

ಚಾಮರಾಜನಗರ: ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ಮಂದಿ ಸಾವಿಗೀಡಾದ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ವೈದ್ಯಕೀಯ ಅವ್ಯವಸ್ಥೆಗೆ ಸಾಕ್ಷಿಯಾಗಿ ಭಾರಿ ಚರ್ಚೆಗೆ ಗ್ರಾಸವಾದ ಈ ಘಟನೆಯನ್ನು ಕಣ್ಣಾರೆ ಕಂಡ ವ್ಯಕ್ತಿಯೊಬ್ಬ ಕೆಲ ಸ್ಫೋಟಕ ಮಾಹಿತಿಯನ್ನು ನೀಡಿದ್ದಾನೆ.
ಸೋಂಕಿತರು ಮೃತಪಡುವುದನ್ನು ಕಣ್ಣಾರೆ ಕಂಡು ಕಳೆದ ಸೋಮವಾರ ಬೆಳ್ಳಂಬೆಳ್ಳಗೆ ಆಸ್ಪತ್ರೆಯಿಂದ ಓಡಿಹೋದ ಕರೊನಾ ರೋಗಿ ದುರಂತದ ಕರಾಳತೆಯನ್ನು ದಿಗ್ವಿಜಯ ನ್ಯೂಸ್ನಲ್ಲಿ ಬಿಚ್ಚಿಟ್ಟಿದ್ದಾನೆ.
ಭಾನುವಾರ ರಾತ್ರಿ 11.30ಕ್ಕೆ ಆಕ್ಸಿಜನ್ ಕೊರತೆ ಎದುರಾಯಿತು. ಸೋಂಕಿತರ ಚೀರಾಟ ಹಾಗೂ ನರಳಾಟ ಹೆಚ್ಚಾಯ್ತು. ನನ್ನ ಕಣ್ಣ ಮುಂದೆಯೇ ಸುಮಾರು 30 ರಿಂದ 40 ಮಂದಿ ಸತ್ತರು ಎಂದು ತಿಳಿಸಿದ್ದಾನೆ.
ನಾನು ಆಸ್ಪತ್ರೆಯ ಕೆಳಮಹಡಿಯಲ್ಲಿ ದಾಖಲಾಗಿದ್ದೆ. ಈ ಎಲ್ಲಾ ದೃಶ್ಯಗಳನ್ನು ಕಂಡು ಆಸ್ಪತ್ರೆಯಿಂದ ಓಡಿಹೋದೆ. ಸದ್ಯ ತೋಟದ ಮನೆಯಲ್ಲಿಯೇ ಇದ್ದೇನೆ. ನೀವು ಗುಣಮುಖರಾಗಿದ್ದೀರಿ ಎಂದು ಭಾನುವಾರ ರಾತ್ರಿ ತಿಳಿಸಿದ್ರು. ಅಲ್ಲೆ ಇದ್ರೆ ನಾನು ಸಹ ಸತ್ತು ಹೋಗುತ್ತೇನೆ ಎಂಬ ಭಯದಿಂದ ಆಸ್ಪತ್ರೆಯಿಂದ ಕಾಲ್ಕಿತ್ತೆ ಎಂದು ಪ್ರತ್ಯಕ್ಷದರ್ಶಿ ಹೇಳಿದರು.
ನನಗೆ ಈಗಲು ಸಾಕಷ್ಟು ಸುಸ್ತಾಗ್ತಿದೆ. ಈವರೆಗೆ ಆಸ್ಪತ್ರೆಯ ಯಾವೊಬ್ಬ ವೈದ್ಯರು ಸಹ ನನ್ನನ್ನು ಸಂಪರ್ಕಿಸಿಲ್ಲ ಎನ್ನುತ್ತಾ ಭಾನುವಾರ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದ ದುರಂತ ಘಟನೆಯ ಕರಾಳತೆಯನ್ನು ಸೋಂಕಿತ ಬಿಚ್ಚಿಟ್ಟಿದ್ದಾರೆ. (ದಿಗ್ವಿಜಯ ನ್ಯೂಸ್)