ಬುದ್ಧಿಮಾಂದ್ಯ ಮಕ್ಕಳು ಹುಟ್ಟಿದ್ದಕ್ಕೆ ನಿತ್ಯ ಹಿಂಸಿಸುತ್ತಿದ್ದ ಗಂಡ; ಮಗನ ಸಹಿತ ಕೆರೆಗೆ ಹಾರಿ ಪತ್ನಿ ಆತ್ಮಹತ್ಯೆ

Suicide
Published on

ಬೆಳಗಾವಿ: ಬುದ್ಧಿಮಾಂದ್ಯ ಮಕ್ಕಳು ಹುಟ್ಟಿದ್ದಾರೆ ಎಂಬ ಕಾರಣಕ್ಕೆ ಪತಿ ನೀಡುತ್ತಿದ್ದ ಹಿಂಸೆ ತಾಳಲಾರದೆ ಪತ್ನಿಯು ಮಗನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ವರದಿಯಾಗಿದೆ. ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಬೊಳಕಡಬಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಸೇವಂತಿ ಪ್ಯಾಟಿ (32), ಮಹಾಂತೇಶ್ ಪ್ಯಾಟಿ(12) ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ-ಮಗ. ಆತ್ಮಹತ್ಯೆಗೆ ಪತಿ ಬೆಳ್ಳಪ್ಪನ ಕಿರುಕುಳು ಕಾರಣ ಎನ್ನಲಾಗಿದ್ದು, ಆತನ ವಿರುದ್ಧ ಕೊಲೆ ಆರೋಪವೂ ಕೇಳಿಬಂದಿದೆ.

ಬುದ್ಧಿಮಾಂದ್ಯ ಮಕ್ಕಳು ಹುಟ್ಟಿದ್ದಕ್ಕೆ ಗಂಡನಿಂದ ನಿತ್ಯವೂ ಹಿಂಸೆ ಅನುಭವಿಸುತ್ತಿದ್ದ ಪತ್ನಿ ಸೇವಂತಿ, ಒಂದು ಮಗುವನ್ನು ವರ್ಷದ ಹಿಂದೆ ತವರು ಮನೆಯಲ್ಲಿ ಬಿಟ್ಟಿದ್ದು, ಇನ್ನೊಬ್ಬ ಮಗನನ್ನು ತನ್ನೊಂದಿಗೆ ಇರಿಸಿಕೊಂಡಿದ್ದಳು. ಎಂದಿನಂತೆ ಗಲಾಟೆ ಮಾಡಿದ್ದ ಪತಿ, ನಿನ್ನೆಯೂ ಹೆಂಡತಿ-ಮಗನ ಮೇಲೆ ಹಲ್ಲೆ ಮಾಡಿದ್ದ. ಮಾತ್ರವಲ್ಲ, ಬೇರೆ ಮದುವೆ ಆಗುತ್ತೇನೆ ಎಂಬುದಾಗಿಯೂ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಸೇವಂತಿ, ಮಗನೊಂದಿಗೆ ಗ್ರಾಮದ ಹೊರವಲಯದ ಕೆರೆಗೆ ಹಾರಿದ್ದಳು.

ಇಂದು ಬೆಳಗ್ಗೆ ಆತ್ಮಹತ್ಯೆ ವಿಚಾರ ಬಹಿರಂಗಗೊಂಡಿದ್ದು, ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರ ಭೇಟಿ ನೀಡಿದ್ದಾರೆ. ಇಬ್ಬರ ಶವಗಳನ್ನು ಹೊರತೆಗೆಯಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಮತ್ತೊಂದೆಡೆ ಪತಿಯೇ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಸೇವಂತಿಯ ಕುಟುಂಬಸ್ಥರು ಆರೋಪಿಸಿದ್ದಾರೆ. ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net