ ಜಾವದವರೆಗೆ ಗಾಯಾಳುಗಳು ನರಳಾಡಿದ್ದಾರೆ ಎನ್ನಲಾಗಿದ್ದು ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮದುವೆ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್ ಕಂದಕಕ್ಕೆ ಉರುಳಿ ಬಿದ್ದಿದೆ ಎನ್ನಲಾಗಿದೆ.
ದೊಡ್ಡಬಳ್ಳಾಪುರ ಮತ್ತು ಗೌರಿಬಿದನೂರು ರಸ್ತೆಯ ಮಧ್ಯೆ ಮಾಕಳಿ ಬೆಟ್ಟದ ಬಳಿ ಘಟನೆ ನಡೆದಿದೆ. ಘಾಟಿ ದೇವಾಲಯದಲ್ಲಿ ಮದುವೆಗೆ ಮುಗಿಸಿ ಹಿಂದಿರುಗುವಾಗ ನಿಯಂತ್ರಣ ತಪ್ಪಿದ ಬಸ್ ಹಳ್ಳಕ್ಕೆ ಬಿದ್ದಿದೆ. ಗೌರಿಬಿದನೂರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಒಂದು ಸಾವು ಹಾಗೂ ದೊಡ್ಡಬಳ್ಳಾಪುರ ಸರಕಾರಿ ಆಸ್ಪತ್ರೆಯಲ್ಲಿ ಒಂದು ಸಾವು ಸಂಭವಿಸಿದೆ. ಸುಮಾರು 20 ಮಂದಿಗೆ ಗಾಯಗಳಾಗಿವೆ.
ಘಟನೆ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)