ಗ್ಯಾಸ್ ಟ್ಯಾಂಕರ್ ಡಿಕ್ಕಿ: ಈರುಳ್ಳಿ ಲಾರಿಗೆ ಪಂಚರ್ ಹಾಕುತ್ತಿದ್ದ ನಾಲ್ವರು ಸ್ಥಳದಲ್ಲೇ ದುರ್ಮರಣ

Lorry Accident
Published on

ಚಿತ್ರದುರ್ಗ: ಪಂಚರ್ ಆಗಿ ನಿಂತಿದ್ದ ಈರುಳ್ಳಿ ಸಾಗಿಸುತ್ತಿದ್ದ ಲಾರಿಗೆ ಗ್ಯಾಸ್ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ನಾಲ್ವರು ದುರಂತ ಸಾವಿಗೀಡಾಗಿರುವ ಘಟನೆ ಚಿತ್ರದುರ್ಗ ತಾಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 40ರಲ್ಲಿ ನಡೆದಿದೆ.

ಮೃತರನ್ನು ರಾಯಚೂರು ಮೂಲದ ಹುಲುಗಪ್ಪ, ಕುಷ್ಟಗಿ ಮೂಲದ ಮಂಜುನಾಥ, ವಿಜಯಪುರ ಮೂಲದ ಕ್ಲೀನರ್ ಸಂಜಯ್ ಹಾಗೂ ರೋಣ ಮೂಲದ ಚಾಲಕ ಶರಣಪ್ಪ ಎಂದು ಗುರುತಿಸಲಾಗಿದೆ.

ಗದಗ ಜಿಲ್ಲೆ ರೋಣದಿಂದ ಬೆಂಗಳೂರಿಗೆ ಲಾರಿ ಮೂಲಕ ಈರುಳ್ಳಿ ಸಾಗಿಸಲಾಗುತ್ತಿತ್ತು. ಆದರೆ, ಲಾರಿ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಬಳಿ ಪಂಚರ್​ ಆಗಿದ್ದರಿಂದ ಹೆದ್ದಾರಿ ಪಕ್ಕದಲ್ಲೇ ನಿಲ್ಲಿಸಿ, ಪಂಚರ್​ ಹಾಕುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಗ್ಯಾಸ್​ ಟ್ಯಾಂಕರ್​, ಈರುಳ್ಳಿ ತುಂಬಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಪಂಚರ್​ ಹಾಕುತ್ತಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಚಿತ್ರದುರ್ಗ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net