More

    ಉನ್ನತ ಸಾಧಕರಿಗೆ ದೇಶದ ಸಲಾಂ: ಜ.ರಾವತ್, ಕಲ್ಯಾಣ ಸಿಂಗ್ ಪದ್ಮವಿಭೂಷಣ, ಗುಲಾಂ ನಬಿ ಆಜಾದ್ ಪದ್ಮಭೂಷಣ

    ವಾಡಿಕೆಯಂತೆ ಗಣರಾಜ್ಯೋತ್ಸವದ ಹಿಂದಿನ ದಿನ ಪದ್ಮಪುರಸ್ಕಾರಗಳನ್ನು ಕೇಂದ್ರ ಸರ್ಕಾರ ಘೋಷಿಸಿದ್ದು, 2022ನೇ ಸಾಲಿನಲ್ಲಿ ನಾಲ್ವರು ಪದ್ಮವಿಭೂಷಣ, 17 ಮಂದಿ ಪದ್ಮಭೂಷಣ, 107 ಸಾಧಕರು ಪದ್ಮಶ್ರೀ ಪುರಸ್ಕಾರಗಳಿಗೆ ಆಯ್ಕೆ ಆಗಿದ್ದಾರೆ. ಈ ಪೈಕಿ 13 ಜನರಿಗೆ ಮರಣೋತ್ತರವಾಗಿ ಮತ್ತು ಎರಡು ಜೋಡಿಗೆ (ನಾಲ್ವರಿಗೆ) ಜಂಟಿಯಾಗಿ ಪ್ರಶಸ್ತಿ ಘೋಷಣೆ ಆಗಿದೆ. ತೆರೆಮರೆ ಸಾಧಕರನ್ನು ಗುರುತಿಸುವ ಪರಿಪಾಠ ಈ ಸಲವೂ ಮುಂದುವರಿದಿದೆ.

    ಪದ್ಮವಿಭೂಷಣ ಪುರಸ್ಕೃತರು: ಪ್ರಭಾ ಅತ್ರೆ (ಕಲೆ), ಮರಣೋತ್ತರವಾಗಿ ರಾಧೆಶ್ಯಾಮ್ ಖೆಮ್ಕಾ (ಸಾಹಿತ್ಯ-ಶಿಕ್ಷಣ), ಜನರಲ್ ಬಿಪಿನ್ ರಾವತ್ (ನಾಗರಿಕ ಸೇವೆ), ಕಲ್ಯಾಣ ಸಿಂಗ್ (ರಾಜಕೀಯ)

    ಪದ್ಮಭೂಷಣ: ರಾಜಕೀಯ ಕ್ಷೇತ್ರದಲ್ಲಿ ಗುಲಾಂ ನಬಿ ಆಜಾದ್, ಬುದ್ದದೇವ ಭಟ್ಟಾಚಾರ್ಯ, ಕಲಾ ಕ್ಷೇತ್ರದಲ್ಲಿ ವಿಕ್ಟರ್ ಬ್ಯಾನರ್ಜಿ, ಗುರ್ವಿುತ್ ಬವಾ (ಮರಣೋತ್ತರ), ರಶೀದ್ ಖಾನ್, ವಾಣಿಜ್ಯ ಮತ್ತು ಕೈಗಾರಿಕಾ ವಲಯದಲ್ಲಿ ನಟರಾಜನ್ ಚಂದ್ರಶೇಖರನ್, ಕೃಷ್ಣ ಎಲ್ಲಾ ಮತ್ತು ಸುಚಿತ್ರಾ ಎಲ್ಲಾ (ದಂಪತಿ), ಸತ್ಯ ನಾರಾಯಣ ನಾದೆಲ್ಲಾ (ಮೈಕ್ರೋಸಾಫ್ಟ್ ಸಿಇಒ, ಅಮೆರಿಕ) ಸುಂದರರಾಜನ್ ಪಿಚೈ (ಗೂಗಲ್​ನ ಆಲ್ಪಾಬೆಟ್ ಸಿಇಒ, ಅಮೆರಿಕ), ಸೈರಸ್ ಪೂನಾವಾಲಾ, ಸಾಹಿತ್ಯ-ಶಿಕ್ಷಣ ಕ್ಷೇತ್ರದಲ್ಲಿ ಪ್ರತಿಭಾ ರಾಯ್, ಸ್ವಾಮಿ ಸಚ್ಚಿದಾನಂದ, ವಶಿಷ್ಠ ತ್ರಿಪಾಠಿ, ವಿಜ್ಞಾನ ಮತ್ತು ಇಂಜಿನಿಯರಿಂಗ್​ನಲ್ಲಿ ಸಂಜಯ ಜಯರಾಂ (ಮರಣೋತ್ತರ), ಕ್ರೀಡೆಯಲ್ಲಿ ದೇವೇಂದ್ರ ಝಾಝಾರಿಯಾ, ನಾಗರಿಕ ಸೇವೆಗೆ ರಾಜೀವ್ ಮೆಹಿರ್ಷಿ (ಮಾಜಿ ಸಿಎಜಿ), ಇತರ- ಮಧುರ್ ಜಾಫ್ರಿ.

    ಪದ್ಮಭೂಷಣ ತಿರಸ್ಕರಿಸಿದ ಬುದ್ಧದೇವ ಭಟ್ಟಾಚಾರ್ಯ: ಪಶ್ಚಿಮ ಬಂಗಾಳದ ಮಾಜಿ ಸಿಎಂ ಬುದ್ಧವೇವ ಭಟ್ಟಾಚಾರ್ಯ (77) ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ. ‘ನನ್ನನ್ನು ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆಂದು ಅನೇಕರು ಹೇಳುತ್ತಿದ್ದಾರೆ. ಈ ಬಗ್ಗೆ ನನಗೇನೂ ಗೊತ್ತಿಲ್ಲ. ಇದು ನಿಜವೇ ಆಗಿದ್ದರೆ ನಾನು ಪ್ರಶಸ್ತಿಯನ್ನು ತಿರಸ್ಕರಿಸುತ್ತೇನೆ’ ಎಂದು ಅವರು ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪ್ರಧಾನಿ ಮೋದಿಯ ಟೀಕಾಕಾರರಲ್ಲಿ ಭಟ್ಟಾಚಾರ್ಯ ಕೂಡ ಪ್ರಮುಖರು.

    ಜನರಲ್ ಬಿಪಿನ್ ರಾವತ್

    ಉನ್ನತ ಸಾಧಕರಿಗೆ ದೇಶದ ಸಲಾಂ: ಜ.ರಾವತ್, ಕಲ್ಯಾಣ ಸಿಂಗ್ ಪದ್ಮವಿಭೂಷಣ, ಗುಲಾಂ ನಬಿ ಆಜಾದ್ ಪದ್ಮಭೂಷಣಕಳೆದ ಡಿಸೆಂಬರ್ 8ರಂದು ಊಟಿ ಬಳಿಯ ಕೂನೂರಿನಲ್ಲಿ ಹೆಲಿಕಾಪ್ಟರ್ ಪತನಗೊಂಡು ಮರಣವನ್ನಪ್ಪಿದ ಜನರಲ್ ಬಿಪಿನ್ ಸಿಂಗ್ ರಾವತ್​ಗೆ (63) ಪದ್ಮವಿಭೂಷಣ ಗೌರವ ಸಂದಿದೆ. ಭೂಸೇನೆಯ ಮುಖ್ಯಸ್ಥರಾಗಿ ನಿವೃತ್ತರಾದ ಅವರನ್ನು 2020ರ ಜನವರಿಯಲ್ಲಿ ಹೊಸದಾಗಿ ರಚಿಸಲಾದ ಮೂರೂ ಪಡೆಗಳ ಪ್ರಧಾನ ದಂಡನಾಯಕ (ಸಿಡಿಎಸ್) ಹುದ್ದೆಗೆ ನೇಮಿಸಲಾಗಿತ್ತು. ಉತ್ತರಾಖಂಡದ ಪೌರಿಯಲ್ಲಿ ಜನಿಸಿದ ಬಿಪಿನ್ ಅವರದ್ದು ಸೇನಾ ಹಿನ್ನೆಲೆಯ ಕುಟುಂಬ. ತಮ್ಮ ತಂದೆ ಸೇವೆ ಸಲ್ಲಿಸಿದ್ದ 11 ಗೋರ್ಖಾ ರೈಫಲ್ಸ್​ಗೆ 1978ರಲ್ಲಿ ಸೇರಿದ ಅವರು, ಹಂತ ಹಂತವಾಗಿ ಪದೋನ್ನತಿ ಪಡೆದು ಭೂಸೇನೆಯ ಮುಖ್ಯಸ್ಥರಾಗಿ, ಸಿಡಿಎಸ್ ಆಗಿ ದೇಶಸೇವೆ ಸಲ್ಲಿಸಿದ್ದಾರೆ. ಗಡಿಯಲ್ಲಿ ತಂಟೆ ತೆಗೆಯುವ ಪಾಕ್ ಮತ್ತು ಚೀನಾಗಳಿಗೆ ಸಿಂಹಸ್ವಪ್ನವಾಗಿದ್ದರು. ಅವರ ಕಾಲದಲ್ಲಿ ಸೇನೆಗೆ ಹೊಸ ಶಸ್ತ್ರಾಸ್ತ್ರ ಖರೀದಿ ವಿಪುಲವಾಗಿ ನಡೆಯಿತು. ಸೇನೆ ಆಧುನಿಕರಣ ಮತ್ತು ಸುಧಾರಣೆಗಾಗಿ ಶ್ರಮಿಸಿದ್ದರು. ಹೆಲಿಕಾಪ್ಟರ್ ದುರಂತದಲ್ಲಿ ಅವರ ಪತ್ನಿ ಮಧುಲಿಕಾ ಕೂಡ ಮರಣ ಹೊಂದಿದರು.

    ರಾಜನೀತಿಯ ಮೇಧಾವಿ

    ಉನ್ನತ ಸಾಧಕರಿಗೆ ದೇಶದ ಸಲಾಂ: ಜ.ರಾವತ್, ಕಲ್ಯಾಣ ಸಿಂಗ್ ಪದ್ಮವಿಭೂಷಣ, ಗುಲಾಂ ನಬಿ ಆಜಾದ್ ಪದ್ಮಭೂಷಣಹಿಂದುಳಿದ ಸಮುದಾಯದ ದನಿ, ಅಯೋಧ್ಯೆ ರಾಮಮಂದಿರ ನಿರ್ಮಾಣ ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸಿದ ಕಲ್ಯಾಣ್ ಸಿಂಗ್ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಗೌರವ ಸಂದಿದೆ. ಜನಸಂಘದೊಂದಿಗೆ ರಾಜಕೀಯ ಪ್ರವಾಸ ಆರಂಭಿಸಿದ ಇವರು ಹಲವು ತಲೆಮಾರಿನ ನಾಯಕರನ್ನು ಬೆಳೆಸಿದರು. 1991ರ ಜೂನ್​ನಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. 1992 ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿನ ವಿವಾದಿತ ಬಾಬ್ರಿ ಕಟ್ಟಡ ಧ್ವಂಸಗೊಂಡಿತು. ನೈತಿಕ ಹೊಣೆ ಹೊತ್ತು ಸಿಂಗ್ ರಾಜೀನಾಮೆ ನೀಡಿದರು. 1997ರ ಸೆಪ್ಟೆಂಬರ್​ನಲ್ಲಿ ಎರಡನೇ ಬಾರಿ ಉ.ಪ್ರ.ದ ಮುಖ್ಯಮಂತ್ರಿಯಾದ ಇವರು 1999 ನವೆಂಬರ್​ವರೆಗೆ ಈ ಹುದ್ದೆಯಲ್ಲಿ ಮುಂದುವರಿದರು. 2014 ಸೆಪ್ಟೆಂಬರ್ 4ರಿಂದ 2019 ಸೆಪ್ಟೆಂಬರ್ 8ರವರೆಗೆ ರಾಜಸ್ಥಾನದ ರಾಜ್ಯಪಾಲರಾಗಿದ್ದರು.

    ಅನುಭವಿ, ಚತುರ ನಾಯಕ

    ಉನ್ನತ ಸಾಧಕರಿಗೆ ದೇಶದ ಸಲಾಂ: ಜ.ರಾವತ್, ಕಲ್ಯಾಣ ಸಿಂಗ್ ಪದ್ಮವಿಭೂಷಣ, ಗುಲಾಂ ನಬಿ ಆಜಾದ್ ಪದ್ಮಭೂಷಣಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯಾಗಿ, ಯುಪಿಎ ಸರ್ಕಾರದಲ್ಲಿ ಸಂಸದೀಯ ವ್ಯವಹಾರಗಳ ಸಚಿವರಾಗಿ, 2021 ಫೆಬ್ರವರಿಯವರೆಗೆ ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕನಾಗಿ ಕಾರ್ಯನಿರ್ವಹಿಸಿದ ಕಾಂಗ್ರೆಸಿನ ಹಿರಿಯ ಮುಖಂಡ ಮತ್ತು ಈಗ ಕಾಂಗ್ರೆಸ್ ನಾಯಕತ್ವ ವಿರುದ್ಧ ಬಂಡಾಯವೆದ್ದಿರುವ ‘ಜಿ-23’ ನಾಯಕರಲ್ಲಿ ಒಬ್ಬರಾಗಿರುವ ಗುಲಾಂ ನಬಿ ಆಜಾದ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ನಾಯಕತ್ವದ ಅನುಭವ, ಜಟಿಲ ಸಮಸ್ಯೆಗಳನ್ನು ಬಗೆಹರಿಸುವ ಚಾಣಾಕ್ಷತೆಯಿಂದ ಪಕ್ಷಾತೀತವಾಗಿ ಮೆಚ್ಚುಗೆ ಗಳಿಸಿರುವ ನಾಯಕ. ರಾಜ್ಯಸಭೆಯಲ್ಲಿ ಅವರನ್ನು ಬೀಳ್ಕೊಡುವಾಗ ಭಾವುಕರಾಗಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ, ಆಜಾದ್ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿನ ಹಲವು ಘಟನೆಗಳನ್ನು ಸ್ಮರಿಸಿಕೊಂಡಿದ್ದರಲ್ಲದೆ, ಸರ್ಕಾರ ಅವರ ಮಾರ್ಗದರ್ಶನವನ್ನು ಸದಾ ಪಡೆಯಲಿದೆ ಎಂದಿದ್ದರು.

    ಗಾಯನಪ್ರಭೆ

    ಉನ್ನತ ಸಾಧಕರಿಗೆ ದೇಶದ ಸಲಾಂ: ಜ.ರಾವತ್, ಕಲ್ಯಾಣ ಸಿಂಗ್ ಪದ್ಮವಿಭೂಷಣ, ಗುಲಾಂ ನಬಿ ಆಜಾದ್ ಪದ್ಮಭೂಷಣಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿರುವ ಪ್ರಭಾ ಅತ್ರೆ (89) ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ವಿದುಷಿ. ಕಿರಾನಾ-ಘರಾನಾ ಶೈಲಿಯ ಗಾಯಕಿಯಾದ ಇವರು ಸಂಗೀತದ ಕುರಿತು ಹಿಂದಿ ಮತ್ತು ಇಂಗ್ಲಿಷ್​ನಲ್ಲಿ 11 ಪುಸ್ತಕಗಳನ್ನು ಬರೆದಿದ್ದಾರೆ. ಪುಣೆಯಲ್ಲಿ ಜನಿಸಿದ ಇವರು, ತಂಗಿ ಉಷಾ ಜತೆಗೂಡಿ ಸಂಗೀತವನ್ನು ಆರಂಭಿಕ ಹಂತದಲ್ಲಿ ಕಲಿತರು. ಗುರುಕುಲ ತೆರೆದು 1969ರಿಂದ ವಿದ್ಯಾದಾನವನ್ನೂ ಮಾಡುತ್ತಿರುವ ಅವರು ಅವಿವಾಹಿತೆ.

    ಅಕ್ಷರಸೇವೆ

    ಉನ್ನತ ಸಾಧಕರಿಗೆ ದೇಶದ ಸಲಾಂ: ಜ.ರಾವತ್, ಕಲ್ಯಾಣ ಸಿಂಗ್ ಪದ್ಮವಿಭೂಷಣ, ಗುಲಾಂ ನಬಿ ಆಜಾದ್ ಪದ್ಮಭೂಷಣಬಹುಭಾಷೆಯಲ್ಲಿ ಧಾರ್ವಿುಕ ಗ್ರಂಥಗಳ ಪ್ರಕಟಣೆಯಲ್ಲಿ ಅಗ್ರಗಣ್ಯ ವಾದ ಗೋರಖಪುರದ ಗೀತಾ ಪ್ರೆಸ್ ಟ್ರಸ್ಟ್​ನ ಅಧ್ಯಕ್ಷರಾಗಿದ್ದ ರಾಧೆಶ್ಯಾಮ್ ಖೆಮ್ಕಾ (87) ಮರಣೋತ್ತರವಾಗಿ ಪದ್ಮವಿಭೂಷಣ ಗೌರವಕ್ಕೆ ಪಾತ್ರರಾಗಿದ್ದಾರೆ. ಸನಾತನ ಧರ್ಮದ ಮುಖವಾಣಿಯಾದ ‘ಕಲ್ಯಾಣ್’ ಮಾಸಿಕ ಪತ್ರಿಕೆಗೆ ಖೆಮ್ಕಾ 38 ವರ್ಷ ಸಂಪಾದಕರಾಗಿದ್ದರು. ವಾರಾಣಸಿ ನಿವಾಸಿಯಾಗಿದ್ದ ಅವರು, 2021 ಏಪ್ರಿಲ್ 4ರಂದು ನಿಧನರಾದರು.

    ಸಾಹುಕಾರ್ ಜಾನಕಿ

    ಉನ್ನತ ಸಾಧಕರಿಗೆ ದೇಶದ ಸಲಾಂ: ಜ.ರಾವತ್, ಕಲ್ಯಾಣ ಸಿಂಗ್ ಪದ್ಮವಿಭೂಷಣ, ಗುಲಾಂ ನಬಿ ಆಜಾದ್ ಪದ್ಮಭೂಷಣಮೂಲತಃ ಆಂಧ್ರದವರಾದ ಜಾನಕಿ, ‘ಸಾಹುಕಾರು’ ತೆಲುಗು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಈ ಚಿತ್ರದಲ್ಲಿನ ಅವರ ಪಾತ್ರ ಜನಪ್ರಿಯವಾಗಿ, ‘ಸಾಹುಕಾರ್’ ಅವರ ಹೆಸರಿಗೆ ಶಾಶ್ವತವಾಗಿ ಅಂಟಿಕೊಂಡಿತು. ನಂತರದ ದಿನಗಳಲ್ಲಿ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಬಹುಬೇಡಿಕೆ ನಟಿಯಾದ ಜಾನಕಿ, 1954ರಲ್ಲಿ ಬಿಡುಗಡೆಯಾದ ‘ದೇವ ಕನ್ನಿಕಾ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇದುವರೆಗೂ ಕನ್ನಡ, ತೆಲುಗು, ತಮಿಳಿನ 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

    ಒಲಿಂಪಿಕ್ಸ್ ತಾರೆಯರಿಗೆ ಪದ್ಮಗೌರವ

    ಉನ್ನತ ಸಾಧಕರಿಗೆ ದೇಶದ ಸಲಾಂ: ಜ.ರಾವತ್, ಕಲ್ಯಾಣ ಸಿಂಗ್ ಪದ್ಮವಿಭೂಷಣ, ಗುಲಾಂ ನಬಿ ಆಜಾದ್ ಪದ್ಮಭೂಷಣ ಉನ್ನತ ಸಾಧಕರಿಗೆ ದೇಶದ ಸಲಾಂ: ಜ.ರಾವತ್, ಕಲ್ಯಾಣ ಸಿಂಗ್ ಪದ್ಮವಿಭೂಷಣ, ಗುಲಾಂ ನಬಿ ಆಜಾದ್ ಪದ್ಮಭೂಷಣ

    ಟೋಕಿಯೊ ಒಲಿಂಪಿಕ್ಸ್ ಸ್ವರ್ಣ ಪದಕ ವಿಜೇತ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ, ಟೋಕಿಯೊ ಪ್ಯಾರಾಲಿಂಪಿಕ್ಸ್ ಪದಕ ವಿಜೇತರಾದ ದೇವೇಂದ್ರ ಜಜಾರಿಯಾ ಹಾಗೂ ಪ್ರಮೋದ್ ಭಗತ್ ಸೇರಿದಂತೆ 10 ಕ್ರೀಡಾಪಟುಗಳು ಪದ್ಮ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ. ಮೂರು ಪ್ಯಾರಾಲಿಂಪಿಕ್ಸ್ ಪದಕ ವಿಜೇತ ರಾಜಸ್ಥಾನದ ದೇವೇಂದ್ರ ಜಜಾರಿಯಾಗೆ ಪದ್ಮಭೂಷಣ ಪ್ರಶಸ್ತಿ ಒಲಿದಿದ್ದರೆ, ನೀರಜ್ ಮತ್ತು ಪ್ರಮೋದ್ ಪದ್ಮಶ್ರೀಗೆ ಭಾಜನರಾಗಿದ್ದಾರೆ. ಪ್ಯಾರಾಥ್ಲೀಟ್​ಗಳಾದ ಸುಮಿತ್ ಅಂತಿಲ್, ಫೈಸಲ್ ಅಲಿ ದಾರ್, ಅವನಿ ಲೇಖರ, ಹಾಕಿ ಆಟಗಾರ್ತಿ ವಂದನಾ ಕಟಾರಿಯಾಗೆ ಪದ್ಮಶ್ರೀ ದಕ್ಕಿದೆ. ಭಾರತದ ಫುಟ್​ಬಾಲ್ ತಂಡದ ಮಾಜಿ ನಾಯಕ 67 ವರ್ಷದ ಬ್ರಹ್ಮಾನಂದ ಸಂಖ್ವಾಲ್ಕರ್ ಹಾಗೂ ಕೇರಳದ ಕಲಾರಿ ಪಯಟ್ಟು ಪಟು 93 ವರ್ಷದ ಶಂಕರನಾರಾಯಣ ಮೆನನ್ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    ಪದ್ಮ ಪುರಸ್ಕಾರ ಆಯ್ಕೆ ಪ್ರಕ್ರಿಯೆ

    ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮ ಪುರಸ್ಕಾರ 2017ರಿಂದೀಚೆಗೆ ಎಲೆಮರೆಯ ಕಾಯಿಯಂತಿರುವ ಸಾಧಕರಿಗೂ ಒಲಿಯತೊಡಗಿದೆ. ಕೇಂದ್ರ ಸರ್ಕಾರ ಈ ಪುರಸ್ಕಾರದ ಆಯ್ಕೆ ಪ್ರಕ್ರಿಯೆಯನ್ನು ಪರಿಷ್ಕರಿಸಿ ಜನಸಾಮಾನ್ಯರೂ ಅರ್ಹ ಸಾಧಕರ ಹೆಸರು ಶಿಫಾರಸು ಮಾಡುವುದಕ್ಕೆ ಅನುಕೂಲ ಕಲ್ಪಿಸಿದೆ. ಪದ್ಮಪುರಸ್ಕಾರ ನಾಮನಿರ್ದೇಶನ ಪ್ರಕ್ರಿಯೆಗೆ ನಿಗದಿತ ( http://www.padmaawards.gov.in) ಜಾಲತಾಣಕ್ಕೆ ಭೇಟಿ ನೀಡಬೇಕು. ಅಲ್ಲಿ, ಖಾತೆ ತೆರೆದು ಬಳಿಕ ‘ನ್ಯೂ ನಾಮಿನಷೇನ್’ ಎಂಬುದನ್ನು ಕ್ಲಿಕ್ ಮಾಡಬೇಕು. ಅಗತ್ಯ ಮಾಹಿತಿಗಳನ್ನು ತುಂಬಿದ ಬಳಿಕ ಸೇವ್ ಆಂಡ್ ನೆಕ್ಸ್ಟ್​ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಂತರ, ಸೈಟೇಷನ್ ತುಂಬಿ, ಫೋಟೊ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಿ ಸೇವ್ ಕೊಡಬೇಕು. ಕೊನೆಗೆ ‘ಫೈನಲ್ ಸಬ್​ವಿುಟ್’ ಕೊಟ್ಟರೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

    ಕರ್ನಾಟಕದ ಪಂಚ ಪದ್ಮಗಳು

    ಉನ್ನತ ಸಾಧಕರಿಗೆ ದೇಶದ ಸಲಾಂ: ಜ.ರಾವತ್, ಕಲ್ಯಾಣ ಸಿಂಗ್ ಪದ್ಮವಿಭೂಷಣ, ಗುಲಾಂ ನಬಿ ಆಜಾದ್ ಪದ್ಮಭೂಷಣಗಮಕ ಕಲಾವಿದ ಕೇಶವಮೂರ್ತಿ

    ಶಿವಮೊಗ್ಗ ತಾಲೂಕಿನ ಮತ್ತೂರು-ಹೊಸಳ್ಳಿಯ ಎಚ್.ಆರ್.ಕೇಶವಮೂರ್ತಿ ಗಮಕ ಕ್ಷೇತ್ರದಲ್ಲಿ ಪರಿಣತರಾಗಿದ್ದು ಹೊಸಹಳ್ಳಿಯಲ್ಲಿರುವ ಗಮಕ ಕಲಾ ಪರಿಷತ್​ನಿಂದ (ಗಮಕ ಆರ್ಟ್ ಅಕಾಡೆಮಿ) ಲಭ್ಯವಿರುವ ಗಮಕದ ಧ್ವನಿ ಹಾಡುಗಳಲ್ಲಿ ಕಾಣಿಸಿಕೊಂಡ ಕಲಾವಿದರಲ್ಲಿ ಒಬ್ಬರು. ಗಮಕ ಕಲಾ ಸಾಧಕರಿಗೆ ನೀಡಲಾಗುವ ಕುಮಾರವ್ಯಾಸ ಪ್ರಶಸ್ತಿ ಗಮಕ ವಾಚಕ ಹೊಸಹಳ್ಳಿ ಕೇಶವಮೂರ್ತಿ ಅವರಿಗೆ ಮೊದಲ ಬಾರಿಗೆ ಒಲಿದಿತ್ತು. ಜತೆಗೆ ವಾಚನದಲ್ಲಿ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದಾರೆ. ವೇದಬ್ರಹ್ಮ ರಾಮಸ್ವಾಮಿ ಶಾಸ್ತ್ರಿ ಮತ್ತು ಲಕ್ಷ್ಮೀದೇವಪ್ಪ ದಂಪತಿ ಪುತ್ರರಾದ ಕೇಶವಮೂರ್ತಿ 1934ರ ಫೆ.22ರಂದು ಹೊಸಹಳ್ಳಿಯಲ್ಲಿ ಜನಿಸಿದ್ದಾರೆ. ಬಾಲ್ಯದಿಂದಲೂ ತಂದೆಯಂತೆ ಯೇ ಗಮಕ ಕಲೆ ಬಗ್ಗೆ ಆಸಕ್ತರಾದ ಅವರು ಗಮಕ ಕಲೆಯನ್ನು ಉಳಿಸಿ ಬೆಳೆಸಲು ಇಡೀ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ.

    ವಿಜ್ಞಾನಿ ಡಾ. ಎಸ್. ಅಯ್ಯಪ್ಪನ್

    ಭಾರತದ ಪ್ರಮುಖ ಕೃಷಿ ಮತ್ತು ಮೀನುಗಾರಿಕೆ ವಿಜ್ಞಾನಿಗಳ ಸಾಲಿನಲ್ಲಿ ಕೇಳಿಬರುವ ಹೆಸರು ಡಾ. ಸುಬ್ಬಣ್ಣ ಅಯ್ಯಪ್ಪನ್. ಡಾ. ಎಸ್.ಅಯ್ಯಪನ್ ಎಂದೇ ಹೆಸರುವಾಸಿಯಾದ ವಿಜ್ಞಾನಿ. ಮಂಗಳೂರು ವಿಶ್ವವಿದ್ಯಾಲಯದಿಂದ ಮೀನುಗಾರಿಕೆ ಉತ್ಪಾದನೆ ಹಾಗೂ ನಿರ್ವಹಣೆ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್​ಡಿ ಪಡೆದಿದ್ದಾರೆ. ಮೀನುಗಾರಿಕೆ ಕುರಿತು ಅತ್ಯಂತ ಹೆಚ್ಚಿನ ಸಂಶೋಧನೆ ಹಾಗೂ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ರಾಷ್ಟ್ರೀಯ ಕೃಷಿ ವಿಜ್ಞಾನಗಳ ಪರಿಷತ್, ಪರಿಸರ ಸಂರಕ್ಷಕರ ಸೊಸೈಟಿ, ಬಯೋಡೈವರ್ಸಿಟಿ ಇಂಡಿಯಾ ಸೇರಿ ಅನೇಕ ಸಂಸ್ಥೆಗಳ ಸಂಶೋಧಕರಾಗಿ ಸೇವೆ ಸಲ್ಲಿಸಿದ್ದಾರೆ. ಭಾರತೀಯ ಕೃಷಿ ಸಂಶೋಧನಾ ಪರಿಷತ್ ಅಧ್ಯಕ್ಷರಾಗಿ, ಪ್ರಧಾನ ನಿರ್ದೇಶಕರಾಗಿ, ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆ(ಡೇರ್) ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಜೀವವಿಜ್ಞಾನ ಸೊಸೈಟಿಯಿಂದ 1996-97ರಲ್ಲಿ ಜಹೂರ್ ಕಾಸಿಮ್ ಚಿನ್ನದ ಪದಕ, ಮೀನುಗಾರಿಕೆಗೆ ನೀಡಿದ ಗಣನೀಯ ಕೊಡುಗೆಗಾಗಿ 1997ರಲ್ಲಿ ಭಾರತೀಯ ಕೃಷಿ ಸಂಶೋಧನಾ ಪರಿಷತ್ (ಐಸಿಎಆರ್) ವಿಶೇಷ ಗೌರವ ಹಾಗೂ ಐಸಿಎಆರ್ ಟೀಮ್ ರಿಸರ್ಚ್ ಸೇರಿ ಅನೇಕ ಗೌರವಗಳಿಗೆ ಪಾತ್ರರಾಗಿದ್ದಾರೆ.

    ಸಾಹಸಿ ರೈತ ಮಹಾಲಿಂಗ ನಾಯ್ಕ!

    ಬಂಟ್ವಾಳ ತಾಲೂಕಿನ ಅಡ್ಯನಡ್ಕ ಸಮೀಪದ 75 ವಯಸ್ಸಿನ ಮಹಾಲಿಂಗ ನಾಯ್ಕ ಅವರು ಕೃಷಿ ಕಾಯಕದ ಮೂಲಕ ಸ್ವಾವಲಂಬಿ ಜೀವನ ಸಾಧ್ಯ ಎಂಬುದನ್ನು ಯುವ ಶಕ್ತಿಗೆ ತೋರಿಸಿಕೊಟ್ಟವರು. ಗುಡ್ಡಕ್ಕೆ ಏಳು ಸುರಂಗ ಕೊರೆದು ತಮ್ಮ ಎರಡು ಎಕರೆ ಕೃಷಿಗೆ ಅಗತ್ಯವಿರುವ ನೀರಿನ ವ್ಯವಸ್ಥೆ ಮಾಡಿಕೊಂಡಿದ್ದಾರೆ. ವಿದ್ಯುತ್ ಬಳಕೆಯಿಲ್ಲದೆ ನೀರನ್ನು ಗುರುತ್ವಾಕರ್ಷಣೆ ಮೂಲಕ ಗಿಡಗಳಿಗೆ ನೀರುಣಿಸುವಂತೆ ಮಾಡಿದ್ದಾರೆ. 300 ಅಡಕೆ, 75 ತೆಂಗು, 200 ಬಾಳೆ ಗಿಡಗಳಿದ್ದು, ಹಟ್ಟಿಗೊಬ್ಬರ ಹಾಗೂ ಕಾಂಪೋಸ್ಟ್ ಹೊರತು ಬೇರಾವುದೇ ಗೊಬ್ಬರ ಬಳಸಿದವರಲ್ಲ.

    ಕವಿ ಸಿದ್ಧಲಿಂಗಯ್ಯ

    ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಸೇರಿ ಹಲವು ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದ ಕವಿ ಡಾ. ಸಿದ್ಧಲಿಂಗಯ್ಯ ಅವರಿಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ. 2021ರ ಜೂನ್ ತಿಂಗಳಲ್ಲಿ ಹೃದಯಾಘಾತದಿಂದ ನಿಧನರಾದರು. ಅವರ ಆತ್ಮಕಥೆ ಊರು ಕೇರಿಯು ಎರಡು ಭಾಗದಲ್ಲಿ ಪ್ರಕಟಗೊಂಡಿದೆ. ಇಂಗ್ಲಿಷ್ ಹಾಗೂ ತಮಿಳು ಭಾಷೆಗೆ ಅನುವಾದಗೊಂಡಿದ್ದು, ಇಂಗ್ಲಿಷ್ ಅನುವಾದವನ್ನು ಕೇಂದ್ರ ಸಾಹಿತ್ಯ ಅಕಾಡೆಮಿಯು ಪ್ರಕಟಿಸಿದೆ. ಅವರ ಹೊಲೆ ಮಾದಿಗರ ಹಾಡು ಕವನ ಸಂಕಲನವು ಭಾರತೀಯ ಸಾಹಿತ್ಯದಲ್ಲಿಯೇ ವಿಶಿಷ್ಟವಾದ ಸ್ಥಾನಗಳಿಸಿರುವ ಶ್ರೇಷ್ಠ ಕೃತಿಯಾಗಿದೆ. ಸಾವಿರಾರು ನದಿಗಳು, ಕಪ್ಪುಕಾಡಿನ ಹಾಡು, ಮೆರವಣಿಗೆ, ನನ್ನ ಜನಗಳು ಮತ್ತು ಇತರ ಕವಿತೆಗಳು, ಆಯ್ದ ಕವನಗಳು, ಅಲ್ಲೆಕುಂತವರು ಮುಂತಾದ ಕವನ ಸಂಕಲನಗಳು ಪ್ರಕಟಗೊಂಡಿವೆ. ಪಂಚಮ, ನೆಲಸಮ, ಏಕಲವ್ಯ ಪ್ರಮುಖ ನಾಟಕಗಳಾಗಿವೆ. ರಸಘಳಿಗೆಗಳು, ಎಡಬಲ, ಹಕ್ಕಿನೋಟ, ಜನಸಂಸ್ಕೃತಿ, ಉರಿಕಂಡಾಯ ಮುಂತಾದ ಲೇಖನ ಸಂಗ್ರಹಗಳು, ಸದನದಲ್ಲಿ ಸಿದ್ದಲಿಂಗಯ್ಯ ಭಾಗ 1 ಮತ್ತು 2 ಸೇರಿ ವಿವಿಧ ಕೃತಿಗಳು ಪ್ರಕಟಗೊಂಡಿವೆ. ಪುಟ್ಟಣ್ಣ ಕಣಗಾಲರು ನಿರ್ದೇಶಿಸಿದ ಧರಣಿಮಂಡಲ ಮಧ್ಯದೊಳಗೆ ಚಿತ್ರಕ್ಕೆ ಬರೆದ ಗೀತೆಗೆ ರಾಜ್ಯಪ್ರಶಸ್ತಿ ಸಂದಿದೆ. ಶ್ರವಣಬೆಳಗೊಳದಲ್ಲಿ ನಡೆದ 81ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಸೇರಿ ಮುಂತಾದ ಗೌರವಗಳು ಅವರಿಗೆ ಸಂದಿವೆ.

    ರೈತ ವಿಜ್ಞಾನಿ ಅಬ್ದುಲ್ ಖಾದರ್

    ಕೃಷಿ ಯಂತ್ರಗಳ ಸಂಶೋಧನೆ ಮೂಲಕ ಗಮನ ಸೆಳೆದಿರುವ ಧಾರವಾಡ ಜಿಲ್ಲೆ ಅಣ್ಣಿಗೇರಿಯ ವಿಶ್ವಶಾಂತಿ ಆಗ್ರಿಕಲ್ಚರಲ್ ರಿಸರ್ಚ್ ಆಂಡ್ ಇಂಡಸ್ಟ್ರಿಯಲ್ ಡೆವಲಪ್​ವೆುಂಟ್ ಸೆಂಟರ್​ನ ಸಂಸ್ಥಾಪಕ ಅಬ್ದುಲ್ ಖಾದರ್ ನಡಕಟ್ಟಿನ ಅವರ ವಿಷಯದಲ್ಲಿ ‘ಅವಶ್ಯಕತೆಯೇ ಅನ್ವೇಷಣೆ ತಾಯಿ’ ಎಂಬ ಮಾತು ಅಕ್ಷರಶಃ ಸತ್ಯ. ಚಿಕ್ಕಂದಿನಲ್ಲಿದ್ದಾಗ ಬೆಳಗ್ಗೆ ಬೇಗ ಏಳಲು ಕೀಲಿ ಕೊಡುವ ಅಲಾಮ್ರ್ ಇಟ್ಟುಕೊಂಡರೂ ಇವರಿಗೆ ಎಚ್ಚರಾಗುತ್ತಿರಲಿಲ್ಲ. ಇದಕ್ಕೆ ಪರಿಹಾರವಾಗಿ, ಅಲಾಮ್ರ್ ಸದ್ದು ಮಾಡಿದಾಗ (ಕೀಲಿ ಉಲ್ಟಾ ತಿರುಗಿದಾಗ) ಅದಕ್ಕೆ ಕಟ್ಟಿದ ದಾರ ಸರಿದು, ಬಾಟಲಿಯೊಂದರಿಂದ ನೀರು ಚಿಮ್ಮಿ ತನ್ನ ಮುಖಕ್ಕೆ ಸಿಂಪರಣೆಯಾಗುವಂತೆ ವ್ಯವಸ್ಥೆ ಮಾಡಿಕೊಂಡಿದ್ದು ಇವರ ಮೊದಲ ಅನ್ವೇಷಣೆ. 60 ಎಕರೆ ಜಮೀನು ಹೊಂದಿರುವ ಅಬ್ದುಲ್, ಕೃಷಿಕನಾಗಿ ದೊಡ್ಡ ಪ್ರಮಾಣದಲ್ಲಿ ಹುಣಸೆ ಬೆಳೆ ಬೆಳೆದಾಗ ಬೀಜ ಬಿಡಿಸುವುದು ಸವಾಲಾಯಿತು. ಅದಕ್ಕೊಂದು ಯಂತ್ರ ಸಂಶೋಧಿಸಿದರು. ರೈತರ ಅಗತ್ಯ ಅರಿತು ಯಂತ್ರಗಳನ್ನು ರೂಪಿಸುವ ಪ್ರವೃತ್ತಿಯಿಂದಾಗಿ ಫೈವ್ ಇನ್ ಒನ್ ಟಿಲ್ಲರ್, ಸೀಡ್ ಕಮ್ ಫರ್ಟಿಲೈಜನರ್ ಕೂರಿಗೆ, ದಿಂಡಿನ ಕುಂಟೆ, ವ್ಹೀಲ್ ಟಿಲ್ಲರ್, ಕಬ್ಬು ನಾಟಿ ಯಂತ್ರ ಸೇರಿ ಹಲವು ಯಂತ್ರಗಳನ್ನು ಸಂಶೋಧಿಸಿದ್ದು, ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿ ಜನಪ್ರಿಯವಾಗಿವೆ.

    ಸತ್ತ 8 ತಿಂಗಳ ಬಳಿಕ ಎರಡನೇ ಡೋಸ್​ ಲಸಿಕೆ!?: ಪಾಲಿಕೆ ಆರೋಗ್ಯ ಸಿಬ್ಬಂದಿ ಎಡವಟ್ಟು…

    ವಂಚಕ ಪತಿಯ ಅರಸಿ ಬೆಂಗಳೂರಿಗೆ ಬಂದ್ಲು ಎರಡನೇ ಪತ್ನಿ; ಇವ ಶ್ರೀಮಂತರನ್ನೇ ನೋಡಿ ಮದ್ವೆ ಆಗಿ ಮೋಸ ಮಾಡ್ತಿದ್ದ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts