

ಚಾಮರಾಜನಗರ: ರಾಜ್ಯದೆಲ್ಲೆಡೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ನಿಗದಿಯಾಗಿರುವ ಮದುವೆಗೆ ಬರಬೇಡಿ ಎಂದು ಮದುಮಗಳೊಬ್ಬಳು ಮನವಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚಾಮರಾಜನಗರ ತಾಲೂಕಿನ ವಿ.ಸಿ.ಹೊಸೂರು ಗ್ರಾಮದ ಸುಶ್ಮಾ ಹಾಗೂ ಚನ್ನಪ್ಪನಪುರದ ಶ್ರೇಯಸ್ ನಡುವೆ ನಿಶ್ಚಯವಾಗಿರುವ ಮದುವೆ ಇಂದು ಮತ್ತು ನಾಳೆ ನಡೆಯಲಿದೆ. ಈಗಾಗಲೇ ಸಂಬಂಧಿಕರಿಗೆ ಮದುವೆ ಆಮಂತ್ರಣ ಪತ್ರಿಕೆಯನ್ನು ಹಂಚಲಾಗಿದೆ. ಆದರೆ, ಕೋವಿಡ್ ಕಾರಣದಿಂದ ವಧು-ವರನ ಮನೆಯವರು ಕುಳಿತು ಮನೆಯಲ್ಲೇ ಸರಳ ವಿವಾಹ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.
ಕೋವಿಡ್ ಇರದೇ ಹೋಗಿದ್ದರೆ ಚಾಮರಾಜನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಮದುವೆ ನೆರವೇರಬೇಕಿತ್ತು. ಆದ್ರೆ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೆ, ಸರ್ಕಾರ ಸಹ ವಿವಾಹ ಸಮಾರಂಭಗಳಿಗೆ ಇಷ್ಟೇ ಜನಸಂಖ್ಯೆ ಇರಬೇಕೆಂದು ನಿಯಮ ಮಾಡಿದೆ. ಸಾಕಷ್ಟು ಗೊಂದಲಗಳ ನಡುವೆ ಮಂಟಪದಲ್ಲಿ ಮದುವೆ ಮಾಡುವುದು ಸಮಂಜಸವಲ್ಲ ಎಂಬ ತೀರ್ಮಾನಕ್ಕೆ ಬಂದು ಎರಡು ಕುಟುಂಬ ವಧುವಿನ ಸ್ವಗೃಹದಲ್ಲೆ ಸರಳವಾಗಿ ವಿವಾಹವಾಗಲು ತೀರ್ಮಾನಿಸಿದೆ. ಇದರಿಂದ ಮದುವೆ ಬಾರದೆ, ಇದ್ದಲ್ಲಿಯೇ ಆಶೀರ್ವದಿಸಿ ಎಂದು ವಧು ಮನವಿ ಮಾಡಿದ್ದಾಳೆ. ಈ ವಿಡಿಯೋ ಸದ್ಯ ವೈರಲ್ ಆಗಿದೆ. (ದಿಗ್ವಿಜಯ ನ್ಯೂಸ್)