More

    ಉ.ಪ್ರ.ದಲ್ಲಿ ಕಾಂಗ್ರೆಸ್‌ಗೆ ಗತವೈಭವ ಮರಳಿ ತರುವರೇ ಪ್ರಿಯಾಂಕಾ?; ಜಾತಿ ರಾಜಕಾರಣ ಮೀರಿ ಮತ ಸೆಳೆಯಲು ಹೊಸ ತಂತ್ರ

    | ರಾಘವ ಶರ್ಮ ನಿಡ್ಲೆ ನವದೆಹಲಿ

    1989ರ ಡಿಸೆಂಬರ್ 5. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರದ ಸಿಎಂ ಎನ್.ಡಿ. ತಿವಾರಿ ಅಧಿಕಾರಾವಧಿ ಅಂತ್ಯಗೊಂಡ ದಿನ. ಇದಾಗಿ 32 ವರ್ಷಗಳಲ್ಲಿ ಒಮ್ಮೆಯೂ ಕಾಂಗ್ರೆಸ್​ಗೆ ದೇಶದ ಅತಿದೊಡ್ಡ ರಾಜ್ಯದಲ್ಲಿ ಸ್ವಂತಬಲದ ಮೂಲಕ ಅಧಿಕಾರಕ್ಕೇರಲು ಸಾಧ್ಯವಾಗಿಲ್ಲ. ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ಮತ್ತು 2014ರ ನಂತರದಲ್ಲಿ ಬಿಜೆಪಿ ಅದ್ವಿತೀಯ ರಾಜಕೀಯ ನಿರ್ವಹಣೆ ಪರಿಣಾಮ ಕೈ ಪಡೆಗೆ ರಾಜ್ಯದಲ್ಲಿ ತಲೆ ಎತ್ತಲಾರದ ಸ್ಥಿತಿ ನಿರ್ವಣವಾಯಿತು.

    89ರಲ್ಲಿ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಮುಖ್ಯಮಂತ್ರಿಯಾಗುತ್ತಲೇ ಜಾತಿ ಮತ್ತು ಕೋಮು ರಾಜಕಾರಣ ಉತ್ತುಂಗಕ್ಕೇರಿದ್ದಲ್ಲದೆ, ಕಾಂಗ್ರೆಸ್​ನ ಸಾಂಪ್ರದಾಯಿಕ ಬ್ರಾಹ್ಮಣ, ಮುಸ್ಲಿಂ, ದಲಿತ ವೋಟ್​ಬ್ಯಾಂಕ್​ಗಳು ಸಮಾಜವಾದಿ, ಬಹುಜನ ಸಮಾಜವಾದಿ ಮತ್ತು ಬಿಜೆಪಿ ಕಡೆ ಮುಖ ಮಾಡಿದವು. 90ರ ದಶಕದ ಮಂಡಲ ಮತ್ತು ಕಮಂಡಲ ರಾಜಕಾರಣದ ಪರಿಣಾಮ ಕಾಂಗ್ರೆಸ್ ಚುನಾವಣಾ ರಾಜಕೀಯದಲ್ಲಿ ತೀವ್ರ ಹಿನ್ನಡೆ ಕಂಡಿತು. ರಾಜ್ಯದಲ್ಲಿ ಐವರು ಬ್ರಾಹ್ಮಣರನ್ನು ಮುಖ್ಯಮಂತ್ರಿ ಸ್ಥಾನಕ್ಕೇರಿಸಿದ ಹೆಗ್ಗಳಿಕೆ ಕಾಂಗ್ರೆಸ್​ಗಿದ್ದರೂ, ಈ ಸಮುದಾಯದ ಮತಗಳು ಬಿಎಸ್​ಪಿ ಮತ್ತು ಬಿಜೆಪಿ ಕಡೆ ವಾಲಿದವು.

    ಸಂಘಟನೆಯೇ ಕಳೆದುಹೋಗಿರುವ ರಾಜ್ಯದಲ್ಲಿ ಈಗ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ಗಾಂಧಿ 32 ವರ್ಷಗಳ ಬಳಿಕ ಹೊಸ ಸಂಚಲನ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಜಾತಿ ರಾಜಕಾರಣ ಮೀರಿ ಜನರನ್ನು (ಮುಖ್ಯವಾಗಿ ಮಹಿಳಾ ಮತವರ್ಗ) ಸೆಳೆಯಲು ನವೀನ ತಂತ್ರಗಾರಿಕೆ ಅನುಸರಿಸುತ್ತಿದ್ದಾರೆ. ಶೇ.40ರಷ್ಟು ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತೇವೆ ಎಂದು ಈಚಿಗೆ ಘೋಷಿಸಿದ್ದು ಇದಕ್ಕೊಂದು ಉದಾಹರಣೆ.

    2019ರ ಲೋಕಸಭೆ ಚುನಾವಣೆಯಲ್ಲಿ ಪೂರ್ವ ಉತ್ತರ ಪ್ರದೇಶ ಉಸ್ತುವಾರಿ ವಹಿಸಿಕೊಂಡ ಪ್ರಿಯಾಂಕಾ ಗಾಂಧಿ, ಈಗ ಇಡೀ ಚುನಾವಣೆ ಜವಾಬ್ದಾರಿ ಹೆಗಲೇರಿಸಿಕೊಂಡಿದ್ದಾರೆ. ಕಳೆದೆರಡು ವರ್ಷಗಳಿಂದ ರಾಜ್ಯ ಕಾಂಗ್ರೆಸ್ ಘಟಕವನ್ನು ಸರಿಪಡಿಸಲು ಯತ್ನಿಸಿರುವ ಅವರು, 500 ಸದಸ್ಯರ ರಾಜ್ಯ ಕಾರ್ಯಕಾರಿ ಸಮಿತಿಯನ್ನು 115 ಸದಸ್ಯರಿಗೆ ಇಳಿಸಿದ್ದಾರೆ. ಹಿಂದುಳಿದ ವರ್ಗದ ಅಜಯ್ ಕುಮಾರ್ ಲಲ್ಲು ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದ್ದಲ್ಲದೆ, ರಾಜ್ಯ ಕಾರ್ಯಕಾರಿಣಿಯಲ್ಲಿ ಜಾತಿ ಸಮತೋಲನ ಖಚಿತಪಡಿಸಿಕೊಳ್ಳಲು ಕ್ರಮ ಕೈಗೊಂಡಿದ್ದಾರೆ. 41 ಮೇಲ್ಜಾತಿ ನಾಯಕರು, 20 ಮುಸ್ಲಿಂ ಮುಖಂಡರು, 40 ಒಬಿಸಿ, 14 ದಲಿತರು ಮತ್ತು ಇತರ ಜಾತಿ ನಾಯಕರಿಗೆ ಸ್ಥಾನ ನೀಡಿದ್ದಾರೆ. 2017ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ್ದ ಬ್ರಾಹ್ಮಣ, ಠಾಕೂರ್ ಮತ್ತು ಕುರ್ವಿುಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ.

    ಚುನಾವಣೆ ಸ್ಪರ್ಧೆ ಬಗ್ಗೆ ಪ್ರಿಯಾಂಕಾ ಗುಟ್ಟು ಬಿಟ್ಟುಕೊಟ್ಟಿಲ್ಲ. 2019ರ ಲೋಕಸಭೆ ಚುನಾವಣೆಯಲ್ಲಿ ಕೇವಲ 1 ಲೋಕಸಭೆ ಸೀಟಿಗೆ ಕುಸಿದಿದ್ದ ಕಾಂಗ್ರೆಸ್, 2017ರ ವಿಧಾನಸಭೆ ಚುನಾವಣೆಯಲ್ಲಿ 7 ಕ್ಷೇತ್ರಗಳನ್ನಷ್ಟೇ ಗೆದ್ದಿತ್ತು. ನಾಯಕತ್ವದ ಬಿಕ್ಕಟ್ಟಿನಿಂದ ನರಳುತ್ತಿರುವ ಕಾಂಗ್ರೆಸ್​ಗೆ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಭರವಸೆದಾಯಕ ನಿರ್ವಹಣೆ ತೋರುವ ಅನಿವಾರ್ಯತೆ ಇದೆ. 2024ರ ಲೋಕಸಭೆ ಚುನಾವಣೆಗೆ ತಾಲೀಮು ನಡೆಸಲು ಮತ್ತು ಪ್ರಿಯಾಂಕಾ ಗಾಂಧಿ ನಾಯಕತ್ವದ ದೃಢತೆ ಸಾಬೀತುಪಡಿಸುವಲ್ಲಿ ಇದು ನಿರ್ಣಾಯಕ ಪಾತ್ರವಹಿಸಲಿದೆ.

    ಇನ್ನೂ ಯಾವುದೇ ಚುನಾವಣೆಗೆ ಸ್ಪರ್ಧಿಸಿಲ್ಲ…

    ರಾಜಕೀಯ ಹೋರಾಟಗಳಲ್ಲಿ ಭಾಗಿಯಾಗಿ ಗಮನಸೆಳೆದಿದ್ದರೂ, ಪ್ರಿಯಾಂಕಾ ಇನ್ನೂ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಉ.ಪ್ರ. ಚುನಾವಣೆಯಲ್ಲಿ ಕಣಕ್ಕಿಳಿದರೆ ಕಾರ್ಯಕರ್ತರ ಹುಮ್ಮಸ್ಸು ಹೆಚ್ಚುವುದರ ಜತೆಗೆ ಇಡೀ ರಾಜ್ಯ ರಾಜಕಾರಣದಲ್ಲಿ ಹೊಸ ಅಲೆ ಎಬ್ಬಿಸಲಿದೆ ಎನ್ನುವುದು ಕಾಂಗ್ರೆಸ್ ನಾಯಕರ ಅನಿಸಿಕೆ. 2019ರ ಲೋಕಸಭೆ ಚುನಾವಣೆಯಲ್ಲಿ ವಾರಾಣಸಿ ಕ್ಷೇತ್ರದಿಂದ ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸುತ್ತಾರೆ ಎನ್ನುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಅಂತಿಮ ಕ್ಷಣದಲ್ಲಿ ‘ನಾನು ಇಲ್ಲಿಂದ ಸ್ಪರ್ಧಿಸಲಾರೆ’ ಎಂದು ಹಿಂದೆ ಸರಿದರು. ಈ ನಿರ್ಧಾರ ಅಂದು ಇಡೀ ಕಾರ್ಯಕರ್ತ ವರ್ಗದ ಉತ್ಸಾಹಕ್ಕೆ ತಣ್ಣೀರೆರಚಿತ್ತು. ‘ಸೋಲು/ಗೆಲುವು ಏನೇ ಇರಲಿ, ನಾಯಕನಾದವನು ಮುನ್ನುಗ್ಗಬೇಕು. ಸುರಕ್ಷಿತ ಕ್ಷೇತ್ರ ಆಯ್ಕೆ ಮಾಡಿ ಗೆಲ್ಲುವುದಲ್ಲ. ನಂದಿಗ್ರಾಮ ಗೆಲುವು ಕಠಿಣ ಎಂದು ಗೊತ್ತಿದ್ದರೂ, ಮಮತಾ ಬ್ಯಾನರ್ಜಿ ರಿಸ್ಕ್ ತೆಗೆದುಕೊಂಡು ಹೋರಾಡಿದರು’ ಎಂದು ಕಾಂಗ್ರೆಸ್​ನ ಹಿರಿಯ ನಾಯಕರೊಬ್ಬರು ಅಭಿಪ್ರಾಯಪಡುತ್ತಾರೆ.

    ಮುಂಚೂಣಿಯಲ್ಲಿ ನಿಂತು ಹೋರಾಟ

    ಪ್ರಿಯಾಂಕಾ ಗಾಂಧಿಯವರನ್ನು ಸ್ಥಳೀಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ರಾಜ್ಯದ ಕಾಯಂ ನಿವಾಸಿಯನ್ನಾಗಿ ನೋಡಬಯಸು ತ್ತಾರೆಯೇ ವಿನಾ ಅಪರೂಪದ ಅತಿಥಿಯಾಗಿ ಅಲ್ಲ. ಆ ಕಾರಣಕ್ಕಾದರೂ ಅವರು ಸ್ಪರ್ಧಿಸಬೇಕು. 2024ರ ಲೋಕಸಭೆ ಚುನಾವಣೆ ದೃಷ್ಟಿಯಿಂದ ಪ್ರಿಯಾಂಕಾ ಈ ವಾಸ್ತವ ಅರ್ಥಮಾಡಿಕೊಳ್ಳಬೇಕು ಎನ್ನುವುದು ಕಾಂಗ್ರೆಸ್ಸಿಗರ ಅಂಬೋಣ. ಲಖಿಂಪುರ ರೈತರ ಹತ್ಯೆ ಪ್ರಕರಣ, ಸೋನ್​ಭದ್ರಾದಲ್ಲಿ ಮಹಿಳೆಯೊಬ್ಬರ ಅತ್ಯಾಚಾರ ಮತ್ತು ಹತ್ಯೆ, ಹಾಥರಸ್​ನಲ್ಲಿ 19 ವರ್ಷದ ದಲಿತ ಯುವತಿ ಅತ್ಯಾಚಾರ… ಹೀಗೆ ದೇಶವ್ಯಾಪಿ ಚರ್ಚೆಗೀಡಾದ ಘಟನೆಗಳಲ್ಲಿ ಆಡಳಿತಾರೂಢ ಪಕ್ಷದ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವ ಪ್ರಿಯಾಂಕಾ, ಜಾತಿ ಮತ್ತು ಕೋಮು ರಾಜಕಾರಣ ಬಲವಾಗಿ ಬೇರೂರಿರುವ ರಾಜ್ಯದಲ್ಲಿ ಅದನ್ನೂ ಮೀರಿ ಜನ-ಮನ ಸೆಳೆವ ತಂತ್ರ ಹೆಣೆಯುತ್ತಿರುವುದೂ ಗಮನಾರ್ಹ ಅಂಶ.

    ಕಾಂಗ್ರೆಸ್ ಪ್ರಣಾಳಿಕೆ ಭರ್ಜರಿ ಭರವಸೆ

    ಉತ್ತರ ಪ್ರದೇಶ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆಯನ್ನು ಶನಿವಾರ ಬಿಡುಗಡೆ ಮಾಡಿದ್ದು, ಭರ್ಜರಿ ಕೊಡುಗೆಗಳನ್ನು ಘೋಷಣೆ ಮಾಡಿದೆ. ಇದೇ ವೇಳೆ ನಾಯಕಿ ಪ್ರಿಯಾಂಕಾ ಗಾಂಧಿ ಪ್ರತಿಜ್ಞಾ ರ್ಯಾಲಿಗೂ ಚಾಲನೆ ನೀಡಿದರು. ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಇ-ಸ್ಕೂಟರ್, ಸ್ಮಾರ್ಟ್ ಫೋನ್​ಗಳನ್ನು ನೀಡುವ ಮಹತ್ವದ ಘೋಷಣೆಯನ್ನು ಮಾಡಲಾಗಿದೆ. ಜತೆಗೆ ಕೃಷಿ ಸಾಲ ಮನ್ನಾ, ಬಡ ಕುಟುಂಬಗಳಿಗೆ ವಾರ್ಷಿಕ 25 ಸಾವಿರ ರೂ. ನೆರವು ನೀಡಿಕೆ, ವಿದ್ಯುತ್ ಬಿಲ್​ನಲ್ಲಿ ಶೇ. 50 ಇಳಿಕೆ, ಬಾಕಿ ಇರುವ ಬಿಲ್​ಗಳ ಮೊತ್ತ ಸಂಪೂರ್ಣ ಮನ್ನಾ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಇದಲ್ಲದೇ ಯುವಕರನ್ನು ಆಕರ್ಷಿಸುವ ಉದ್ದೇಶದಿಂದ 20 ಲಕ್ಷ ಸರ್ಕಾರಿ ಉದ್ಯೋಗ, ಭತ್ತ ಹಾಗೂ ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ಏರಿಕೆ ಮಾಡುವ ಭರವಸೆ ನೀಡಿದೆ. ಚುನವಣೆಯಲ್ಲಿ ಶೇ. 40 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಬಗ್ಗೆ ಈಗಾಗಲೇ ಪ್ರಿಯಾಂಕಾ ಗಾಂಧಿ ಘೋಷಣೆ ಮಾಡಿರುವುದು ಕುತೂಹಲ ಮೂಡಿಸಿದೆ.

    ಅಭ್ಯರ್ಥಿಗಳ ಆಯ್ಕೆ ಶುರು: ಚುನಾವಣೆ ದಿನಾಂಕ ಘೋಷಣೆಯಾಗುವ ಮುನ್ನವೇ ಚಟುವಟಿಕೆ ಚುರುಕುಗೊಳಿಸಿರುವ ಕಾಂಗ್ರೆಸ್, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಸಿದ್ಧತೆ ನಡೆಸಿದೆ. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ದೆಹಲಿ ನಿವಾಸದಲ್ಲಿ ಮೊದಲ ಸುತ್ತಿನ ಸಭೆ ನಡೆದಿದೆ. ತಳಮಟ್ಟದಿಂದ ಕಾರ್ಯಕರ್ತರನ್ನು ಸಂಘಟಿಸಿ, ಚುನಾವಣೆಗೆ ಸಿದ್ಧಗೊಳಿಸಲು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts