More

    ಗೋಶಾಲೆಗಳ ನಿರ್ವಹಣೆ ಕುರಿತು ಸಭೆ

    ಚಾಮರಾಜನಗರ: ಜಿಲ್ಲೆಯ ವಿವಿಧೆಡೆ ತೆರೆಯಲಾಗಿರುವ ಮೇವು ಬ್ಯಾಂಕ್‌ಗಳು ಹಾಗೂ ಗೋಶಾಲೆಗಳಲ್ಲಿನ ಮೇವಿನ ಲಭ್ಯತೆ, ಪ್ರತಿನಿತ್ಯದ ದಾಸ್ತಾನು, ವಿತರಣೆ ಕಾರ್ಯವೈಖರಿಯನ್ನು ಸಮರ್ಪಕವಾಗಿ ದಾಖಲೀಕರಣ ಮಾಡುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಸೂಚಿಸಿದರು.

    ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಉಂಟಾಗಿರುವ ಬರ ಪರಿಸ್ಥಿತಿ ನಿರ್ವಹಣೆ ಹಿನ್ನೆಲೆಯಲ್ಲಿ ತೆರೆಯಲಾಗಿರುವ ಗೋಶಾಲೆಗಳು ಹಾಗೂ ಮೇವು ಬ್ಯಾಂಕ್‌ಗಳ ನಿರ್ವಹಣೆ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಮಂಗಳವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಜಿಲ್ಲೆಯನ್ನು ಸರ್ಕಾರವು ಬರಪೀಡಿತ ಜಿಲ್ಲೆಯಾಗಿ ಘೊಷಿಸಿರುವುದರಿಂದ ಬರ ಪರಿಸ್ಥಿತಿ ನಿರ್ವಹಣೆಗಾಗಿ ಜನ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವು ಸರಬರಾಜಿನಲ್ಲಿ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಹನೂರು ತಾಲೂಕಿನಲ್ಲಿ ಒಟ್ಟು 17 ಗೋಶಾಲೆಗಳು ಮತ್ತು ಚಾಮರಾಜನಗರ ತಾಲೂಕಿನಲ್ಲಿ 2, ಗುಂಡ್ಲುಪೇಟೆಯಲ್ಲಿ 1 ಮತ್ತು ಹನೂರು ತಾಲೂಕಿನಲ್ಲಿ 4 ಮೇವು ಬ್ಯಾಂಕ್‌ಗಳನ್ನು ತೆರೆಯಲಾಗಿದೆ ಎಂದರು.

    ಗೋಶಾಲೆಗಳು ಹಾಗೂ ಮೇವು ಬ್ಯಾಂಕ್‌ಗಳ ಪ್ರತಿನಿತ್ಯದ ವಹಿವಾಟುಗಳನ್ನು ಯಾವುದೇ ಗೊಂದಲಗಳಿಗೆ ಅವಕಾಶವಾಗದಂತೆ ಮೇವಿನ ಲಭ್ಯತೆ, ಪ್ರತಿನಿತ್ಯದ ದಾಸ್ತಾನು, ವಿತರಣೆ ಬಗ್ಗೆ ಮಾಹಿತಿಯನ್ನು ದಾಖಲಿಸುವ ಪ್ರಕ್ರಿಯೆಯನ್ನು ಕಡ್ಡಾಯವಾಗಿ ನಿರ್ವಹಿಸಬೇಕು. ಸರ್ಕಾರದ ಮಾರ್ಗಸೂಚಿಗಳನ್ವಯ ಗೋಶಾಲೆ ತೆರೆಯಲು ಜಾನುವಾರುಗಳಿಗೆ ಕುಡಿಯುವ ನೀರು, ಮೇವು ಹಾಗೂ ನೆರಳಿನ ವ್ಯವಸ್ಥೆಯನ್ನು ಕಲ್ಪಿಸಬೇಕು. ಈ ಸಂಬಂಧ ಚೆಕ್‌ಲಿಸ್ಟ್ ಅನ್ನು ಪಟ್ಟಿ ಮಾಡಿ ಅದರನ್ವಯ ಕಾರ್ಯುನಿರ್ವಹಣೆಗೆ ಅಧಿಕಾರಿಗಳು ಮುಂದಾಗಬೇಕು ಎಂದು ತಿಳಿಸಿದರು.
    ಬರ ನಿರ್ವಹಣೆ ಸಂಬಂಧ ರೈತರು ತಮ್ಮ ಜಮೀನುಗಳಲ್ಲಿ ಮೇವು ಬೆಳೆಯಲು ಅನುಕೂಲವಾಗುವಂತೆ ಪಶುಪಾಲನಾ ಇಲಾಖೆಯಿಂದ ಮಿನಿ ಮೇವಿನ ಕಿಟ್ (ಬೀಜ)ಗಳನ್ನು ನೀಡಲಾಗುತ್ತದೆ ಎಂದರು.

    ಸಭೆಯಲ್ಲಿ ಉಪವಿಭಾಗಾಧಿಕಾರಿ ಶಿವಮೂರ್ತಿ, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ಹನುಮೇಗೌಡ, ಹನೂರು ತಾಲೂಕಿನ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಸಿದ್ದರಾಜು ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts