

ಬೆಂಗಳೂರು: ಸಹ ಜೀವನ (ಲಿವ್ ಇನ್ ರಿಲೇಶನ್‌ಶಿಪ್) ನಡೆಸುತ್ತಿದ್ದ ಜೋಡಿ ಮದ್ಯೆ ಜಗಳ ಉಂಟಾಗಿ ಇವರಿಗೆ ಜನಿಸಿದ 5 ವರ್ಷದ ಬಾಲಕನನ್ನು ಪ್ರಿಯಕರ ಅಪಹರಿಸಿರುವ ಘಟನೆ ಬ್ಯಾಟರಾಯನಪುರದ ಜಿ.ಕೆ.ವಿ.ಕೆ ಬಳಿ ನಡೆದಿದೆ. ಇತ್ತ ಮಗುವನ್ನು ಹುಡುಕಿಕೊಡುವಂತೆ ತಾಯಿ ಠಾಣೆ ಮೆಟ್ಟಿಲೇರಿದ್ದಾಳೆ.
ಕೋಲ್ಕತದ ಮಹಿಳೆ ಹಾಗೂ ಬಳ್ಳಾರಿಯ ಯುವಕ ಇಬ್ಬರೂ ಹಲವು ವರ್ಷಗಳಿಂದ ಲಿನ್ ಇನ್ ರಿಲೇಶನ್‌ಶಿಪ್‌ನಲ್ಲಿ ವಾಸಿಸುತ್ತಿದ್ದರು. ಐದು ವರ್ಷಗಳ ಹಿಂದೆ ಇಬ್ಬರಿಗೂ ಗಂಡು ಮಗು ಜನಿಸಿತ್ತು. ಕೆಲ ದಿನಗಳ ಹಿಂದೆ ಸಂಗಾತಿ ಜತೆಗೆ ಆರೋಪಿ ಪ್ರಿಯಕರ ಜಗಳ ಮಾಡಿಕೊಂಡಿದ್ದ.
ಇದನ್ನೂ ಓದಿ: ನಿಮ್ಮ ದಾಖಲೆ ಬಳಸಿ ಬೇರೆಯವರು ಸಿಮ್ ಖರೀದಿಸಿದ್ದರೆ ತಿಳಿಯುವುದು ಹೇಗೆ?
ಶುಕ್ರವಾರ ಬೆಳಗ್ಗೆ ಪುತ್ರನನ್ನು ಶಾಲೆಗೆ ಬಿಡಲು ತಾಯಿ ತೆರಳಿದ್ದಾಗ ಒಂದು ಆಟೋದಲ್ಲಿ ತಾನು ಹಾಗೂ ಇನ್ನೊಂದು ಆಟೋದಲ್ಲಿ ೫ ಮಹಿಳೆಯರ ಜತೆಗೆ ಹಿಂಬಾಲಿಸಿಕೊಂಡು ಬಂದು ಆಕ್ಸಿಡೆಂಟ್ ಆದಂತೆ ನಾಟಕ ಮಾಡಿ ಮಾರ್ಗಮಧ್ಯೆ ಜಿ.ಕೆ.ವಿ.ಕೆ.ಯ ಡಬ್ಬಲ್ ರಸ್ತೆ ಬಳಿ ಪ್ರೇಯಸಿ ಕೈಯಿಂದ ಮಗನನ್ನು ಕಸಿದುಕೊಂಡು ತಾನು ಬಂದಿದ್ದ ಆಟೋದಲ್ಲಿ ಪರಾರಿಯಾಗಿದ್ದ.
ಮತ್ತೊಂದು ಆಟೋದಲ್ಲಿ ಬಂದಿದ್ದ ಮಹಿಳೆಯರು ಹಾಗೂ ಮಗುವಿನ ತಾಯಿ ಜತೆ ಗಲಾಟೆ ಮಾಡಿಕೊಳ್ಳುತ್ತಿದ್ದರು. ಅದೇ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದ ಹೊಯ್ಸಳ ಸಿಬ್ಬಂದಿ ಜಗಳ ಮಾಡುತ್ತಿರುವುದನ್ನು ಗಮನಿಸಿ ಮಗುವಿನ ತಾಯಿ ಸೇರಿ ಮೂವರೂ ಮಹಿಳೆಯರು ಹಾಗೂ ರೌಡಿಶೀಟರ್ ಒಬ್ಬನನ್ನು ವಶಕ್ಕೆ ಪಡೆದು ಕೊಡಿಗೆಹಳ್ಳಿ ಠಾಣೆಗೆ ಕರೆ ತಂದಿದ್ದಾರೆ.
ಬಳಿಕ ಕೂಲಂಕಷವಾಗಿ ವಿಚಾರಣೆ ನಡೆಸಿದಾಗ ಲಿವ್ ಇನ್ ರಿಲೇಶನ್‌ಶಿಪ್ ಜೋಡಿಯ ಜಗಳದ ಕಥೆ ಬೆಳಕಿಗೆ ಬಂದಿದೆ. ಇದೀಗ ನಾಪತ್ತೆಯಾಗಿರುವ ಮಗುವಿಗಾಗಿ ಹಾಗೂ ಆತನ ತಂದೆಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.