

ರಮೇಶ ದೊಡ್ಡಪುರ
ಬೆಂಗಳೂರು: ರಾಜಧಾನಿಯಲ್ಲಿ ಹೋಂ ಕ್ವಾರಂಟೈನ್ ನಿಯಮವನ್ನು ಜನರು ಕಟ್ಟುನಿಟ್ಟಾಗಿ ಪಾಲಿಸದಿರುವುದೇ ಸೋಂಕು ಹೆಚ್ಚಳಕ್ಕೆ ಪ್ರಮುಖ ಕಾರಣ ಎಂದು ಅರಿತಿರುವ ಸರ್ಕಾರ, ಸಾರ್ವಜನಿಕರ ಸಹಭಾಗಿತ್ವ ಪಡೆಯಲು ಮುಂದಾಗಿದೆ.
ರಾಜಧಾನಿಯಲ್ಲಿ ಹೋಂ ಕ್ವಾರಂಟೈನ್ನಲ್ಲಿರಬೇಕಿದ್ದ 10 ಸಾವಿರ ಜನರು ನಿಯಮ ಮೀರಿ ಸ್ವಚ್ಛಂದವಾಗಿ ವಿಹರಿಸುತ್ತಿರುವುದು ಕಂಡುಬಂದಿದ್ದು, ಈಗಾಗಲೇ ಅನೇಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ವಾರ್ಡ್ ಮಟ್ಟದಲ್ಲಿ ತಲಾ 50 ಮನೆಗಳ ಮೇಲೆ ನಿಗಾ ವಹಿಸಿ ಅಲ್ಲಿನ ಸ್ಥಿತಿಗತಿ ವರದಿ ಮಾಡುವ 40 ಸಾವಿರ ಸ್ವಯಂಸೇವಕರ ಪಡೆ ನಿರ್ವಣಕ್ಕೆ ಕೈಹಾಕಿದ್ದು, ಇಲ್ಲಿಯವರೆಗೆ 5 ಸಾವಿರಕ್ಕೂ ಹೆಚ್ಚು ಜನರು ನೋಂದಾಯಿಸಿಕೊಂಡಿದ್ದಾರೆ.
ಗೃಹ ನಿಗಾ ಬಂಧನದಲ್ಲಿ 64 ಸಾವಿರ ಮಂದಿ: ವಿವಿಧ ರಾಜ್ಯಗಳಿಂದ ಆಗಮಿಸಿದ ಕಾರಣಕ್ಕೆ ಬೆಂಗಳೂರಿನಲ್ಲಿ ಇಲ್ಲಿಯವರೆಗೆ 64 ಸಾವಿರ ಜನರನ್ನು ಹೋಂ ಕ್ವಾರಂಟೈನ್ನಲ್ಲಿರುವಂತೆ ಸೂಚನೆ ನೀಡಲಾಗಿದೆ. ವಿಮಾನ, ಬಸ್ ಸೇರಿ ಅಧಿಕೃತ ಮಾರ್ಗದಲ್ಲಿ ಬಂದವರನ್ನು ಮಾತ್ರ ಈ ರೀತಿ ನೋಂದಣಿ ಮಾಡಲಾಗಿದೆ. ಆದರೆ, ಅನೇಕರು ಕ್ವಾರಂಟೈನ್ನಿಂದ ತಪ್ಪಿಸಿಕೊಂಡಿದ್ದಾರೆ. ನೋಂದಣಿಯಾದ 64 ಸಾವಿರ ಜನರಲ್ಲಿ 10 ಸಾವಿರ ಮಂದಿ ನಿಯಮ ಉಲ್ಲಂಘಿಸಿದ್ದಾರೆ. ಅಧಿಕೃತ ಮಾರ್ಗದ ಮೂಲಕ ಬಂದವರದ್ದೇ ಇಷ್ಟು ಸಂಖ್ಯೆಯಾದರೆ ಉಳಿದವರಿನ್ನೆಷ್ಟು ಎಂಬುದು ಚಿಂತೆಯಾಗಿದೆ. ಕ್ವಾರಂಟೈನ್ ಆದವರು, ಅಲ್ಲದವರು ಎಂಬ ಭೇದವಿಲ್ಲದೆ ಇಡೀ ಬೆಂಗಳೂರಿನ ಪ್ರತಿ ಮನೆ ನಿಗಾ ಇರಿಸುವ ಕಾರ್ಯಕ್ಕೆ ಮುಂದಾಗಲಾಗಿದೆ.
ಪ್ರತಿದಿನ 1-2 ಗಂಟೆ ಸಮಯ: ಬಿಬಿಎಂಪಿ ವತಿಯಿಂದ ವಿವಿಧ ವಾರ್ಡ್ಗಳಿಗೆ 80 ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಜತೆಗೆ, ಎಲ್ಲ 198 ವಾರ್ಡ್ಗಳಿಗೂ ಅಧಿಕಾರಿಗಳು, 8 ಸಾವಿರಕ್ಕೂ ಹೆಚ್ಚು ಮತಗಟ್ಟೆ ವ್ಯಾಪ್ತಿಯಲ್ಲಿ ಬಿಎಲ್ಒಗಳಿದ್ದಾರೆ. ಇಷ್ಟಾದರೂ ಪ್ರತಿ ಮನೆ ಮೇಲೆ ನಿಗಾ ವಹಿಸುವುದು ಅಸಾಧ್ಯ. ಈ ಕಾರ್ಯಕ್ಕೆ ಸಾರ್ವಜನಿಕರ ನೆರವು ಪಡೆಯಲಾಗುವುದು. ಒಟ್ಟಾರೆ ಕಾರ್ಯದ ಮೇಲುಸ್ತುವಾರಿಯನ್ನು ಬಿಬಿಎಂಪಿ ಆಯುಕ್ತರು, ವಿಶೇಷ ಆಯುಕ್ತರು ವಹಿಸಿದ್ದರೆ, ಹೋಂ ಕ್ವಾರಂಟೈನ್ ಜಾರಿಗೆ ಸ್ವಯಂಸೇವಕರನ್ನು ನಿಯೋಜಿಸಲು ಮತ್ತೊಬ್ಬ ಹಿರಿಯ ಐಎಎಸ್ ಅಧಿಕಾರಿ ಇದ್ದಾರೆ. ಸ್ವಯಂಸೇವಕರು ಪ್ರತಿದಿನ 1-2 ಗಂಟೆ ಸಮಯ ವಿನಿಯೋಗಿಸಿದರೆ ಕರೊನಾ ನಿಯಂತ್ರಿಸಬಹುದು. ಈಗಾಗಲೇ ಈಶ ಫೌಂಡೇಷನ್, ಅಜೀಂ ಪ್ರೇಮ್ ಪ್ರತಿಷ್ಠಾನ, ಆರೆಸ್ಸೆಸ್, ಸ್ಮೈಲ್ ಫೌಂಡೇಷನ್ ಸೇರಿ ಅನೇಕ ಸಂಘಟನೆಗಳನ್ನು ಸಂರ್ಪಸಲಾಗಿದ್ದು, ಆ ಸಂಘಟನೆಗಳ ಸದಸ್ಯರು ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಂಡದ ಸದಸ್ಯರೊಬ್ಬರು ತಿಳಿಸಿದ್ದಾರೆ.
ಸ್ವಯಂಸೇವಕರ ಸಹಕಾರ: ಪ್ರತಿ ಸ್ವಯಂಸೇವಕರಿಗೆ 40-50 ಮನೆಗಳನ್ನು ವಹಿಸಲಾಗುತ್ತದೆ. ಆ ಮನೆಗಳ ಒಳಗೆ ಅವರು ಪ್ರವೇಶಿಸುವ ಅವಶ್ಯಕತೆ ಇಲ್ಲ. ದೂರದಿಂದಲೇ ಮಾಹಿತಿ ಪಡೆಯಬಹುದು ಅಥವಾ ಅಕ್ಕಪಕ್ಕದ ಮನೆಯವರನ್ನು ಸಂರ್ಪಸಿ ಮಾಹಿತಿ ಪಡೆಯಬಹುದು. ಕ್ವಾರಂಟೈನ್ ನಿಯಮ ಉಲ್ಲಂಘಿಸಿದವರಿದ್ದರೆ ಒಮ್ಮೆ ಎಚ್ಚರಿಕೆ ನೀಡಬೇಕು, ಮತ್ತೊಮ್ಮೆ ಉಲ್ಲಂಘಿಸಿದರೆ ಸಾಂಸ್ಥಿಕ ಕ್ವಾರಂಟೈನ್ಗೆ ಶಿಫಾರಸು ಮಾಡಬೇಕು. ಹೆಚ್ಚಿನ ಅಪಾಯ ಒಡ್ಡುತ್ತಿರುವವರ ವಿರುದ್ಧ ಎಫ್ಐಆರ್ ದಾಖಲಿಸಲು ಸೂಚಿಸುವುದು ಸ್ವಯಂಸೇವಕರ ಕೆಲಸ. ಇಡೀ ಬೆಂಗಳೂರಿನ ಮನೆಗಳ ಮೇಲೆ ನಿಗಾ ವಹಿಸಲು 40 ಸಾವಿರ ಜನರ ಅವಶ್ಯಕತೆಯಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸ್ವಯಂಸೇವಕರ ತಂಡದ ನೇತೃತ್ವ ವಹಿಸಿರುವ ಐಎಎಸ್ ಅಧಿಕಾರಿ ಪಿ. ಮಣಿವಣ್ಣನ್, ಹೋಂಕ್ವಾರಂಟೈನ್ ಉಲ್ಲಂಘಿಸುವವರ ವಿರುದ್ಧ ಯಾವುದೇ ರಾಜಿ ಇಲ್ಲದೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಈ ಕಾರ್ಯಕ್ಕೆ ಬಿಬಿಎಂಪಿ ನಿಯೋಜಿಸಿ ರುವ ಅಧಿಕಾರಿಗಳ ಜತೆಗೆ ಸ್ವಯಂಸೇವಕರು ಸಹಕರಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಅಶೋಕ್ ಕರೊನಾ ಉಸ್ತುವಾರಿ ತಾತ್ಕಾಲಿಕ?
1,056 ಮನೆಗಳಿಗೆ ಭೇಟಿ: ಬಿಬಿಎಂಪಿ ಅಧಿಕಾರಿಗಳ ತಂಡ ಈಗಾಗಲೇ ಕಾರ್ಯಪ್ರವೃತ್ತ ವಾಗಿದ್ದು, ಹೋಂ ಕ್ವಾರಂಟೈನ್ನಲ್ಲಿರಬೇಕಾದವರ 1,056 ಮನೆಗಳಿಗೆ ಭೇಟಿ ನೀಡಿದೆ. ನಿಯಮ ಉಲ್ಲಂಘಿಸಿದ 792 ಜನರಿಗೆ ಎಚ್ಚರಿಕೆ ಜತೆಗೆ 22 ಜನರನ್ನು ಅವರದ್ದೇ ಹಣದಲ್ಲಿ ಸಾಂಸ್ಥಿಕ ಕ್ವಾರಂಟೈನ್ಗೆ ಕಳುಹಿಸಲಾಗಿದೆ. ಮೂವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಮಂಜುನಾಥ್ ಹೇಳಿದ್ದಾರೆ. ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ನಿವಾಸಿಗಳ ಕ್ಷೇಮಾ ಭಿವೃದ್ಧಿ ಸಂಘಗಳು (ಆರ್ಡಬ್ಲ್ಯುಎ), ಅಪಾರ್ಟ್ವೆುಂಟ್ ಸಂಘಗಳು ವಾರ್ಡ್ ವಾರು ಮಾಡಲಾಗಿರುವ ಟೆಲಿಗ್ರಾಂ ಗ್ರೂಪ್(quarantinesquad.in/citizen-groups-en) ಅಥವಾ register.quarantinesquad.in ವೆಬ್ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಎಂದು ಮಂಜುನಾಥ್ ಹೇಳಿದ್ದಾರೆ.