ಅಶಕ್ತ ವೃದ್ಧರಿಗೆ, ಅಂಗವಿಕಲರಿಗೆ ಯೋಜನೆಯಿಂದ ಮಾಸಾಶನ

3
Published on

ಬೆಳ್ತಂಗಡಿ: ರಾಜ್ಯದ ಅಶಕ್ತ ಅಂಗವಿಕಲರು ಮತ್ತು ಅನಾಥ ವೃದ್ಧರಿಗಾಗಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವೀ.ಹೆಗ್ಗಡೆ ಮಾಸಾಶನದ ಕಾರ್ಯಕ್ರಮ ಜಾರಿಗೆ ತಂದರು. ದುಡಿಯಲು ಶಕ್ತಿಯಿಲ್ಲದೆ ಅತ್ಯಂತ ಅಸಹಾಯಕ ಸ್ಥಿತಿಯಲ್ಲಿರುವ ವ್ಯಕ್ತಿಗಳ ಜೀವನ ನಿರ್ವಹಣೆಗಾಗಿ ಪ್ರತಿ ತಿಂಗಳು ಯೋಜನೆಯಿಂದ ಮಾಸಾಶನ ನೀಡುವ ವ್ಯವಸ್ಥೆ ಇದಾಗಿದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್. ತಿಳಿಸಿದ್ದಾರೆ.

ಗಂಭೀರ ಕಾಯಿಲೆಯಿಂದ ಬಳಲುತ್ತಾ ತೀರಾ ಸಂಕಷ್ಟದಲ್ಲಿರುವ, ಬಡತನದಲ್ಲಿರುವ ಅಂಗವಿಕಲರಿಗೆ ಹಾಗೂ ಅಸಹಾಯಕ ವೃದ್ಧರಿಗೆ ಮಾಸಾಶನ ನೀಡಲಾಗುತ್ತಿದೆ. ಇಂಥವರಿಗೆ ಪ್ರತಿ ತಿಂಗಳು 1,000 ರೂ.ದಿಂದ 3,000 ರೂ.ವರೆಗೆ ಮಾಸಾಶನವನ್ನು ಯೋಜನೆಯ ಮೂಲಕ ತಲುಪಿಸಲಾಗುತ್ತಿದೆ. ಇದರಂತೆ ರಾಜ್ಯದ 20,100 ಅಸಹಾಯಕ ವ್ಯಕ್ತಿಗಳಿಗೆ ಪ್ರತಿ ತಿಂಗಳು ಈ ಮಾಸಾಶನವನ್ನು ತಲುಪಿಸಿ ಅವರ ಜೀವನ ನಿರ್ವಹಣೆಗೆ ಅನುಕೂಲ ಮಾಡಲಾಗಿದೆ. ಕಾರ್ಯಕರ್ತರಿಂದ ಸಾಂತ್ವನ ಹಾಗೂ ಯೋಗಕ್ಷೇಮ ವಿಚಾರಿಸಲಾಗುತ್ತಿದೆ.

ಜನಮಂಗಲ ಕಾರ್ಯಕ್ರಮದಲ್ಲಿ ಗಾಲಿಕುರ್ಚಿ(ವೀಲ್ ಚೇರ್), ಶೌಚಗೃಹದ ಬಳಕೆಗಾಗಿ ಗಾಲಿಕುರ್ಚಿ(ಕಮೋಡ್ ವೀಲ್ ಚಯರ್), ನೀರಹಾಸಿಗೆ(ವಾಟರ್ ಬೆಡ್), ನಡುಗೋಲು(ಯು ಶೇಪ್ ವಾಕರ್), ಮೊಣಕೈ ಊರುಗೋಲು(ಎಲ್ಬೋ ಕ್ರಚಸ್), ಊರುಗೋಲು(ಆಕ್ಸಿಲರಿ ಕ್ರಚಸ್), ಏಕಕಾಲಿನ ಕೈಗೋಲು(ಸಿಂಗಲ್ ಲೆಗ್ ವಾಕಿಂಗ್ ಸ್ಟಿಕ್), ಮೂರುಕಾಲಿನ ಕೈಗೋಲು(ತ್ರಿ ಲೆಗ್ ವಾಕಿಂಗ್ ಸ್ಟಿಕ್) ಮೊದಲಾದ ಸಲಕರಣೆಗಳನ್ನು ವಿತರಿಸಲಾಗುತ್ತಿದೆ. ಈ ಎಲ್ಲ ಸಲಕರಣೆಗಳನ್ನು ಉಚಿತವಾಗಿ ನೀಡುತ್ತಿದ್ದು, ಅಂಗವಿಕಲರ ಮನೆಬಾಗಿಲಿಗೆ ತಲುಪಿಸಲಾಗುತ್ತಿದೆಯಲ್ಲದೆ ಸಲಕರಣೆಗಳ ಬಳಕೆಯ ಕುರಿತಂತೆ ಸಂಸ್ಥೆಯ ಕಾರ್ಯಕರ್ತರು ವಿವರಿಸಿ ಮಾಹಿತಿ ನೀಡಿದ್ದಾರೆ.

ಈ ಕಾರ್ಯಕ್ರಮದನ್ವಯ 2024-25ನೇ ವರ್ಷದಲ್ಲಿ 4,500 ಫಲಾನುಭವಿಗಳಿಗೆ ವಿವಿಧ ಸಲಕರಣೆಗಳನ್ನು ಉಚಿತವಾಗಿ ಪೂರೈಸಿದ್ದು ಇಲ್ಲಿಯವರೆಗೆ 32,000 ಫಲಾನುಭವಿಗಳಿಗೆ ನೀಡಲಾಗಿದೆ. ಈ ಸಲಕರಣೆಗಳು ಅಂಗವಿಕಲರ ಆತ್ಮವಿಶ್ವಾಸ ಹೆಚ್ಚಿಸಿ ಅವರ ದೈನಂದಿನ ಬದುಕಿಗೆ ನೆರವಾಗಿದೆ.

ಅನಾಥ, ನಿರ್ಗತಿಕರಿಗೆ ಮಹದುಪಕಾರ

ರಾಜ್ಯಾದ್ಯಂತ ಹಲವಾರು ಕಾರಣಗಳಿಗೆ ತಮ್ಮ ವೃದ್ಧಾಪ್ಯದ ಜೀವನದಲ್ಲಿ ನೋಡಿಕೊಳ್ಳಲು ಯಾರೂ ಇಲ್ಲದೆ ಅನಾಥರಾಗಿರುವ ಅದೆಷ್ಟೋ ಹಿರಿಜೀವಗಳನ್ನು ಗಮನಿಸಬಹುದು. ತಮ್ಮ ಇಳಿ ವಯಸ್ಸಿನಲ್ಲಿ ನಡೆದಾಡಲು ಸಾಧ್ಯವಾಗದೆ, ದುಡಿಯಲು ಸಾಧ್ಯವಾಗದೆ ಜೀವನ ನಿರ್ವಹಣೆ ಹಾಗೂ ಒಪ್ಪೊತ್ತಿನ ಊಟಕ್ಕೂ ಪರದಾಡುವವರನ್ನು ಕಾಣುತ್ತೇವೆ. ದೈನಂದಿನ ಜೀವನ ನಿರ್ವಹಣೆಯ ಸಮಸ್ಯೆಯ ಜತೆಗೆ ಇವರು ವಯೋಸಹಜವಾದ ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುವುದನ್ನೂ ಕಾಣುತ್ತೇವೆ. ಇಂತಹವರಿಗೆ ಯೋಜನೆಯಿಂದ ಮಹದುಪಕಾರವಾಗಿದೆ.

ಅಂಗವಿಕಲರಿಗೆ ಸಲಕರಣೆ ವಿತರಣೆ

ಹಲವರು ಹುಟ್ಟಿನಿಂದ, ಯೌವನದಲ್ಲಿ ಅಥವಾ ವೃದ್ಧಾಪ್ಯದಲ್ಲಿ ಬೇರೆ-ಬೇರೆ ಕಾರಣಗಳಿಂದ ಎಲ್ಲರಂತೆ ಬದುಕುವ ಸಾಮರ್ಥ್ಯ ಕಳೆದುಕೊಂಡಿರುತ್ತಾರೆ. ಕೆಲವರಿಗೆ ಹುಟ್ಟಿನಿಂದಲೇ ಕುರುಡು, ಅಂಗವೈಕಲ್ಯ ಬಂದರೆ ಇನ್ನು ಕೆಲವರಿಗೆ ಅಪಘಾತಗಳು, ಮಾರಕ ರೋಗಗಳು ಹಾಗೂ ವಯಸ್ಸಾದಾಗ ಕಾಣಿಸಿಕೊಳ್ಳುತ್ತದೆ. ಇದನ್ನು ಸಂಪೂರ್ಣ ಸರಿಪಡಿಸಲು ಆಗದಿದ್ದರೆ ಕೆಲವೊಂದು ಬದಲಿ ಪರಿಹಾರಗಳಿವೆ. ಈ ಎಲ್ಲ ಸಮಸ್ಯೆಗಳನ್ನು ಮನಗಂಡು ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಇಂತಹ ವಿಶೇಷ ಚೇತನರಿಗೆ ವಿವಿಧ ಸಲಕರಣೆಗಳನ್ನು ನೀಡುವ ಜನಮಂಗಲ ಎನ್ನುವ ಕಾರ್ಯಕ್ರಮ ಪ್ರಾರಂಭಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net