

ಸುಳ್ಯ: ನಗರದ ನೆಹರು ಮೆಮೋರಿಯಲ್ ಕಾಲೇಜಿನ (ಎನ್‌ಎಂಸಿ) ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ಮತ್ತು ರಸಾಯನ ಶಾಸ್ತ್ರ ವಿಭಾಗಗಳು ಹಾಗೂ ನೇಚರ್ ಕ್ಲಬ್ ವತಿಯಿಂದ ವಿಶ್ವ ವನ್ಯಜೀವಿ ದಿನಾಚರಣೆಯ ಪ್ರಯುಕ್ತ ರಸಪ್ರಶ್ನೆ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.
ವಿಭಿನ್ನವಾಗಿ ನಡೆದ ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ನೋಟಿಸ್ ಬೋರ್ಡ್‌ನಲ್ಲಿ ಪ್ರಕಟಿಸಲಾದ ವನ್ಯಜೀವಿ ವಿಷಯಕ್ಕೆ ಸಂಬಂಧಿಸಿದ ಹಲವು ರಸಪ್ರಶ್ನೆಗಳಿಗೆ ಸ್ಥಳದಲ್ಲಿ ಉತ್ತರ ಬರೆದು ನೀಡುವಂತೆ ತಿಳಿಸಲಾಗಿತ್ತು.
ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾದ ದ್ವಿತೀಯ ಬಿ.ಎಸ್ಸಿ.ಯ ಕೀರ್ತನ್ ಕೆ.ಕೆ ಪ್ರಥಮ ಬಹುಮಾನ, ಪ್ರಥಮ ಬಿ.ಎಸ್ಸಿ.ಯ ಶ್ವೇತ ಕೆ ದ್ವಿತೀಯ ಬಹುಮಾನ ಪಡೆದುಕೊಂಡರು. ಅಂತಿಮ ಬಿಕಾಂನ ದೀಪ್ತಿ ಎ.ಎನ್.ಮತ್ತು ಸೌಜನ್ಯ ತೃತೀಯ ಬಹುಮಾನ ಹಂಚಿಕೊಂಡರು.
ನೇಚರ್ ಕ್ಲಬ್‌ನ ಕಾರ್ಯದರ್ಶಿ ಶಿಲ್ಪ, ಸ್ಪರ್ಧಾ ಸಂಯೋಜಕರಾದ ತೇಜಸ್, ತನುಷ್ ಮತ್ತು ಕಾರ್ತಿಕ್ ಈ ಸ್ಪರ್ಧೆಯನ್ನು ನಿರ್ವಹಿಸಿದರು. ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕುಲದೀಪ್ ಪೆಲ್ತಡ್ಕ, ಉಪನ್ಯಾಸಕರಾದ ಕೃತಿಕಾ ಕೆ.ಜೆ., ಪಲ್ಲವಿ ಕೆ.ಎಸ್, ಲ್ಯಾಬ್ ಸಹಾಯಕಿ ಭವ್ಯ ಕೆ.ಇನ್ನಿತರರು ಮಾರ್ಗದರ್ಶನ ನೀಡಿದರು.