

ನವದೆಹಲಿ: ಟಿವಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಊಟಕ್ಕಾಗಿ ಕಿತ್ತಾಡುವ ದೃಶ್ಯಗಳು ಸಾಮಾನ್ಯವಾದರೂ, ಒಂದು ಪ್ಲೇಟ್ ಊಟ, ಒಂದು ಸಂಬಂಧವನ್ನೇ ನಾಶಮಾಡುವುದು ವಿರಳಾತಿವಿರಳ ಎಂದು ಹೇಳಬಹುದು. ಆದರೆ, ಅಂತಹ ವಿರಳ ಘಟನೆ ಇಲ್ಲಿ ನಡೆದು ಹೋಗಿದೆ. ಸಸ್ಯಹಾರಿ ವ್ಯಕ್ತಿಯೊಬ್ಬ ತನ್ನ ಮಾಂಸಹಾರಿ ಪತ್ನಿಯ ಬಗ್ಗೆ ಬರೆದಿರುವ ಸಾಲುಗಳು ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗಿದೆ.
ನ್ಯೂಸ್ ಪೇಪರ್ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ಬಗ್ಗೆ ಬರೆದುಕೊಂಡಿದ್ದಾನೆ. ಆತನ ಪತ್ನಿ ಮನೆಯಿಂದ ಹೊರಗಡೆ ಮಾಂಸಾಹಾರವನ್ನು ಎಂಜಾಯ್ ಮಾಡುತ್ತಾಳಂತೆ. ಆಕೆಗೆ ಮಟನ್ ಅಂದ್ರೆ ತುಂಬಾ ಇಷ್ಟ ಅಂತಾ ಮದುವೆಗೂ ಮುಂಚೆಯೇ ಗೊತ್ತಾಗಿತ್ತಂತೆ. ಮದುವೆ ಬಳಿಕ ಎಲ್ಲವನ್ನು ತ್ಯಜಿಸುತ್ತೇನೆಂದು ಮಾತುಕೊಟ್ಟ ಬಳಿಕ ಮದುವೆಯಾದೆ ಎಂದು ಆ ವ್ಯಕ್ತಿ ಹೇಳಿಕೊಂಡಿದ್ದಾನೆ. ಆದರೆ, ಆಕೆ ಮದುವೆ ನಂತರವೂ ರಹಸ್ಯವಾಗಿ ಮಾಂಸಾಹಾರ ಸೇವಿಸುತ್ತಿರುವುದನ್ನು ಇತ್ತೀಚೆಗಷ್ಟೇ ಗಂಡ ನೋಡಿದ್ದಾನೆ.
ಆಕೆ ತುಂಬಾ ಸೌಂದರ್ಯವತಿ. ಮತ್ತೆಂದಿಗೂ, ಎಲ್ಲಿಯೂ ಮಟನ್ ಸೇವಿಸಬಾರದು ಎಂಬ ಷರತ್ತಿನೊಂದಿಗೆ ಮದುವೆ ಮಾಡಿಕೊಳ್ಳಲು ಒಪ್ಪಿಕೊಂಡೆ. ಆದರೆ, ಈಗ ಆಕೆ ಹೆಚ್ಚು ಮಟನ್ ಅನ್ನು ಇಷ್ಟಪಡುತ್ತಿದ್ದಾಳೆ. ಅಲ್ಲದೆ, ಮಟನ್ ಬಿಟ್ಟು ಇರಲಾರದಷ್ಟು ಅಚ್ಚಿಕೊಂಡಿದ್ದಾಳೆ ಎಂದು ದೂರಿದ್ದಾನೆ. ಆದರೂ ತನ್ನ ಪತ್ನಿಯನ್ನು ಕ್ಷಮಿಸಲು ನಿರ್ಧರಿಸಿರುವ ವ್ಯಕ್ತಿ ತನ್ನ ಪತ್ನಿಗೆ ಕೊನೆಯ ಅವಕಾಶವೊಂದನ್ನು ನೀಡಿದ್ದಾರೆ. ಅದೇನೆಂದರೆ, ಮಟನ್ ಅಥವಾ ನಾನು ಎಂಬ ಆಯ್ಕೆಯನ್ನು ಪತ್ನಿಯ ಮುಂದೆ ಇಟ್ಟಿದ್ದಾನೆ.
ಆಯ್ಕೆಗಳನ್ನು ನೀಡಿದ ಗಂಡನಿಗೆ ಇದೀಗ ಮತ್ತೊಂದು ಆತಂಕ ಎದುರಾಗಿದೆ. ಎಲ್ಲಿ ನನ್ನ ಪತ್ನಿ ನನಗಿಂತ ಮಟನ್ ಅನ್ನು ಆರಿಸಿಕೊಳ್ಳುತ್ತಾಳೋ ಎಂಬ ಭಯ ಗಂಡನಲ್ಲಿ ಕಾಡುತ್ತಿದೆ. ಅಂಕಣಕಾರರ ಉತ್ತರವು ಕ್ಲಿಪ್ಪಿಂಗ್‌ನಲ್ಲಿ ಗೋಚರಿಸದಿದ್ದರೂ, ಪುರುಷ, ಮಹಿಳೆ ಮತ್ತು ಮಟನ್ ಒಳಗೊಂಡ ತ್ರಿಕೋನ ಪ್ರೇಮವನ್ನು ಅವರು ಮೊದಲ ಬಾರಿಗೆ ನೋಡಿದ್ದರಿಂದ ಆ ವ್ಯಕ್ತಿ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ ಎಂದು ಬರಹಗಾರ ಹೇಳಿಕೊಂಡಿದ್ದಾರೆ.
ಈ ಬಗ್ಗೆ ಕಾಮೆಂಟ್ ಮಾಡಿರುವ ಹೆಚ್ಚಿನವರು ಈ ಪರಿಸ್ಥಿತಿಯನ್ನು 'ಅವಾಸ್ತವ' ಎಂದು ಕಂಡುಕೊಂಡರೆ, ಇತರರು ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಆಯ್ಕೆ ಮಾಡುವುದು ತುಂಬಾ ಕಠಿಣ ಎಂಬ ಅಭಿಪ್ರಾಯ ಹೊಂದಿದ್ದಾರೆ. (ಏಜೆನ್ಸೀಸ್)