More

    ಚಾಮರಾಜನಗರ ಆಕ್ಸಿಜನ್​ ದುರಂತ: ರಹಸ್ಯ ಬಿಚ್ಚಿಟ್ಟ ಅಧಿಕಾರಿಗಳ ವಾಟ್ಸ್​ಆ್ಯಪ್​ ಗ್ರೂಪ್​ ಚಾಟಿಂಗ್​!

    ಚಾಮರಾಜನಗರ: ಆಕ್ಸಿಜನ್​ ಕೊರತೆಯಿಂದ ಚಾಮರಾಜನಗರದಲ್ಲಿ 24 ಮಂದಿ ಸಾವಿಗೀಡಾದ ಘಟನೆ ದೇಶಾದ್ಯಂತ ಭಾರಿ ಸುದ್ದಿಯಾಗಿದ್ದು, ಪ್ರಕರಣದ ತನಿಖೆಗೆ ಕೆಎಸ್​ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಅವರನ್ನು ಸರ್ಕಾರ ವಿಚಾರಣಾಧಿಕಾರಿಯಾಗಿ ನೇಮಿಸಿದೆ.

    ಇಂದಿನಿಂದಲೇ ತನಿಖೆ ಆರಂಭವಾಗಿದ್ದು, ಇದರ ನಡುವೆ ಚಾಮರಾಜನಗರ ಜಿಲ್ಲಾಡಳಿತದ ಅಧಿಕಾರಿಗಳು ಆಕ್ಸಿಜನ್ ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ ನಡೆಸಿರುವ ಚಾಟಿಂಗ್ ಪ್ರಕರಣಕ್ಕೆ ಹೊಸ ತಿರುವು ಲಕ್ಷಣಗಳು ಕಾಣಿಸುತ್ತಿವೆ.

    ಆಕ್ಸಿಜನ್ ತರಿಸುವ ಉಸ್ತುವಾರಿ ಹೊತ್ತ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದು, ಮೈಸೂರು ಡಿಸಿ ರೋಹಿಣಿ ಸಿಂಧೂರಿ ಚಾಮರಾಜ ನಗರಕ್ಕೆ ಆಕ್ಸಿಜನ್ ಪೊರೈಸುವ ವಿಚಾರಕ್ಕೆ ತಕರಾರು ಮಾಡುತ್ತಿದ್ದಾರೆ ಎಂದು ಚಾಟ್​ ಮಾಡಿರುವುದು ಭಾರಿ ಕುತೂಹಲ ಮೂಡಿಸಿದೆ. ಏಪ್ರಿಲ್​ 27ರಂದೇ ಸಭೆ ನಡೆದಿದ್ದು, ಆಕ್ಸಿಜನ್​ ಪೂರೈಕೆಗೆ ಡಿಸಿ ರೋಹಿಣಿ ಸಿಂಧೂರಿ ಅವರು ಆಕ್ಷೇಪ ವ್ಯಕ್ತಪಡಿಸಿರುವುದರ ಬಗ್ಗೆ ಅಧಿಕಾರಿಯೊಬ್ಬರು ಉಲ್ಲೇಖಿಸಿದ್ದಾರೆ. ಘಟನೆ ನಡೆಯುವ 4 ದಿನಗಳಿಗೂ ಮುಂಚೆಯೇ ಆಕ್ಸಿಜನ್​ ಕೊರತೆಯ ಬಗ್ಗೆ ಹಾಗೂ ರೋಹಿಣಿ ಸಿಂಧೂರಿ ಸ್ಪಂದಿಸದ ಬಗ್ಗೆ ತಿಳಿದಿದ್ದರೂ ಯಾರೋಬ್ಬರು ಸರ್ಕಾರದ ಗಮನಕ್ಕೆ ತಂದಿಲ್ಲ. ಈ ಪ್ರಕರಣದಲ್ಲಿ ಮೈಸೂರಿ ಡಿಸಿ ಮಾತ್ರವಲ್ಲದೆ, ಚಾಮರಾಜನಗರ ಅಧಿಕಾರಿಗಳ ನಿರ್ಲಕ್ಷ್ಯವು ಎದ್ದು ಕಾಣುತ್ತಿದೆ. ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರೆ, ಬಹುಶಃ 24 ಮಂದಿಯ ಜೀವ ಉಳಿಯುತ್ತಿತ್ತೇನೋ? ಸಂದಿಗ್ಧ ಸಮಯದಲ್ಲಿ ತುಂಬಾ ಎಚ್ಚರಿಕೆ ವಹಿಸಬೇಕಾದ ಉನ್ನತ ಅಧಿಕಾರಿಗಳೇ ಜವಬ್ದಾರಿ ಮರೆತು ಬೇಜಾವಬ್ದಾರಿಯಿಂದ ವರ್ತಿಸಿದ್ದರ ಪರಿಣಾಮದಿಂದ ಇಂದು 24 ಮಂದಿಯ ಕುಟುಂಬವು ಶೋಕ ಸಾಗರದಲ್ಲಿ ಮುಳುಗಿದೆ.

    ಚಾಮರಾಜನಗರ ಆಕ್ಸಿಜನ್​ ದುರಂತ: ರಹಸ್ಯ ಬಿಚ್ಚಿಟ್ಟ ಅಧಿಕಾರಿಗಳ ವಾಟ್ಸ್​ಆ್ಯಪ್​ ಗ್ರೂಪ್​ ಚಾಟಿಂಗ್​!

    ದುರಂತ ನಡೆದ ದಿನವೇ ಗಂಭೀರ ಆರೋಪ
    ಚಾಮರಾಜನಗರಕ್ಕೆ ಆಮ್ಲಜನಕ ಪೂರೈಸಲು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆಕ್ಷೇಪ ವ್ಯಕ್ತಪಡಿಸಿದ್ದು, ತಮ್ಮ ಪ್ರತಿಷ್ಠೆಗಾಗಿ ಕರೊನಾ ರೋಗಿಗಳ ಸಾವಿಗೆ ರೋಹಿಣಿ ಸಿಂಧೂರಿ ಕಾರಣರಾದರು ಎಂಬ ಆರೋಪ ಘಟನೆ ನಡೆದ ದಿನವೇ ಕೇಳಿಬಂದಿತ್ತು.

    ಚಾಮರಾಜನಗರ ಜಿಲ್ಲೆಗೆ ಪ್ರತಿನಿತ್ಯ ಮೈಸೂರಿನ ಸದರನ್ ಗ್ಯಾಸ್ ಏಜೆನ್ಸಿ ಮೂಲಕ ಆಮ್ಲಜನಕ‌ ಪೂರೈಕೆ ಆಗುತ್ತಿತ್ತು. ಚಾಮರಾಜನಗರ ಜಿಲ್ಲಾಸ್ಪತ್ರೆಗೆ 280 ಜಂಬೂ ಸಿಲಿಂಡರ್ ಆಮ್ಲಜನಕ ಅವಶ್ಯಕತೆ ಇದೆ. ಕಳೆದ ಶುಕ್ರವಾರ ನಡೆದ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ವಿಡಿಯೋ ಕಾನ್ಫರೆನ್ಸ್​ನಲ್ಲಿ ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಿಗೆ ಮೈಸೂರಿನಿಂದ ಆಮ್ಲಜನಕ ಪೂರೈಸುವ ಜವಾಬ್ದಾರಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ನೀಡಿದ್ದರು. ಆದರೆ, ಮುಖ್ಯ ಕಾರ್ಯದರ್ಶಿಗಳ ಸೂಚನೆಗೂ ಮೈಸೂರು ಜಿಲ್ಲಾಧಿಕಾರಿ ಡೋಂಟ್ ಕೇರ್ ಎಂದಿದ್ದಾರೆನ್ನಲಾಗಿದೆ. ಆಮ್ಲಜನಕ ನೀಡಿದರೆ ಗ್ಯಾಸ್ ಏಜೆನ್ಸಿ ವಿರುದ್ಧ ಕೇಸ್ ಹಾಕುವ ಎಚ್ಚರಿಕೆಯನ್ನು ರೋಹಿಣಿ ಸಿಂಧೂರಿ ನೀಡಿರುವ ಆರೋಪ ಕೇಳಿಬಂದಿದೆ. ಸಿಂಧೂರಿ ಮಾತಿಗೆ ಹೆದರಿ ಆಮ್ಲಜನಕ ನೀಡಲು ಹಿಂದೇಟು ಹಾಕಿದ್ದಾರೆ. ಇದರಿಂದ ದುರಂತ ಸಂಭವಿಸಿದೆ ಎಂದು ಆರೋಪಿಸಲಾಗಿದೆ.

    ರೋಹಿಣಿ ಸಿಂಧೂರಿ ವಿರುದ್ಧ ಸಿಎಂ ಗರಂ
    ಘಟನೆ ನಡೆದ ದಿನವೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಫೋನ್ ಮೂಲಕ ಚಾಮರಾಜನಗರ ಜಿಲ್ಲಾಧಿಕಾರಿ ಬಳಿ ಮಾಹಿತಿ ಪಡೆದಿದ್ದಾರೆ. ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಿಎಂ, ಸೂಕ್ತ ಕ್ರಮವಹಿಸಲು ಸೂಚನೆ ನೀಡಿದ್ದಾರೆ. ಇದೇ ವೇಳೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧವೂ ಗರಂ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಕನ್ನಡ ಚಳುವಳಿ ಪ್ರತಿಭಟನೆ
    ಚಾಮರಾಜನಗರ ಜಿಲ್ಲಾಸ್ಪತ್ರೆ ಆವರಣದಲ್ಲಿ ಕನ್ನಡ ಚಳುವಳಿ ಪ್ರತಿಭಟನೆ ನಡೆಸಿ, ಮೈಸೂರು ಡಿಸಿ ರೋಹಿಣಿ ಸಿಂಧೂರಿ‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೆ, ಆರೋಗ್ಯ ಸಚಿವ ಸುಧಾಕರ್ ರಾಜೀನಾಮೆ ಆಗ್ರಹಿಸಿದ್ದಾರೆ. ಸತ್ತ ಕುಟುಂಬಗಳಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಚಾಮರಾಜನಗರದಲ್ಲಿ ಆಕ್ಸಿಜನ್​ ಸಿಗದೆ ಕರೊನಾ ರೋಗಿಗಳ ಸಾವು: ಮೈಸೂರು ಡಿಸಿ ವಿರುದ್ಧ ಗಂಭೀರ ಆರೋಪ

    ‘ಉದ್ಧಟತನ ತೋರುವ ಅಧಿಕಾರಿ ಇಟ್ಟುಕೊಂಡು ಜನರ ಜೀವಗಳ ಜತೆ ಆಟ ಆಡ್ಬೇಡಿ’

    ಚಾಮರಾಜನಗರದಲ್ಲಿ 24 ಮಂದಿ ಸಾವು: ರೋಹಿಣಿ ಸಿಂಧೂರಿ ವಿರುದ್ಧ ಸಿಎಂ ಯಡಿಯೂರಪ್ಪ ಗರಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts