

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಉಪ ಮೇಯರ್ ಮುಹಮ್ಮದ್ ಕುಂಜತ್ತಬೈಲ್ (62) ಶನಿವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ನಾಲ್ವರು ಸಹೋದರರು ಮತ್ತು ಮೂವರು ಸಹೋದರಿಯರನ್ನು ಅವರು ಅಗಲಿದ್ದಾರೆ.
ಅವಿವಾಹಿತರಾಗಿದ್ದ ಅವರು ಸಾಮಾಜಿಕ ಕಾರ್ಯಕರ್ತರಾಗಿದ್ದರು. ಶೈಕ್ಷಣಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಅವರು ಅಖಿಲ ಭಾರತ ಬ್ಯಾರಿ ಪರಿಷತ್‌ನ ಸಲಹೆಗಾರರಾಗಿ, ಅಹಿಂದ ದ.ಕ.ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ, ವಕ್ತಾರರಾಗಿ, ಕುಂಜತ್ತಬೈಲ್‌ನ ನೋಬೆಲ್ ಆಂಗ್ಲಮಾಧ್ಯಮ ಶಾಲೆಯ ಸಂಚಾಲಕರಾಗಿ, ಮೀಫ್‌ನ ಸ್ಥಾಪಕ ಸದಸ್ಯರಾಗಿ, ಸಂಘಟನಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.
ಮಂಗಳೂರು ಮಹಾನಗರ ಪಾಲಿಕೆಗೆ ಕುಂಜತ್ತಬೈಲ್ ಉತ್ತರ ವಾರ್ಡ್‌ನಿಂದ ಜನತಾದಳದ ಪಕ್ಷದ ಮೂಲಕ ಒಂದು ಬಾರಿ ಮತ್ತು ಕಾಂಗ್ರೆಸ್‌ನಿಂದ ಎರಡು ಬಾರಿ ಕಾರ್ಪೊರೇಟರ್ ಚುನಾಯಿತರಾಗಿದ್ದ ಮುಹಮ್ಮದ್ ಕುಂಜತ್ತಬೈಲ್ ಮನಪಾ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಮತ್ತು ಉಪಮೇಯರ್ ಆಗಿ ಕಾರ್ಯನಿರ್ವಹಿಸಿದ್ದರು.
ಸಾಮಾಜಿಕ ಹೋರಾಟಗಾರರೂ ಆಗಿದ್ದ ಅವರು ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿದ್ದರು. ತನ್ನ ಸುತ್ತಮುತ್ತಲಿನ ಜನಸಾಮಾನ್ಯರ ಸಮಸ್ಯೆಗೆ ಸದಾ ಸ್ಪಂದಿಸುತ್ತಿದ್ದರು. ನೇತ್ರಾವತಿ ತಿರುವು ಯೋಜನೆ, ಟೋಲ್ಗೇಟ್ ವಿರುದ್ಧದ ಹೋರಾಟ ಮತ್ತು ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಹತ್ಯೆಗೆ ಸಂಬಂಧಿಸಿ ನಡೆದ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ಭ್ರಷ್ಟಾಚಾರದ ಕಡುವಿರೋಧಿಯಾಗಿದ್ದ ಅವರು ತನ್ನ ಬದುಕನ್ನು ಸಂಪೂರ್ಣವಾಗಿ ಸಮಾಜಕ್ಕೆ ಅರ್ಪಿಸಿದ್ದರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹಾಗೂ ಸಮಾನ ಮನಸ್ಕ ಜಾತ್ಯತೀತ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. ನೇರ ನಡೆನುಡಿಯ, ಸರಳ ಸಜ್ಜನಿಕೆ ವ್ಯಕ್ತಿತ್ವದ ಅವರು ಜನಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು.
ಮಂಗಳೂರು ಮನಪಾ ಚುನಾವಣೆಯಲ್ಲಿ ಸ್ಪರ್ಧಿಸುವ ಮುನ್ನ ಉಳ್ಳಾಲದ ಸೈಯ್ಯದ್ ಮದನಿ ಐಟಿಐಯಲ್ಲಿ ಶಿಕ್ಷಕರಾಗಿದ್ದ ಮುಹಮ್ಮದ್ ಕುಂಜತ್ತಬೈಲ್ ಮಾಜಿ ಸಚಿವ ಬಿಎ.ಮೊಯ್ದಿನ್‌ರ ಗರಡಿಯಲ್ಲಿ ಪಳಗಿದ್ದರು. ದೂರದೃಷ್ಟಿಯ ವ್ಯಕ್ತಿತ್ವವನ್ನೂ ಹೊಂದಿದ್ದರು.