ಸಂಸಾರ ಹಾಳು ಮಾಡಿದ ಆರೋಪ: ರಂಗಭೂಮಿ ಕಲಾವಿದೆಯ ಮೇಲೆ ಸಹಪಾಠಿಗಳಿಂದಲೇ ಆ್ಯಸಿಡ್​ ದಾಳಿ

Accused
ಆರೋಪಿಗಳಾದ ಸ್ವಾಮಿ, ರಮೇಶ್​ ಮತ್ತು ಯೋಗೇಶ್​
Published on

ಬೆಂಗಳೂರು: ರಂಗಭೂಮಿ ಕಲಾವಿದೆಯೊಬ್ಬರ ಮೇಲೆ ಆ್ಯಸಿಡ್​ ದಾಳಿ ಮಾಡಿರುವ ಘಟನೆ ನಗರದ ನಂದಿನಿಲೇಔಟ್​ನ ಗಣೇಶ ಬ್ಲಾಕ್​ನಲ್ಲಿ ನಡೆದಿದೆ. ಮಾರ್ಚ್​ 18ರಂದು ಘಟನೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.

ಸಂತ್ರಸ್ತೆಯ ಹೆಸರು ದೇವಿ. ಮಾ. 18 ರಂದು ಮನೆಯ ಜಗಲಿಯ ಮೇಲೆ‌ ಮಲಗಿದ್ದ ವೇಳೆ ಆ್ಯಸಿಡ್ ದಾಳಿ ಮಾಡಲಾಗಿದೆ. ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದೇವಿ ಅವರು ಈ ಹಿಂದೆ ಬಿಎಂಟಿಸಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅನಾರೋಗ್ಯದ ಕಾರಣ ನೀಡಿ ಬಿಎಂಟಿಸಿ ನಿರ್ವಾಹಕ ಹುದ್ದೆ ತೊರೆದಿದ್ದಾರೆ.

ದೇವಿ ಅವರು ರಂಗಭೂಮಿ ಕಲಾವಿದೆಯಾಗಿದ್ದು, ರಂಗಭೂಮಿಯ ಸಹಪಾಠಿಗಳಿಂದಲೇ ಈ ದುಷ್ಕ್ರತ್ಯ ನಡೆದಿದೆ. ಆರೋಪಿಗಳಾದ ರಮೇಶ್​, ಸ್ವಾತಿ ಮತ್ತು ಯೋಗೇಶ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ನಂದಿನಿಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಸಾರ ಹಾಳು ಮಾಡಿದ್ದ ಕೋಪಕ್ಕೆ ಆ್ಯಸಿಡ್ ಅಟ್ಯಾಕ್

10 ಸಾವಿರ ಹಣಕ್ಕೆ ಸುಪಾರಿ ಕೊಟ್ಟು ಆ್ಯಸಿಡ್ ದಾಳಿ ನಡೆಸಲಾಗಿದೆ. ಯೋಗೇಶ್ ಎಂಬಾತನಿಗೆ ಆರೋಪಿ ರಮೇಶ್ ಸುಪಾರಿ ನೀಡಿದ್ದ. ದೇವಿಯಿಂದ ರಮೇಶ್ ಸಂಸಾರ ಹಾಳಾಗಿದೆ ಎಂಬ ಆರೋಪ ಇದೆ. ದೇವಿಯ ಮಾತು ಕೇಳಿ ರಮೇಶನನ್ನು ಪತ್ನಿ ಮತ್ತು ಮಕ್ಕಳು ಬಿಟ್ಟು ಹೋಗಿದ್ದಾರಂತೆ. ಇದೇ ನೋವನ್ನ ತನ್ನ ಗೆಳತಿ ಸ್ವಾತಿ ಬಳಿ ರಮೇಶ್​ ಹೇಳಿಕೊಂಡಿದ್ದ. ಈ ವೇಳೆ ಯೋಗೇಶ್​ನನ್ನ ಸ್ವಾತಿ ಪರಿಚಯ ಮಾಡಿಕೊಟ್ಟಿದ್ದಳು.

ನಂತರ ಆರೋಪಿಗಳು ಸಂಚು ರೂಪಿಸಿದ್ದರು. ಈ ವೇಳೆ ಆರೋಪಿಗಳಿಗೆ ದೇವಿ ಮನೆಯನ್ನ ಸ್ವಾತಿ ತೋರಿಸಿಕೊಟ್ಟಿದ್ದಳು. ಮೂರು ಬಾರೀ ಆ್ಯಸಿಟ್ ಹಾಕಲು ಸಂಚು ನಡೆದಿತ್ತು. ಈ ವೇಳೆ ಮಲಗಿದ್ದ ಚಾಪೆಗೆ ಆ್ಯಸಿಡ್ ಹಾಕಿ ಬಂದಿದ್ದರು. ಇದರಿಂದ ದೇವಿ ಮುಖ ಹಾಗೂ ಬೆನ್ನಿಗೆ ತಾಗಿ ಗಂಭೀರ ಗಾಯವಾಗಿದೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದೇವಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಆರೋಪಿಗಳನ್ನ ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net