More

    40 ವರ್ಷದವರಿಗೆ ಬೂಸ್ಟರ್ ಸಲಹೆ: ದೆಹಲಿಯಲ್ಲಿ 12 ಒಮಿಕ್ರಾನ್ ಶಂಕಿತರು ಆಸ್ಪತ್ರೆಗೆ, ಆಫ್ರಿಕಾಕ್ಕೆ ಡಬ್ಲ್ಯುಎಚ್​ಒ ತಂಡ ರವಾನೆ

    ನವದೆಹಲಿ: ಕರೊನಾ ವೈರಸ್​ನ ಒಮಿಕ್ರಾನ್ ಪ್ರಭೇದ ತಲೆಯೆತ್ತಿ ವಿಶ್ವದೆಲ್ಲೆಡೆ ತಲ್ಲಣ ಹುಟ್ಟಿಸಿರುವ ಘಟ್ಟದಲ್ಲಿ, 40 ವರ್ಷ ಮೇಲ್ಪಟ್ಟವರಿಗೆ ಕರೊನಾ ಲಸಿಕೆಯ ಬೂಸ್ಟರ್ (ಮೂರನೇ) ಡೋಸ್ ನೀಡುವುದು ಅಗತ್ಯ ಎಂದು ಭಾರತದ ಪ್ರಮುಖ ಜಿನೋಮ್ ವಿಜ್ಞಾನಿಗಳು ಶಿಫಾರಸು ಮಾಡಿದ್ದಾರೆ. ಹೆಚ್ಚು ಅಪಾಯವಿರುವ (ಹೈ ರಿಸ್ಕ್) ಮತ್ತು ಸೋಂಕಿಗೆ ಹೆಚ್ಚು ಒಳಗಾಗುವ ಸಂಭವವಿರುವ ಜನರಿಗೆ ಬೂಸ್ಟರ್ ಡೋಸ್​ನಲ್ಲಿ ಆದ್ಯತೆ ನೀಡಬೇಕು ಎಂದಿದ್ದಾರೆ. ದೇಶದಲ್ಲಿನ ಕರೊನಾ ಮಹಾಮಾರಿ ಸ್ಥಿತಿ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆ ವೇಳೆ ಬಹಳಷ್ಟು ಸಂಸದರು ಬೂಸ್ಟರ್ ಡೋಸ್​ನ ಬೇಡಿಕೆ ಇಟ್ಟಿರುವ ನಡುವೆಯೇ ತಜ್ಞರ ಮಹತ್ವದ ಶಿಫಾರಸು ಹೊರಬಿದ್ದಿದೆ.

    ಇನ್ಸಾಕಾಗ್​ನ (ಇಂಡಿಯನ್ ಸಾರ್ಸ್ ಸಿಒವಿ-2 ಜಿನೋಮಿಕ್ಸ್ ಸೀಕ್ವೆನ್ಸಿಂಗ್ ಕನ್ಸೋರ್ಷಿಯಂ) ಸಾಪ್ತಾಹಿಕ ಬುಲೆಟಿನ್​ನಲ್ಲಿ ಈ ಶಿಫಾರಸನ್ನು ಮಂಡಿಸಲಾಗಿದೆ. ಕೋವಿಡ್ ಹೆಚ್ಚು ಪೀಡಿತ ಪ್ರದೇಶಗಳಿಂದ ಹಾಗೂ ಪ್ರದೇಶಗಳಿಗೆ ಪ್ರಯಾಣದ ಮೇಲೆ ನಿರ್ಬಂಧ, ಸಂರ್ಪತರ ಪತ್ತೆ ಮತ್ತು ಸೋಂಕು ಪತ್ತೆ ಪರೀಕ್ಷೆಯ ಹೆಚ್ಚಳಕ್ಕೂ ವಿಜ್ಞಾನಿಗಳು ಒತ್ತು ನೀಡಿದ್ದಾರೆ.

    ಆಫ್ರಿಕಾದಿಂದ ಜೈಪುರಕ್ಕೆ ಬಂದ 9 ಮಂದಿಗೆ ಪಾಸಿಟಿವ್: ಜಗತ್ತಿನಲ್ಲಿ ತಲ್ಲಣ ಮೂಡಿಸಿರುವ ಕರೊನಾ ವೈರಸ್​ನ ಹೊಸ ಪ್ರಭೇದ ಒಮಿಕ್ರಾನ್ ಪತ್ತೆಯಾದ ದಕ್ಷಿಣ ಆಫ್ರಿಕಾದಿಂದ ರಾಜಸ್ಥಾನಕ್ಕೆ ಮರಳಿರುವ ಒಂದೇ ಕುಟುಂಬದ ನಾಲ್ವರಲ್ಲಿ ಹಾಗೂ ಐದು ಸಂರ್ಪತರಲ್ಲಿ, ಹೀಗೆ ಒಂದೇ ಕುಟುಂಬದ ಒಂಬತ್ತು ಜನರಲ್ಲಿ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ. ಆಫ್ರಿಕಾದಿಂದ ಮರಳಿದವರನ್ನು ಜೈಪುರದಲ್ಲಿ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಸಂಪರ್ಕಕ್ಕೆ ಬಂದ ಐದು ಜನರು ಸ್ವಯಂ-ಐಸೋಲೇಷನ್​ನಲ್ಲಿದ್ದಾರೆ. ಅವರಲ್ಲಿ ಒಮಿಕ್ರಾನ್ ವೈರಾಣು ಇರಬಹುದೆಂಬ ಶಂಕೆಯಿದ್ದು ಈ ಒಂಬತ್ತೂ ಜನರ ಮಾದರಿಗಳ ಜಿನೋಮ್ ಸೀಕ್ವೆನ್ಸಿಂಗ್ ನಡೆಯುತಿದೆ.

    ಸಿಂಗಾಪುರದಿಂದ ತಮಿಳುನಾಡಿಗೆ ಆಗಮಿಸಿದ ಒಂದು ಮಗು ಸಹಿತ ಇಬ್ಬರು ಅಂತಾರಾಷ್ಟ್ರೀಯ ಪ್ರಯಾಣಿಕರ ಪರೀಕ್ಷೆಯಲ್ಲಿ ಕರೊನಾ ಪಾಸಿಟಿವ್ ಕಂಡುಬಂದಿದೆ. ಪರೀಕ್ಷಾ ವರದಿ ಬಂದ ಮೇಲಷ್ಟೇ ಒಮಿಕ್ರಾನ್ ಸೋಂಕಿನ ಬಗ್ಗೆ ು ಖಚಿತವಾಗಲಿದೆ. ಕರ್ನಾಟಕದಲ್ಲಿ ಒಮಿಕ್ರಾನ್ ತಳಿ ಸೋಂಕಿನ ಎರಡು ಪ್ರಕರಣಗಳು ದೃಢಪಟ್ಟಿರುವ ಹಿನ್ನೆಲೆಯಲ್ಲಿ, ವಿದೇಶಗಳಿಂದ ಬಂದವರಲ್ಲಿ ಕೋವಿಡ್ ದೃಢಪಡುತ್ತಿರುವುದು ಆತಂಕ ಹೆಚ್ಚಾಗಲು ಕಾರಣವಾಗಿದೆ. ದೆಹಲಿಯಲ್ಲಿ ನಾಲ್ಕು, ಚಂಡೀಗಢ ಮತ್ತು ಹೈದರಾಬಾದ್​ನಲ್ಲಿ ತಲಾ ಒಂದು, ಮಹಾರಾಷ್ಟ್ರದಲ್ಲಿ ಒಂಬತ್ತು ಮತ್ತು ತಮಿಳುನಾಡಿನ ತಿರುಚ್ಚಿಯಲ್ಲಿ ಒಂದು ಸೋಂಕಿನ ಪ್ರಕರಣದ ಮೇಲೆ ತೀವ್ರ ನಿಗಾ ಇರಿಸಲಾಗಿದ್ದು ಸ್ಯಾಂಪಲ್​ಗಳನ್ನು ಜಿನೋಮ್ ಸೀಕ್ವೆನ್ಸಿಂಗ್​ಗೆ ರವಾನಿಸಲಾಗಿದೆ.

    ರೂಪಾಂತರಿ ಅವತಾರ: ಒಮಿಕ್ರಾನ್ ರೂಪಾಂತರಿ ವೈರಸ್ ಈ ವಾರ ಏಷ್ಯಾದಲ್ಲಿ ತನ್ನ ಅವತಾರ ತೋರಿಸಲು ಆರಂಭಿಸಿದೆ. ಭಾರತ, ಜಪಾನ್, ಮಲೇಷ್ಯಾ, ಸಿಂಗಾಪುರ ಮತ್ತು ದಕ್ಷಿಣ ಕೊರಿಯಾದಲ್ಲಿ ಈಗ ಶ್ರೀಲಂಕಾದಲ್ಲೂ ಹೊಸ ತಳಿಯ ಪ್ರಕರಣಗಳು ಪತ್ತೆಯಾಗಿವೆ. ಏಷ್ಯಾ-ಪೆಸಿಫಿಕ್ ವಲಯದಲ್ಲಿ ಸುಮಾರು 65 ಕೋಟಿ ಜನರಿದ್ದಾರೆ. ‘ಗಡಿಗಳನ್ನು ಮುಚ್ಚುವುದರಿಂದಷ್ಟೇ ಪ್ರಯೋಜನವಾಗದು’ ಎಂದು ಪಶ್ಚಿಮ ಪೆಸಿಫಿಕ್ ಡಬ್ಲ್ಯುಎಚ್​ಒ ನಿರ್ದೇಶಕ ತಕೇಷಿ ಕಸಯ್ ಹೇಳಿದ್ದಾರೆ. ಅಧಿಕ ಪ್ರಮಾಣದಲ್ಲಿ ಹರಡುವ ಸಾಧ್ಯತೆಯಿರುವ ಹೊಸ ತಳಿಯನ್ನು ಬಗ್ಗುಬಡಿಯಲು ಸಿದ್ಧರಾಗಬೇಕು. ಸೋಂಕಿನ ಕುರಿತ ಹಾಲಿ ಧೋರಣೆಯನ್ನು ಬದಲಾಯಿಸುವ ಅಗತ್ಯವಿಲ್ಲ ಎಂದಿದ್ದಾರೆ.

    ಸಂಸತ್​ನಲ್ಲಿ ಕೋವಿಡ್ ಮಾಹಿತಿ: ರಿಸ್ಕ್ ಇರುವ ದೇಶಗಳಿಂದ ಆಗಮಿಸಿದ 16,000 ಪ್ರಯಾಣಿಕರ ಪೈಕಿ 18 ಮಂದಿಯಲ್ಲಿ ಮಾತ್ರವೇ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಸಚಿವ ಮಾಂಡವೀಯ ಶುಕ್ರವಾರ ಸಂಸತ್​ನಲ್ಲಿ ತಿಳಿಸಿದ್ದಾರೆ. 12-17 ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡಿಕೆ ಸಂಬಂಧದ ಮತ್ತು ಬೂಸ್ಟರ್ ಡೋಸ್ ಕುರಿತು ವೈಜ್ಞಾನಿಕ ಪರಾವೆಗಳನ್ನು ರಾಷ್ಟ್ರೀಯ ಲಸಿಕೆ ನೀಡಿಕೆ ಕುರಿತ ತಾಂತ್ರಿಕ ಸಲಹಾ ಗುಂಪು ಪರಿಶೀಲಿಸುತ್ತಿದೆ. ತಲಾ ಹತ್ತು ಲಕ್ಷ ಜನಸಂಖ್ಯೆಯಲ್ಲಿ ಕೋವಿಡ್​ನ ತಲಾ ಪ್ರಕರಣಗಳು ಹಾಗೂ ಸಾವಿನ ಪ್ರಮಾಣ ಜಗತ್ತಿನಲ್ಲೇ ಅತಿ ಕಡಿಮೆ ಇರುವುದು ಭಾರತದಲ್ಲಿ ಎಂದು ಹೇಳಿದ್ದಾರೆ. ಶಂಕಿತ ಆಮ್ಲಜನಕ ಕೊರತೆಯಿಂದ ನಾಲ್ಕು ಜನರು ಮೃತಪಟ್ಟಿದ್ದಾರೆಂದು ಪಂಜಾಬ್ ರಾಜ್ಯ ಮಾತ್ರವೇ ಕೇಂದ್ರಕ್ಕೆ ವರದಿ ಮಾಡಿದೆ ಎಂದು ಮಾಹಿತಿ ನೀಡಿದ್ದಾರೆ.

    ಶೇಕಡ 49 ಜನರಿಗೆ ಎರಡನೇ ಡೋಸ್: ಭಾರತದಲ್ಲಿ ‘ಹರ್ ಘರ್ ದಸ್ತಕ್’ ಅಭಿಯಾನದ ಫಲವಾಗಿ ಕೋವಿಡ್-ತಡೆ ಲಸಿಕೆಯ ಮೊದಲ ಡೋಸ್ ನೀಡಿಕೆ ಪ್ರಮಾಣದಲ್ಲಿ ನವೆಂಬರ್ 30ರವರೆಗೆ ಶೇಕಡ 5.9ರಷ್ಟು ಏರಿಕೆಯಾಗಿದೆ. ಎರಡನೇ ಡೋಸ್ ನೀಡಿಕೆಯಲ್ಲಿ ಗಣನೀಯ ಶೇಕಡ 11.7 ಏರಿಕೆ ದಾಖಲಾಗಿದೆ. ಆದರೆ ದೇಶದಲ್ಲಿ ಒಟ್ಟಾರೆ ಯಾಗಿ ಅರ್ಹ ಫಲಾನುಭವಿಗಳಲ್ಲಿ ಶೇಕಡ 49ರಷ್ಟು ಮಂದಿ ಮಾತ್ರವೇ ಎರಡನೇ ಡೋಸ್ ಪಡೆದಿದ್ದಾರೆ ಎಂದು ತಾತ್ಕಾಲಿಕ ವರದಿಯೊಂದು ಹೇಳಿದೆ. ದೇಶದಲ್ಲಿ ಗುರುವಾರದವರೆಗೆ ನೀಡಲಾದ ಲಸಿಕೆ ಪ್ರಮಾಣ ಒಟ್ಟು 126 ಕೋಟಿ ಡೋಸ್ ದಾಟಿದೆ. ಆ ಪೈಕಿ 79.13 ಕೋಟಿ ಜನರು ಮೊದಲ ಡೋಸ್ ಪಡೆದಿದ್ದು 45.82 ಕೋಟಿ ಮಂದಿ ಎರಡನೇ ಡೋಸ್ ಹಾಕಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶುಕ್ರವಾರ ತಿಳಿಸಿದೆ.

    ಒಮಿಕ್ರಾನ್​ಗೆ ಸಿದ್ಧರಾಗಲು ಡಬ್ಲ್ಯುಎಚ್​ಒ ಸೂಚನೆ: ಪ್ರಯಾಣ ನಿರ್ಬಂಧದ ಹೊರತಾಗಿಯೂ ಒಮಿಕ್ರಾನ್ ಪ್ರಭೇದ ಜಾಗತಿಕವಾಗಿ ಹರಡುತ್ತಿರುವುದರಿಂದ ಕರೊನಾ ಮಹಾಮಾರಿಯ ಇನ್ನೊಂದು ಅಲೆ ಎದುರಿಸಲು ಆರೋಗ್ಯ ಕಾಳಜಿ ವ್ಯವಸ್ಥೆಯ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಹಾಗೂ ಜನರಿಗೆ ಸಂಪೂರ್ಣವಾಗಿ ಲಸಿಕೆ ಹಾಕಬೇಕು ಎಂದು ಏಷ್ಯಾ-ಪೆಸಿಫಿಕ್ ವಲಯದ ದೇಶಗಳಿಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಸೂಚಿಸಿದೆ. ಈ ನಡುವೆ, ಒಮಿಕ್ರಾನ್ ಪ್ರಭೇದ ಪತ್ತೆಯಿಂದ ಕಂಗೆಟ್ಟಿರುವ ದಕ್ಷಿಣ ಆಫ್ರಿಕಾಕ್ಕೆ ನೆರವಾಗಲು ಡಬ್ಲ್ಯುಎಚ್​ಒ ತಜ್ಞರ ತಂಡವೊಂದನ್ನು ಕಳಿಸಿದೆ. ಗೌಟೆಂಗ್ ಪ್ರಾಂತ್ಯದಲ್ಲಿ ನಿಗಾಕ್ಕೆ ತಂಡವನ್ನು ನಿಯೋಜಿಸಲಾಗುತ್ತಿದೆ ಎಂದು ಡಬ್ಲ್ಯುಎಚ್​ಒ ಪ್ರಾದೇಶಿಕ ಎಮರ್ಜೆನ್ಸಿ ನಿರ್ದೇಶಕ ಸಲಾಂ ಗುಯೆ ಹೇಳಿದ್ದಾರೆ.

     ಕೊವ್ಯಾಕ್ಸಿನ್ (12 ತಿಂಗಳು), ಕೋವಿಶೀಲ್ಡ್ (9 ತಿಂಗಳು) ಮತ್ತು ಝೈಕೋವ್-ಡಿ (6 ತಿಂಗಳು) ಲಸಿಕೆಗಳ ಬಳಕೆ ಅವಧಿಯನ್ನು (ಶೆಲ್ಪ್ ಲೈಫ್) ಕೇಂದ್ರೀಯ ಔಷಧಗಳ ಮಾನಕ ಸಂಸ್ಥೆ (ಸಿಡಿಎಸ್​ಒ) ನಿಗದಿಪಡಿಸಿದೆ.

    3 ಪಟ್ಟು ಮರುಸೋಂಕಿನ ಸಾಧ್ಯತೆ: ಒಮಿಕ್ರಾನ್ ಪ್ರಭೇದದಿಂದ ಡೆಲ್ಟಾ ಅಥವಾ ಬೀಟಾ ರೂಪಾಂತರಿಗಿಂತ ಮೂರು ಪಟ್ಟು ಅಧಿಕ ಮರುಸೋಂಕಿನ (ರೀಇನ್​ಫೆಕ್ಷನ್) ಸಾಧ್ಯತೆಯಿದೆ ಎಂದು ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಹೇಳಿದ್ದಾರೆ. ಒಮಿಕ್ರಾನ್ ರೂಪಾಂತರಿಯಿಂದಾಗಿ ದೇಶ ಕೋವಿಡ್-19 ಸೋಂಕಿನ ನಾಲ್ಕನೇ ಅಲೆಯನ್ನು ಪ್ರವೇಶಿಸುತ್ತಿದೆ. ಎಂದು ದಕ್ಷಿಣ ಆಫ್ರಿಕಾದ ಆಯೋಗ್ಯ ಸಚಿವ ಜೋ ಫಾಹ್ಲಾ ಹೇಳಿದ್ದಾರೆ.

    12 ಒಮಿಕ್ರಾನ್ ಶಂಕಿತರು ಆಸ್ಪತ್ರೆಗೆ: ಒಮಿಕ್ರಾನ್ ಸೋಂಕಿನಿಂದ ಬಳಲುತ್ತಿರಬಹುದು ಎಂದು ಶಂಕಿಸಲಾಗಿರುವ 12 ಜನರನ್ನು ದೆಹಲಿಯ ಲೋಕನಾಯಕ ಜಯಪ್ರಕಾಶ್ ನಾರಾಯಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರಾದ ಅವರಲ್ಲಿ ಸೋಂಕಿನ ಲಕ್ಷಣ ವಿದ್ದಿದ್ದರಿಂದ ಆವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

    ಭಾರತದಲ್ಲಿ ಕೋವಿಡ್ 3ನೇ ಅಲೆ?: ಕರ್ನಾಟಕದಲ್ಲಿ ಒಮಿಕ್ರಾನ್ ತಳಿಯ 2 ಪ್ರಕರಣಗಳು ಈಗಾ ಗಲೇ ದೃಢಪಟ್ಟಿರುವುದರಿಂದ ದೇಶದಲ್ಲಿ ಕರೊನಾ ಸೋಂಕಿನ 3ನೇ ಅಲೆ ಅಪ್ಪಳಿಸಲಿದೆಯೇ ಎಂಬ ಆತಂಕ ಎದುರಾಗಿದೆ. ಅದನ್ನು ಸಮರ್ಥವಾಗಿ ನಿಭಾಯಿಸಲು ಸಿದ್ಧತೆಗಳು ಆಗಿವೆಯೇ ಎಂಬ ಪ್ರಶ್ನೆಯೂ ಮೂಡಿದೆ. ಒಮಿಕ್ರಾನ್ ರೂಪಾಂತರಿಯು ಡೆಲ್ಟಾ ಅಥವಾ ಬೀಟಾ ಪ್ರಭೇದಕ್ಕಿಂತ ಹೆಚ್ಚು ಅಪಾಯಕಾರಿ ಆಗಬಲ್ಲದು ಎಂಬ ಭೀತಿ ಇದೆ. ಒಟ್ಟಾರೆ ಸೋಂಕಿನ ಪ್ರಕರಣಗಳಲ್ಲಿ ಇಳಿಮುಖವಾದರೂ ಕರೊನಾ ತಡೆ ಮಾರ್ಗಸೂಚಿ ಸಡಿಲಿಸದಂತೆ ಸರ್ಕಾರ ಸೂಚಿಸಿದೆ.

    ಭಾರತಕ್ಕೆ ಮೊದಲ ಒಮಿಕ್ರಾನ್​ ತಂದಿಟ್ಟವ ಈಗ ದೇಶದಲ್ಲೇ ಇಲ್ಲ, ಅಸಲಿಗೆ ಆತ ಭಾರತೀಯನೇ ಅಲ್ಲ?: ಬೆಂಗ್ಳೂರಿಗೆ ಸುಮ್ನೆ ಕಳಂಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts