

ತುಮಕೂರು: ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಉದ್ಯಮಿ ಹಾಗೂ ಮಹೀಂದ್ರಾ ಗ್ರೂಪ್ ಆಫ್ ಚೇರ್ಮನ್ ಆನಂದ್ ಮಹೀಂದ್ರಾ ಅವರು ತಮ್ಮ ಕಣ್ಣಿಗೆ ಬಿದ್ದಂತಹ ವಿಶೇಷತೆಗಳನ್ನು ಪರಿಚಯಿಸುವ ಜತೆಗೆ ಅನೇಕ ವಿಚಾರಗಳ ಬಗ್ಗೆ ಜಾಲತಾಣ ಮೂಲಕವೇ ಧ್ವನಿ ಎತ್ತುತ್ತಿರುತ್ತಾರೆ. ಇದೀಗ ತುಮಕೂರಿನ ತಮ್ಮ ಎಸ್ಯುವಿ ಶೋರೂಮ್ನಲ್ಲಿ ಕಾರು ಖರೀದಿಸಲು ಬಂದ ರೈತನಿಗೆ ಸಿಬ್ಬಂದಿ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟರ್ನಲ್ಲಿ ಸಂದೇಶವೊಂದನ್ನು ರವಾನಿಸಿದ್ದಾರೆ.
ಆನಂದ್ ಮಹೀಂದ್ರಾಗೂ ಮುಂಚೆ ಮಹೀಂದ್ರಾ ಕಂಪನಿ ಸಿಇಒ ವಿಜಯ್ ನಕ್ರಾ ಅವರು ಟ್ವೀಟ್ ಮಾಡಿದ್ದು, ಡೀಲರ್ಗಳು ಗ್ರಾಹಕ ಕೇಂದ್ರಿತ ಅನುಭವವನ್ನು ನೀಡುವ ಅವಿಭಾಜ್ಯ ಅಂಗವಾಗಿದ್ದಾರೆ ಮತ್ತು ನಮ್ಮ ಎಲ್ಲಾ ಗ್ರಾಹಕರ ಗೌರವ ಮತ್ತು ಘನತೆಯನ್ನು ನಾವು ಖಚಿತಪಡಿಸುತ್ತೇವೆ. ತುಮಕೂರಿನಲ್ಲಿ ನಡೆದ ಘಟನೆಯ ಕುರಿತು ತನಿಖೆ ನಡೆಸುತ್ತಿದ್ದೇವೆ ಮತ್ತು ಸಿಬ್ಬಂದಿಗೆ ಸಮಾಲೋಚನೆ ಮತ್ತು ತರಬೇತಿ ನೀಡುವುದಲ್ಲದೇ ಅವರು ಯಾವುದೇ ನಿಯಮ ಉಲ್ಲಂಘನೆ ಮಾಡಿದ ಸಂದರ್ಭದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ವಿಜಯ್ ನಕ್ರಾ ಅವರ ಟ್ವೀಟ್ ಅನ್ನು ಕೋಟ್ ಮಾಡಿ ಆನಂದ್ ಮಹೀಂದ್ರ ಅವರು ಕೂಡ ಸಂದೇಶವೊಂದನ್ನು ರವಾನಿಸಿದ್ದಾರೆ. ನಮ್ಮ ಸಮುದಾಯಗಳು ಮತ್ತು ಎಲ್ಲಾ ಪಾಲುದಾರರನ್ನು ಬೆಳೆಸುವುದೇ ನಮ್ಮ ಕಂಪನಿಯ ಪ್ರಮುಖ ಉದ್ದೇಶವಾಗಿದೆ. ಅದರಲ್ಲೂ, ವ್ಯಕ್ತಿಯ ಘನತೆಯನ್ನು ಎತ್ತಿಹಿಡಿಯುವುದು ಪ್ರಮುಖ ಮೌಲ್ಯವಾಗಿದೆ. ಈ ವಿಚಾರದಲ್ಲಿ ಏನೇ ತಪ್ಪಾಗಿದ್ದರು ಅದನ್ನು ಬಹಳ ತುರ್ತಾಗಿ ಪರಿಹರಿಸಲಾಗುವುದು ಎಂದು ಹೇಳಿದ್ದಾರೆ.
ಆಗಿದ್ದೇನು?
ದಿಗ್ಗಜರು ಸಿನಿಮಾದಲ್ಲಿ ಅಂಬರೀಷ್ ಮತ್ತು ವಿಷ್ಣುವರ್ಧನ್ ಕಾರು ಖರೀದಿಸಲೆಂದು ಶೋ ರೂಂಗೆ ಹೋದಾಗ ಇವರ ಉಡುಗೆತೊಡುಗೆ ನೋಡಿ ಅಲ್ಲಿನ ಸಿಬ್ಬಂದಿ ಕೀಳಾಗಿ ಕಾಣುವ ದೃಶ್ಯದ ರೀತಿಯಲ್ಲೇ ನಿಜವಾದ ಘಟನೆ ತುಮಕೂರಿನ ಮಹೀಂದ್ರಾ ಕಾರು ಶೋ ರೂಂನಲ್ಲಿ ಶುಕ್ರವಾರ (ಜ.21) ಸಂಭವಿಸಿದೆ.
ಕಾರು ಖರೀದಿಸಲೆಂದು ಹೆಬ್ಬೂರು ಹೋಬಳಿಯ ರಾಮನಪಾಳ್ಯದ ಯುವಕ ಕೆಂಪೇಗೌಡ, ತುಮಕೂರಿನ ಶೋ ರೂಂಗೆ ಬಂದಿದ್ದ ವೇಳೆ ಅವನ ವೇಷಭೂಷಣವನ್ನು ನೋಡಿ ಅಲ್ಲಿನ ಸಿಬ್ಬಂದಿ ಅವಮಾನ ಮಾಡಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಕೆಂಪೇಗೌಡ ಒಂದೇ ಗಂಟೆಯಲ್ಲಿ 10 ಲಕ್ಷ ಹಣ ತರಿಸಿಬಿಟ್ಟರು. ಇದನ್ನು ಕಂಡ ಶೋ ರೂಂ ಸಿಬ್ಬಂದಿ ಶಾಕ್ ಆದರು. ಮೂರ್ನಾಲ್ಕು ದಿನಗಳ ಬಳಿಕ ಕಾರು ಡೆಲಿವರಿ ಕೊಡ್ಹೋದಾಗಿ ಸಿಬ್ಬಂದಿ ಹೇಳುತ್ತಿದ್ದಂತೆ, ಗರಂ ಆದ ಯುವಕ, ಅವಮಾನಿಸುವ ಮುನ್ನ ಇದರ ಬಗ್ಗೆ ಅರಿವು ಇರಬೇಕಿತ್ತು. ನನಗೀಗ ಕಾರು ಬೇಕೇಬೇಕು ಅಂತಾ ಪಟ್ಟು ಹಿಡಿದಿದ್ದ. ಈ ವೇಳೆ ಸಿಬ್ಬಂದಿ ಹಾಗೂ ಯುವಕನ ನಡುವೆ ಮಾತಿನ ಚಕಮಕಿ ನಡೆದಿದ್ದು, ಸ್ಥಳಕ್ಕೆ ಬಂದ ತಿಲಕ್ ಪಾರ್ಕ್ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ಸಿಬ್ಬಂದಿ ಹಾಗೂ ಯುವಕನ ಬಳಿ ಮುಚ್ಚಳಿಕೆ ಪತ್ರ ಬರೆಸಿಕೊಂಡು ಪ್ರಕರಣ ಇತ್ಯರ್ಥ ಪಡಿಸಿದರು. ಬಳಿಕ ಈ ಘಟನೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ, ಇದೀಗ ಮಹೀಂದ್ರಾ ಕಂಪನಿಯ ಸಂಸ್ಥಾಪಕ ಆನಂದ್ ಮಹೀಂದ್ರಾ ಗಮನಕ್ಕೂ ಬಂದಿದ್ದು, ಈ ಬಗ್ಗೆ ಟ್ವೀಟ್ ಮಾಡಿ ಸಂದೇಶವೊಂದನ್ನು ರವಾನಿಸಿದ್ದಾರೆ. (ಏಜೆನ್ಸೀಸ್)