More

    ಪ್ರಾದೇಶಿಕ ಪಕ್ಷ ಉಳಿವಿಗೆ ನಿರಂತರ ಹೋರಾಡುವೆ; ಜಾತ್ಯತೀತ ಪಕ್ಷದತ್ತ ಮತದಾರನ ಒಲವು; ರಾಷ್ಟ್ರೀಯ ಪಕ್ಷಗಳ ಹುನ್ನಾರ ನಡೆಯಲ್ಲ: ದೇವೇಗೌಡ

    | ಪರಶುರಾಮ ಭಾಸಗಿ ವಿಜಯಪುರ

    ಸಿಂದಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಕಾವು ರಂಗೇರಿದೆ. ರಾಷ್ಟ್ರೀಯ ಪಕ್ಷಗಳ ಅಬ್ಬರದ ನಡುವೆಯೂ ಪ್ರಾದೇಶಿಕ ಪಕ್ಷ ಜೆಡಿಎಸ್ ಪ್ರಬಲ ಪೈಪೋಟಿ ನೀಡಿದೆ. 88ರ ಇಳಿ ವಯಸ್ಸಿನಲ್ಲೂ ಮಾಜಿ ಪ್ರಧಾನಿ, ಜೆಡಿಎಸ್​ನ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರೇ ಖುದ್ದಾಗಿ ಅಖಾಡ ಕ್ಕಿಳಿದಿದ್ದಾರೆ. ಅವರೊಂದಿಗೆ ‘ವಿಜಯವಾಣಿ’ ನಡೆಸಿದ ಕಿರು ಸಂದರ್ಶನ ಇಲ್ಲಿದೆ.

    ಉಪಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿವೆ ಎಂಬ ಕಾಂಗ್ರೆಸ್ ಆರೋಪ ಒಪ್ಪುವಿರೇ?

    ನಮ್ಮದು ಜಾತ್ಯತೀತ ಪಕ್ಷ. ನಮಗೆ ಕಾಂಗ್ರೆಸ್ ಮತ್ತು ಬಿಜೆಪಿ ಪ್ರಬಲ ಪೈಪೋಟಿ ಪಕ್ಷಗಳು. ನಾವು ಯಾರನ್ನೂ ಹಗುರವಾಗಿ ಪರಿಗಣಿಸಿಲ್ಲ. ಹಾಗಂತ ಯಾರ ಜತೆಯೂ ಹೊಂದಾಣಿಕೆ ಇಲ್ಲ. ಹಾನಗಲ್​ನಲ್ಲಿ 60 ಸಾವಿರ ಮುಸ್ಲಿಂ ಸಮುದಾಯದವರಿದ್ದಾರೆ. ಸಿಂದಗಿಯಲ್ಲಿ 30 ಸಾವಿರಕ್ಕೂ ಅಧಿಕ ಮುಸ್ಲಿಮರಿದ್ದಾರೆ. ಹಾನಗಲ್​ನಲ್ಲಿ ಎರಡೂ ಪಕ್ಷಗಳು ಲಿಂಗಾಯತ ಸಮುದಾಯಕ್ಕೆ ಆದ್ಯತೆ ನೀಡಿದವು. ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ನಮಗೆ ಬೇರೆ ದಾರಿ ಇರಲಿಲ್ಲ. ಇನ್ನು ಸಿಂದಗಿಯಲ್ಲಿ 9 ಜನ ಪಕ್ಷದ ಮುಖಂಡರ ಜತೆ ಸಮಾಲೋಚಿಸಿ, ಅವರ ಒಪ್ಪಿಗೆಯೊಂದಿಗೆ ನಾಜಿಯಾ ಆಂಗಡಿಗೆ ಟಿಕೆಟ್ ನೀಡಲಾಗಿದೆ.

    ಜೆಡಿಎಸ್ ಬಿಜೆಪಿಯ ಬಿ ಟೀಂ ಎಂಬ ಆರೋಪ ಇದೆಯಲ್ಲ?

    2018ರಲ್ಲಿ ರಾಹುಲ್ ಗಾಂಧಿ ಚುನಾವಣೆ ಪ್ರಚಾರಕ್ಕೆ ಬಂದಾಗ ಹಾಸನದಲ್ಲಿ ಅವರಿಗೆ ಚೀಟಿ ಕೊಟ್ಟು ದೇವೇಗೌಡರು ಬಿಜೆಪಿಯ ಬಿ ಟೀಂ ಎಂದು ಸಿದ್ದರಾಮಯ್ಯ ಹೇಳಿಸಿದ್ದರು. ಹೀಗಾಗಿ ಈ ಚುನಾವಣೆಯಲ್ಲಿ ನಾನೇ ಅಭ್ಯರ್ಥಿ ಪರ ಪ್ರಚಾರ ಮಾಡಲು ಬಂದಿದ್ದೇನೆ. 9 ದಿನಗಳಿಂದ ಇಲ್ಲಿ ಮುಕ್ಕಾಂ ಹೂಡಿದ್ದೇನೆ. ಅ.27ರ ಸಂಜೆ ವರೆಗೆ ಇರುತ್ತೇನೆ. ಹಿಂದಿನ ಚುನಾವಣೆ ಗಮನಿಸಿದರೆ ಸಿಂದಗಿಯಲ್ಲಿ ಕಾಂಗ್ರೆಸ್ ತೃತೀಯ ಸ್ಥಾನದಲ್ಲಿದೆ. ಜೆಡಿಎಸ್ ಮತ್ತು ಬಿಜೆಪಿ ಮಧ್ಯೆಯೇ ಪೈಪೋಟಿ ನಡೆದಿರೋದು.

    ಜೆಡಿಎಸ್ ಸರ್ವನಾಶವಾಗಲಿದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದರಲ್ಲ…

    2013ರಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಮುಖಂಡರಾಗಿ 123 ಸ್ಥಾನ ಪಡೆದಿದ್ದರು. ನಮ್ಮ ಪಕ್ಷದಿಂದ ಆಯ್ಕೆಯಾಗಿದ್ದ ಜಮೀರ್, ಚಲುವರಾಯಸ್ವಾಮಿ ಮತ್ತಿತರ ಏಳು ಶಾಸಕರನ್ನು ಕರೆದುಕೊಂಡು ಹೋದರು. ನಾನು ಆ ಚುನಾವಣೆಯಲ್ಲಿ ಹೆಚ್ಚು ಪ್ರವಾಸ ಮಾಡಲಿಲ್ಲ. ಆದರೂ 40 ಸ್ಥಾನಗಳಲ್ಲಿ ಗೆದ್ದೆವು. 2018ರ ಚುನಾವಣೆಗೂ ಪೂರ್ವದಲ್ಲಿ ಒಬ್ಬ ಸರ್ಕಾರಿ ಅಧಿಕಾರಿ, ತಮ್ಮ ಮುಖ್ಯ ಕಾರ್ಯದರ್ಶಿ, ಅವರ ಜತೆ ಇಬ್ಬರು ನಿವೃತ್ತ ಮುಸ್ಲಿಂ ಅಧಿಕಾರಿಗಳನ್ನು ಸೇರಿಸಿ ಬಜೆಟ್​ನಲ್ಲಿ ಇಟ್ಟ ಹಣವನ್ನೆಲ್ಲ ಪ್ರತಿ ಮಸೀದಿಗೆ 50 ಸಾವಿರದಿಂದ 1 ಲಕ್ಷ ರೂ.ವರೆಗೆ ಹಂಚಿಕೆ ಮಾಡಿದ್ದ. ಆಗ ಸಿಎಂ ಆಗಿದ್ದ ಸಿದ್ದರಾಮಯ್ಯ, ಯಾವುದೇ ಕಾರಣಕ್ಕೂ ಜೆಡಿಎಸ್​ಗೆ ಅಲ್ಪಸಂಖ್ಯಾತರ ಮತಗಳು ಬಾರದಂತೆ ಪ್ರಯತ್ನ ಮಾಡಿದ್ದರು. ಆದರೂ ನಾವು ಸಂಘಟನಾತ್ಮಕವಾಗಿ ಹೋರಾಡಿದೆವು. ಜೆಡಿಎಸ್ ಸರ್ವನಾಶ ಮಾಡಬೇಕೆಂಬ ವಿಚಾರ ಹೊಸದೇನಲ್ಲ. ರಾಷ್ಟ್ರೀಯ ಪಕ್ಷಗಳೆರಡೂ ಸೇರಿ ಪ್ರಾದೇಶಿಕ ಪಕ್ಷವನ್ನು ಮುಗಿಸುವ ಹುನ್ನಾರ ನಡೆಸುತ್ತಲೇ ಇವೆ. ರಾಜ್ಯದ ಜನ ಗಮನಿಸುತ್ತಿದ್ದಾರೆ.

    ಪ್ರಚಾರದಲ್ಲಿ ಗೌಡರ ಪರಿವಾರ: ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ದೇವೇಗೌಡರ ಇಡೀ ಕುಟುಂಬ ತೊಡಗಿ ಕೊಂಡಿದೆ. ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿ ಕ್ಷೇತ್ರದಲ್ಲಿಯೇ ಠಿಕಾಣಿ ಹೂಡಿದ್ದಾರೆ. ಎರಡೂ ಕೇತ್ರಗಳ ಪ್ರಚಾರದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ, ಅವರ ಪುತ್ರ ಮತ್ತು ಸಂಸದ ಪ್ರಜ್ವಲ್ ರೇವಣ್ಣ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಂಡಿದ್ದಾರೆ. ಗೌಡರ ಕರೆ ಮೇರೆಗೆ ಪ್ರಚಾರಕ್ಕೆ ಶಾಸಕರು ತೆರಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts