More

    ಎಂಟು ಮಂಡಲ ಮಹಾಮೃತ್ಯುಂಜಯ ಹೋಮ! ಕರೊನಾ ನಿವಾರಣೆಗೆ ರಾಣೆಬೆನ್ನೂರಿನಲ್ಲಿ ದಾಖಲೆ ಪೂಜೆ

    ಕಳೆದ ಎರಡು ವರ್ಷಗಳಿಂದ ಇಡೀ ಜಗತ್ತನ್ನು ಕಾಡುತ್ತಿರುವ ಕರೊನಾ ಈಗೇನೋ ಸ್ವಲ್ಪ ಶಾಂತವಾದಂತೆ ಕಾಣುತ್ತಿದೆ. ಆದರೆ ಮನುಷ್ಯನ ಬದುಕಿನ ದಿಕ್ಕನ್ನೇ ಬದಲಿಸಿ, ಪರಸ್ಪರ ನಂಬಿಕೆ, ಪ್ರೀತಿ-ಬಾಂಧವ್ಯವನ್ನೇ ಮರೆಯಾಗಿಸಿದ ಮೃತ್ಯುವಿನ ಪ್ರತಿರೂಪದಂತೆ ಬಂದೆ ರಗಿದ್ದ ಕರೊನಾಕ್ಕೆ ಶಾಪ ಹಾಕದವರೇ ಇಲ್ಲ. ಕರೊನಾ ನಿವಾರಣೆಗಾಗಿ ನಡೆಯದ ಪೂಜೆಗಳಿಲ್ಲ; ಮಾಡದ ಪ್ರಾರ್ಥನೆಗಳಿಲ್ಲ. ಅಂತಹ ಎಲ್ಲ ಪೂಜೆ- ಪ್ರಾರ್ಥನೆಗಳಲ್ಲೇ ಹೊಸ ದಾಖಲೆ ಬರೆದ ಕಾರ್ಯಕ್ರಮ ರಾಣೆಬೆನ್ನೂರಿನಲ್ಲಿ ನಡೆದ 8 ಮಂಡಲ ಮಹಾ ಮೃತ್ಯುಂಜಯ ಹೋಮ.

    | ಪ್ರಶಾಂತ್ ರಿಪ್ಪನ್​ಪೇಟೆ

    ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಗಂಗಾಪುರ ರಸ್ತೆಯಲ್ಲಿರುವ ನಾಡಿನ ಏಕೈಕ ಬಯಲು ಶನೈಶ್ಚರ ಸ್ವಾಮಿ ದೇವಾಲಯವು ಕರ್ನಾಟಕದ ಶನಿಶಿಂಗಣಾಪುರ ಎಂದೇ ಪ್ರಸಿದ್ಧವಾಗಿದೆ. ಈ ಕ್ಷೇತ್ರದ ಸಂಸ್ಥಾಪಕರಾದ ಶ್ರೀ ಷ.ಬ್ರ. ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು ಮಾಡಿರುವ ಹೊಸ ದಾಖಲೆ ಎಂಟು ಮಂಡಲ ಮಹಾ ಮೃತ್ಯುಂಜಯ ಜಪಯಜ್ಞ. ಪ್ರತಿವರ್ಷ ಕಾರ್ತಿಕ ಕೊನೇ ಶನಿವಾರ ರಾಣೆಬೆನ್ನೂರು ಶನೈಶ್ಚರ ಸ್ವಾಮಿ ಸನ್ನಿಧಿಯಲ್ಲಿ ಲಕ್ಷ ದೀಪೋತ್ಸವವು ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ. ಆದರೆ ಕಳೆದ ವರ್ಷ ಕರೊನಾ ರುದ್ರನರ್ತನದಿಂದ ಕಾರ್ತಿಕೋತ್ಸವವನ್ನು ರದ್ದು ಮಾಡಲಾಗಿತ್ತು.

    ಎಂಟು ಮಂಡಲ ಮಹಾಮೃತ್ಯುಂಜಯ ಹೋಮ! ಕರೊನಾ ನಿವಾರಣೆಗೆ ರಾಣೆಬೆನ್ನೂರಿನಲ್ಲಿ ದಾಖಲೆ ಪೂಜೆ

    ಆ ಸಂದರ್ಭದಲ್ಲಿ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು ಜಗತ್ತಿಗೆ ಬಂದಿರುವ ಈ ಕರೊನಾ ಭೀತಿ ಶಾಶ್ವತವಾಗಿ ನಿವಾರಣೆಯಾಗಬೇಕೆಂಬ ಸಂಕಲ್ಪದೊಂದಿಗೆ ವರ್ಷ ಪೂರ್ತಿ ನಿರಂತರ ಮಹಾಮೃತ್ಯುಂಜಯ ಜಪ ಮತ್ತು ಯಜ್ಞ ಮಾಡಲು ಆರಂಭಿಸಿದರು. ಹೆಸರೇ ಹೇಳುವಂತೆ ಮೃತ್ಯುವನ್ನು ಜಯಿಸಲು ಇರುವ ಸುಲಭ ಮಾರ್ಗ ಮೃತ್ಯುಂಜಯ ಮಹಾಮಂತ್ರ. ಕರೊನಾದಿಂದ ಅಪಾರ ಪ್ರಮಾಣದ ಸಾವು ನೋವು ಉಂಟಾಗಿ ವಯೋ ಭೇದವಿಲ್ಲದೆ ಅಪಮೃತ್ಯುವಿಗೆ ತುತ್ತಾಗುವುದನ್ನು ಕಂಡ ಶ್ರೀಗಳು ಈ ಬೃಹತ್ ಕಾರ್ಯಕ್ರಮವನ್ನು ಸಂಯೋಜಿಸಿ ಯಶಸ್ವಿಯಾಗಿ ನಡೆಸಿದ್ದು, ಇದೀಗ ಪರಿಸಮಾಪ್ತಿಯ ಹಂತಕ್ಕೆ ಬಂದಿದೆ. ಭಗವಂತನ ಕೃಪೆ ಎಂಬಂತೆ ಸದ್ಯ ಕರೊನಾ ಭೀತಿಯೂ ತಗ್ಗಿರುವುದು ಪೂಜೆಗೆ ದೊರೆತ ಫಲ ಎಂದೇ ಬಣ್ಣಿಸಲಾಗುತ್ತಿದೆ.  

    ಕೋಟಿ ಜಪ, ನಿತ್ಯ ದೀಪೋತ್ಸವದ ದಾಖಲೆ: ಸಾಮಾನ್ಯವಾಗಿ ಕಾರ್ತಿಕ ಮಾಸದಲ್ಲಿ ದೀಪೋತ್ಸವ ನಡೆಯುವುದು ಸಹಜ. ಆದರೆ ರಾಣೆಬೆನ್ನೂರು ಶನೈಶ್ಚರ ಸ್ವಾಮಿ ಕ್ಷೇತ್ರದಲ್ಲಿ ಕಳೆದ ಎರಡು ಮಹಾಮಂಡಲದ ಒಂದು ವರ್ಷ ಪೂರ್ತಿ ದೀಪೋತ್ಸವ ನೆರವೇರಿರುವುದು ವಿಶೇಷ. 16 ಲಕ್ಷ ಮಹಾಮೃತ್ಯುಂಜಯ ಜಪ ಯಜ್ಞದ ಜೊತೆಗೆ, 6 ಲಕ್ಷ ಶ್ರೀದುರ್ಗಾ ಮೂಲಮಂತ್ರ ಜಪ ಯಜ್ಞ, 9 ಲಕ್ಷ ನವಾಕ್ಷರಿ ಮಂತ್ರ ಜಪ ಹೋಮ, 23 ಲಕ್ಷ ಶನೈಶ್ಚರ ಮೂಲಮಂತ್ರ ಜಪ ಹೋಮ, 1 ಕೋಟಿ ಪಂಚಾಕ್ಷರಿ ಮಹಾಮಂತ್ರ ಜಪ ಹೋಮ, 1 ಕೋಟಿ ಲಲಿತಾ ಸಹಸ್ರನಾಮ ಪೂರ್ವಕ ಶ್ರೀಚಕ್ರಕ್ಕೆ ಕುಂಕುಮಾರ್ಚನೆಯ ಜೊತೆಗೆ ನಿತ್ಯ ದೀಪದುರ್ಗಾ ನಮಸ್ಕಾರ ಪೂಜೆ, ಅತಿರುದ್ರ ಮಹಾಭಿಷೇಕ, ಗೋಪೂಜೆ ಮತ್ತು ಸಂಗೀತಯುಕ್ತ ಮಹಾಮಂಗಳಾರತಿ ಹೀಗೆ ಎರಡು ಮಹಾಮಂಡಲಗಳ ಕಾಲ ನಿರಂತರ ಪೂಜಾ ಕಾರ್ಯಗಳನ್ನು ನಡೆಸಲಾಗಿದೆ.

    2020ರ ನ. 11ರಂದು ಉಜ್ಜಯಿನಿ ಸದ್ಧರ್ಮ ಪೀಠದಿಂದ ಪರಮ ತಪಸ್ವಿ ಲಿಂಗೈಕ್ಯ ಸಿದ್ಧಲಿಂಗ ಜಗದ್ಗುರುಗಳ ಕರ್ತೃ ಗದ್ದುಗೆಯಿಂದ ತಂದಿರುವ ನಂದಾದೀಪವು ಅಖಂಡ ಮಂಡಲ ಇಂದಿಗೂ ಪ್ರಜ್ವಲಿಸುತ್ತಿದೆ. ಈ ಎಲ್ಲ ಪೂಜೆಗಳಿಗೆ ಇದುವರೆಗೆ 5 ಟನ್ ಶುದ್ಧ ಆಕಳ ತುಪ್ಪ, 5 ಸಾವಿರ ಲೀಟರ್ ಆಕಳ ಹಾಲು, 50 ಕ್ವಿಂಟಾಲ್ ಬೆಲ್ಲದ ಅನ್ನ, 5 ಸಾವಿರ ದರ್ಬೆ ಕಟ್ಟು, 5 ಸಾವಿರ ಗರಿಕೆ ಕಟ್ಟು, 5 ಟನ್ ಅಮೃತಬಳ್ಳಿ, 1 ಟನ್ ಅರಳಿ ಕಟ್ಟಿಗೆ ಸೇರಿದಂತೆ ವಿವಿಧ ಪೂಜಾ ಸಾಮಾಗ್ರಿಗಳನ್ನು ಬಳಸಲಾಗಿದೆ. 400 ಗ್ರಾಮಗಳ ಜನರು ಪೂಜಾಸೇವೆಯನ್ನು ಮಾಡಿದ್ದು, ಕರ್ನಾಟಕ, ಆಂಧ್ರ ಮತ್ತು ಮಹಾರಾಷ್ಟ್ರದ ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದಾರೆ.

    2 ಮಹಾ ಮಂಡಲ ಜಪಯಜ್ಞ: ಯಾವುದೇ ಪೂಜೆಗಳಿದ್ದರೂ ಅವುಗಳನ್ನು ಮಾಡುವಾಗ ಮೊದಲೇ ಕಾಲಮಿತಿಯನ್ನು ನಿರ್ಧರಿಸಿ ಮಾಡಲಾಗುತ್ತದೆ. ಸಾಮಾನ್ಯವಾಗಿ ನಿತ್ಯ ಮಾಡುವುದು ಒಂದು ದಿನದ ಪೂಜೆಯಾದರೆ; ಒಂದು ವಾರ ಮಾಡುವ ಪೂಜೆಯನ್ನು ಸಪ್ತಾಹ ಪೂಜೆ ಎಂತಲೂ, ಎರಡು ವಾರ ಮಾಡುವ ಪೂಜೆಯನ್ನು ಪಕ್ಷಪೂಜೆ ಎಂತಲೂ; ಒಂದು ತಿಂಗಳು ಮಾಡುವ ಪೂಜೆಗೆ ಮಾಸಪೂಜೆ ಎಂತಲೂ ಕರೆಯಲಾಗುತ್ತದೆ. ಅದೇ ರೀತಿ 48 ದಿನ ಮಾಡುವ ಪೂಜೆಗೆ ಮಂಡಲ ಪೂಜೆ ಎಂದು ಕರೆಯಲಾಗುತ್ತದೆ. ಅಂತಹ 48 ದಿನಗಳ ನಾಲ್ಕು ಮಂಡಲ ಪೂಜೆಯನ್ನು ಮಹಾಮಂಡಲ ಪೂಜೆ ಎಂದು ಶಾಸ್ತ್ರದಲ್ಲಿ ವಿವರಿಸಲಾಗಿದೆ.

    ಎಂಟು ಮಂಡಲ ಮಹಾಮೃತ್ಯುಂಜಯ ಹೋಮ! ಕರೊನಾ ನಿವಾರಣೆಗೆ ರಾಣೆಬೆನ್ನೂರಿನಲ್ಲಿ ದಾಖಲೆ ಪೂಜೆ

    ಅಂತೆಯೇ ರಾಣೆಬೆನ್ನೂರು ಹಿರೇಮಠದಲ್ಲಿ 48 ದಿನಗಳ ಎಂಟು ಮಂಡಲದ, ಎರಡು ಮಹಾಮಂಡಲ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಒಟ್ಟು 384 ದಿನಗಳ ಈ ಸುದೀರ್ಘ ಅವಧಿಯಲ್ಲಿ ನಿರಂತರ ಮಹಾಮೃತ್ಯುಂಜಯ ಜಪ ಮತ್ತು ಯಾಗವನ್ನು ಮಾಡಲಾಗಿದೆ. ಆಗಮಗಳಲ್ಲಿ ಉಲ್ಲೇಖಗೊಂಡಿರುವಂತೆ ಯಾವುದೇ ಮಂತ್ರವನ್ನು ಜಪ ಮಾಡಿದರೂ 100 ಜಪಕ್ಕೆ ಒಂದರಂತೆ ಹವಿಸ್ಸು ನೀಡಿದಾಗ ಮಾತ್ರ ಆ ಮಂತ್ರಜಪದ ಫಲ ದೊರೆಯುತ್ತದೆ. ಅದರಂತೆ ವಿವಿಧ ಮಂತ್ರಗಳ ಜಪದ ಜೊತೆಗೆ ಆಯಾ ಮಂತ್ರಗಳ ಯಾಗವನ್ನು ಸಹ ಮಾಡಲಾಗಿದೆ. ಮಳೆ, ಗಾಳಿ, ಚಳಿ ಯಾವುದರಿಂದಲೂ ಅಡ್ಡಿಯಾಗದಂತೆ ಈ ಪೂಜಾ ಕಾರ್ಯಕ್ರಮಕ್ಕಾಗಿಯೇ ಬೃಹತ್ ಯಾಗ ಮಂಟಪವನ್ನು ನಿರ್ವಿುಸಲಾಗಿದ್ದು, ಮೃತ್ಯುಂಜಯಸ್ವಾಮಿ ಹಾಗೂ ಶ್ರೀಚಕ್ರ ಸಹಿತ ದುರ್ಗಾದೇವಿಯ ಮೂರ್ತಿಯನ್ನು ಸ್ಥಾಪಿಸಲಾಗಿದೆ.

    ಮಹಾಮಂಗಲ ಕಾರ್ಯಕ್ರಮ: ಕಳೆದ ಒಂದು ವರ್ಷದಿಂದ ನಡೆದುಕೊಂಡು ಬಂದಿರುವ ಈ ಬೃಹತ್ ಧಾರ್ವಿುಕ ಕಾರ್ಯಕ್ರಮವು ಇದೀಗ ಮಹಾಮಂಗಲಗೊಳ್ಳುತ್ತಿದೆ. ಇದೇ ನ. 29ರಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಡಿ. 4ರ ಕಾರ್ತಿಕ ಅಮಾವಾಸ್ಯೆಯಂದು ಸಂಪನ್ನಗೊಳ್ಳಲಿದೆ. ನ. 29ರಂದು ತುಂಗಭದ್ರಾ ನದಿಯ ತಟದಲ್ಲಿ ಗಂಗಾಪೂಜೆಯೊಂದಿಗೆ ಆರಂಭವಾಗಲಿದೆ ಈ ಕಾರ್ಯಕ್ರಮ. ನ. 30ಕ್ಕೆ ವೀರಭದ್ರಸ್ವಾಮಿಯ ಗುಗ್ಗುಳ ಹಾಗೂ ಭದ್ರಕಾಳಿ ಸಮೇತ ವೀರಭದ್ರೇಶ್ವರ ಕಲ್ಯಾಣ ಮಹೋತ್ಸವ ನಡೆಯಲಿದೆ. ಡಿ. 1ರಂದು ಗೋ ಮಂಗಲ ಯಾತ್ರೆ, ರೈತ ಚೈತನ್ಯ ಜ್ಯೋತಿಯಾತ್ರೆ ಹಾಗೂ ಕೃಷಿಮೇಳವನ್ನು ಆಯೋಜಿಸಲಾಗಿದೆ. ಡಿ. 2ರಂದು 384 ದಿನಗಳ ಮಹಾಮಂಡಲ ಪೂಜೆಯ ಮಂಗಲ ಮಹೋತ್ಸವ ನಡೆಯಲಿದೆ.

    ಡಿ. 3ರಂದು ಉಜ್ಜಯಿನಿ ಜಗದ್ಗುರುಗಳ ಸಾನಿಧ್ಯದಲ್ಲಿ ಮಹಾಮಂಡಲ ಪೂಜೆಯ ಪ್ರತೀಕವಾಗಿ 384 ಮುತೆôದೆಯರಿಗೆ ಉಡಿ ತುಂಬುವ ಹಾಗೂ ಮಾತೃದೀಪ್ತಿ ಪ್ರಶಸ್ತಿ ಪ್ರದಾನ ಹಾಗೂ ಮಾತೃಸಂಗಮ ಸಮಾವೇಶ ನಡೆಯಲಿದೆ. ಡಿ. 4ರಂದು ಬೆಳಗ್ಗೆ ಶನೈಶ್ಚರ ಸ್ವಾಮಿಗೆ ವಿವಿಧ ಅಭಿಷೇಕಗಳೊಂದಿಗೆ ರಾಜೋಪಚಾರ ಪೂಜೆ ಮತ್ತು ಶನೈಶ್ಚರ ಮಹಾಯಾಗ ಹಾಗೂ ಶಿವಪಂಚಾಕ್ಷರಿ ಯಜ್ಞದ ಪೂರ್ಣಾಹುತಿ ನಡೆಯಲಿದೆ. ಅಂದು ಸಂಜೆ ಶ್ರೀ ರಂಭಾಪುರಿ ಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿ 64 ಶ್ರೀಗಳ ಮಂಟಪ ಪೂಜೆ ನೆರವೇರಲಿದ್ದು, ನಂತರ ಮನುಕುಲ ಸದ್ಭಾವನಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts