

ತುಮಕೂರು: ಕುಡಿದ ಮತ್ತಿನಲ್ಲಿ ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯಗೊಂಡಿದ್ದು, ಕೊನೆಗೂ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣ ಸಂಬಂಧ ಹುಲಿಯೂರುದುರ್ಗ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಗಂಗರಾಜು (26), ವಿಜಯಕುಮಾರ್ (25) ಬಂಧಿತ ಆರೋಪಿಗಳು. ಹುಲಿಯೂರುದುರ್ಗ ಹೋಬಳಿ ಡಿ.ಹೊಸಹಳ್ಳಿ ಗ್ರಾಮದಲ್ಲಿ ಎಳನೀರು ವ್ಯಾಪಾರಿಯಾಗಿದ್ದ ಅಂಜನಪ್ಪ ಕೊಲೆಗೀಡಾಗಿದ್ದ ವ್ಯಕ್ತಿ.
ಅಂಜನಪ್ಪ ಹಾಗೂ ಗಂಗರಾಜು ಇಬ್ಬರೂ ಜ. 19ರ ರಾತ್ರಿ ಜೊತೆಯಾಗಿ ಮದ್ಯ ಸೇವಿಸಿದ್ದರು. ಈ ಸಂದರ್ಭ ಆಮ್ಲೆಟ್ ತಿನ್ನುವ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆದಿತ್ತು. ಆಗ ಅಂಜನಪ್ಪ ತನ್ನ ಬಳಿ ಇದ್ದ ಎಳನೀರು ಕೊಚ್ಚುವ ಮಚ್ಚಿನಿಂದ ಗಂಗಾಧರ್ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿದ್ದ.
ಬಳಿಕ ಹುಲಿಯೂರುದುರ್ಗ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಗಂಗರಾಜು, ತನ್ನ ಸ್ನೇಹಿತ ವಿಜಯಕುಮಾರ್ ಜೊತೆ ಸೇರಿ ಅಂಜನಪ್ಪ ಕೊಲೆಗೆ ಸಂಚು ಹೂಡಿದ್ದ. ಅದರಂತೆ ಸೈಕಲ್ನಲ್ಲಿ ಹೋಗುತ್ತಿದ್ದ ಅಂಜನಪ್ಪನನ್ನ ಅಡ್ಡಗಟ್ಟಿ ಮಚ್ಚಿನಿಂದ ಕೊಚ್ಚಿ ಕೊಲೆಗೈದಿದ್ದರು. ಬಳಿಕ ದೀಪಾಂಬುಧಿ ಕೆರೆಗೆ ಮೃತದೇಹವನ್ನ ಎಸೆದು ಪರಾರಿಯಾಗಿದ್ದರು.
ಶವ ಪತ್ತೆಯಾದ ಹಿನ್ನೆಲೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಹುಲಿಯೂರುದುರ್ಗ ಪೊಲೀಸರು, ತನಿಖೆ ನಡೆಸಿ ಆರೋಪಿಗಳಾದ ಗಂಗರಾಜು ಹಾಗೂ ವಿಜಯಕುಮಾರ್ನನ್ನು ಬಂಧಿಸಿದ್ದಾರೆ.