

ದಾವಣಗೆರೆ: ಪೊಲೀಸ್ ಕಾನ್ಸ್‌ಟೇಬಲ್‌ವೊಬ್ಬರು ರಸ್ತೆ ಗುಂಡಿಗಳನ್ನು ಜಲ್ಲಿಕಲ್ಲುಗಳಿಂದ ತಾತ್ಕಾಲಿಕವಾಗಿ ಮುಚ್ಚುತ್ತಿರುವ ದೃಶ್ಯವನ್ನು ಸಮೀಪದಲ್ಲಿದ್ದ ಸಾರ್ವಜನಿಕರು ವಿಡಿಯೋ ಮಾಡಿದ್ದು, ಆ ವಿಡಿಯೋ ಇದೀಗ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬೆಣ್ಣೆನಗರಿಯ ಗುಂಡಿ ಸರ್ಕಲ್‌ನಲ್ಲಿ ಸಂಜೆಯಾಗುತ್ತಿದ್ದಂತೆಯೇ ವಾಹನ ದಟ್ಟಣೆ ಜಾಸ್ತಿಯಾಗುತ್ತದೆ. ಈ ಸಂದರ್ಭದಲ್ಲಿ ಸರ್ಕಲ್ ಸುತ್ತು ಹೊಡೆದು ಬರುವ ವಾಹನ ಸವಾರರಿಗೆ ಅಲ್ಲಿದ್ದ ರಸ್ತೆ ಗುಂಡಿಯೊಂದು ತೀವ್ರ ಅಡಚಣೆಯಾಗಿತ್ತು. ಹಲವಾರು ಸವಾರರು ಅಲ್ಲಿ ಆಯ ತಪ್ಪಿ ಬೀಳುವ ಸಂದರ್ಭವೂ ಎದುರಾಗಿತ್ತು.
ಅಲ್ಲೇ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ಸ್‌ಟೇಬಲ್ ಎಸ್. ಹೇಮಣ್ಣನವರು ಇದನ್ನು ಗಮನಿಸಿದ್ದರು. ಸ್ಥಳೀಯ ಸಂಸ್ಥೆಯ ಸಿಬ್ಬಂದಿಗೆ ಈ ಬಗ್ಗೆ ಸಾಕಷ್ಟು ಬಾರಿ ಮೌಖಿಕವಾಗಿ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಇದರಿಂದ ಬೇಸತ್ತುಹೋದ ಪೊಲೀಸ್ ಕಾನ್ಸ್‌ಟೇಬಲ್ ತಾವೇ ಸಮೀಪದಲ್ಲಿದ್ದ ಜಲ್ಲಿಕಲ್ಲುಗಳನ್ನು ಹೊತ್ತು ತಂದು ಆ ರಸ್ತೆ ಗುಂಡಿಗೆ ತುಂಬಿ, ವಾಹನ ಸವಾರರಿಗೆ ಆಗಬಹುದಾದ ತೊಂದರೆಯನ್ನು ತಾತ್ಕಾಲಿಕವಾಗಿ ಶಮನ ಮಾಡಿದ್ದಾರೆ. ಅಲ್ಲದೆ ಆ ಗುಂಡಿಯ ಬಳಿ ಅಡ್ಡಗಟ್ಟೆಯನ್ನೂ ಇರಿಸಿದ್ದಾರೆ.
ಪೊಲೀಸ್ ಪೇದೆಯ ಈ ಕಾರ್ಯವನ್ನು ಸಮೀಪದಲ್ಲೇ ಇದ್ದ ಸಾರ್ವಜನಿಕರೊಬ್ಬರು ಗಮನಿಸಿ ತಮ್ಮ ಮೊಬೈಲ್ ಫೋನ್‌ನಲ್ಲಿ ಸೆರೆ ಹಿಡಿದಿದ್ದಾರೆ. ಆ ವಿಡಿಯೋವನ್ನು ತಮ್ಮ ಸಂಬಂಧಿಕರು ಮತ್ತು ಸ್ನೇಹಿತರಿಗೆ ಷೇರ್ ಮಾಡಿದ್ದಾರೆ. ಅದೇ ವಿಡಿಯೋ ಇದೀಗ ವೈರಲ್ ಆಗಿದೆ.