

ಬೆಳಗಾವಿ: ಕುಂದಾನಗರಿ ಬೆಳಗಾವಿಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹೀನಾಯವಾಗಿ ಸೋತು ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿರುವ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ), ಇದೀಗ ಬೆಳಗಾವಿಯಲ್ಲಿ ದಿನಕ್ಕೊಂದು ನಾಟಕವಾಡುತ್ತಿದೆ. ಭಾಷಾ ರಾಜಕಾರಣ ಮಾಡಿ ಮರಾಠಿಗರು ಮತ್ತು ಕನ್ನಡಿಗರನ್ನು ಎತ್ತಿಕಟ್ಟುವ ನೀಚ ಕೃತ್ಯಕ್ಕೆ ಇಳಿದಿದ್ದಾರೆ.
ಸೋತು ಸುಣ್ಣವಾದ ಬಳಿಕ ಪದೇಪದೇ ಕ್ಯಾತೆ ತೆಗೆಯುತ್ತಿರುವ ಎಂಇಎಸ್, ಬೆಳಗಾವಿಯಲ್ಲಿ ಭಾಷಾ ರಾಜಕಾರಣದ ವಿಷಬೀಜ ಬಿತ್ತಲು ಪ್ರಯತ್ನಿಸುತ್ತಿದೆ. ಗಣೇಶ ವಿಸರ್ಜನೆ ವೇದಿಕೆ ಮೇಲೆ ಕನ್ನಡ ನಾಮಫಲಕವಷ್ಟೇ ಇದ್ದಿದ್ದಕ್ಕೆ ಎಂಇಎಸ್ ಬೆಂಬಲಿಗರ ಹೊಟ್ಟೆಗೆ ಬೆಂಕಿ ಬಿದ್ದಂತಾಗಿದೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ.
ಎಂಇಎಸ್ ಪುಂಡರ ವಿರುದ್ಧ ಕಿಡಿಕಾರಿದ್ದ ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧವೂ ಜಾಲತಾಣದಲ್ಲಿ ದ್ವೇಷದ ಪೋಸ್ಟ್ ಹಾಕುತ್ತಿದ್ದು, ಮರಾಠಿ ಭಾಷಿಕರ ಪ್ರಚೋದನೆಗೆ ಯತ್ನಿಸುತ್ತಿದ್ದಾರೆ. ಮರಾಠಿ ಭಾಷಿಕರ ಮೇಲೆ ಮಹಾನಗರ ಪಾಲಿಕೆ ಅಧಿಕಾರಿಗಳು ಧಮ್ಕಿ ಹಾಕಿದ್ದಾರೆಂದು ಸುಳ್ಳು ಪೋಸ್ಟ್ಗಳನ್ನು ಹಾಕಿದ್ದಾರೆ.
ಮೊನ್ನೆ ರಾತ್ರಿ ಬೆಳಗಾವಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ಕಾರ್ಯಕ್ರಮ ನಡೆದಿತ್ತು. ಈ ವೇಳೆ ಕಾರ್ಯಕ್ರಮ ವೇದಿಕೆ ಮೇಲೆ ಕನ್ನಡ ಬೋರ್ಡ್ ಮಾತ್ರ ಇದ್ದಿದ್ದಕ್ಕೆ ಮಹಾನಗರ ಪಾಲಿಕೆ ಉಪ ಆಯುಕ್ತೆ ಲಕ್ಷ್ಮೀ ನಿಪ್ಪಾಣಿಕರ್‌ಗೆ ಎಂಇಎಸ್ ಪುಂಡರು ಆವಾಜ್ ಹಾಕಿದ್ದರು. ನಿನ್ನ ನೋಡ್ಕೋತೀವಿ ಅಂತಾ ಮಹಿಳಾ ಅಧಿಕಾರಿಗೆ ಆವಾಜ್ ಹಾಕಿದ್ದರು. ಆದರೆ, ಇದಕ್ಕೆ ಹೆದರದ ಉಪ ಆಯುಕ್ತೆ ಎಂಇಎಸ್ ಪುಂಡರನ್ನು ತರಾಟೆಗೆ ತಗೆದುಕೊಂಡಿದ್ದರು.
ಮತ್ತೊಂದೆಡೆ ಎಂಇಎಸ್ ಅಭ್ಯರ್ಥಿಗಳ ಚುನಾವಣಾ ಪ್ರಚಾರ ನಾಮಫಲಕ ತೆರವುಗೊಳಿಸಿದ್ದಕ್ಕೂ ಕಿಡಿಕಾರಿದ್ದಾರೆ. ವಾರ್ಡ್ ನಂಬರ್ 15ರ ಎಂಇಎಸ್ ಅಭ್ಯರ್ಥಿ ಚುನಾವಣಾ ಪ್ರಚಾರದ ನಾಮಫಲಕ ತೆರವು ವಿಚಾರದ ಬಗ್ಗೆ ಎಂಇಎಸ್ ಯುವ ಸಮಿತಿ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಅಂದು ಮರಾಠಿ ಬೋರ್ಡ್, ಇಂದು ಮರಾಠಿ ಬೋರ್ಡ್ ತೆರವು ಎಂದು ಪೋಸ್ಟ್ ಮಾಡಿದ್ದು, ಪದೇಪದೆ ಭಾಷಾ ರಾಜಕಾರಣ ವಿಷಬೀಜ ಬಿತ್ತುತ್ತಿರುವ ಎಂಇಎಸ್ ವಿರುದ್ಧ ಕ್ರಮಕ್ಕೆ ಕನ್ನಡ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ. (ದಿಗ್ವಿಜಯ ನ್ಯೂಸ್)