

ಬೆಂಗಳೂರು: ಸಿಬ್ಬಂದಿ ಕರೊನಾ ಸೋಂಕಿಗೆ ಒಳಗಾದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ವಿಕ್ಟೋರಿಯಾ ಆಸ್ಪತ್ರೆಯ ಕೋವಿಡ್ ಪ್ರಯೋಗಾಲಯ ಭಾನುವಾರದಿಂದ ಕಾರ್ಯಾರಂಭ ಮಾಡಿದ್ದು, ನಿಮ್ಹಾನ್ಸ್ ಪ್ರಯೋಗಾಲಯ ಸೋಮವಾರದಿಂದ (ಜೂ.29) ಪುನರಾರಂಭವಾಗಲಿದೆ.
ವಿಕ್ಟೋರಿಯಾದಲ್ಲಿ ಪ್ರಯೋಗಾಲಯ ಸಿಬ್ಬಂದಿಗೆ ಸೋಂಕು ತಗುಲಿದ್ದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮುಚ್ಚಿ ಸ್ವಚ್ಛಗೊಳಿಸಲಾಗಿತ್ತು. ಅದೇ ರೀತಿ, ನಿಮ್ಹಾನ್ಸ್ ಪ್ರಯೋಗಾಲ ಯದ ಸಿಬ್ಬಂದಿಗೆ ಸೋಂಕು ಶಂಕೆಯಿಂದಾಗಿ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿತ್ತು. ಈ ಎರಡೂ ಪ್ರಯೋಗಾಲಯಗಳು ಕಾರ್ಯನಿರ್ವಹಿಸದೆ ಕೋವಿಡ್ ಪರೀಕ್ಷೆಗೆ ಹಿನ್ನಡೆ ಉಂಟಾಗಿತ್ತು. ಇಲ್ಲಿ ನಿತ್ಯ 2 ಸಾವಿರ ಕೋವಿಡ್ ಪರೀಕ್ಷೆ ಮಾಡಲಾಗುತ್ತಿತ್ತು. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ವಿವಿಧ ಭಾಗಗಳಿಂದ ಗಂಟಲು ದ್ರವ ಮಾದರಿ ಸಂಗ್ರಹಿಸಿ ಇಲ್ಲಿ ಪರೀಕ್ಷೆಗೆ ಕಳುಹಿಸಲಾಗುತ್ತಿತ್ತು. ಆದರೆ ಪ್ರಯೋಗಾಲಯಗಳು ಸ್ಥಗಿತಗೊಂಡಿದ್ದರಿಂದ ಕಿದ್ವಾಯಿ, ಎನ್ಐವಿ ಸೇರಿದಂತೆ ನಗರದ ಇತರೆ ಪ್ರಯೋಗಾಲಯಗಳಿಗೆ ಹೊರೆ ಹೆಚ್ಚಾಗಿತ್ತು.
ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಸ್ವಯಂ ಕ್ವಾರಂಟೈನ್
ಸದ್ಯ ರಾಜ್ಯದಲ್ಲಿ ಐಸಿಎಂಆರ್ ಮಾನ್ಯತೆ ಹೊಂದಿರುವ 75 ಕೋವಿಡ್ ಪ್ರಯೋಗಾಲಯಗಳಿವೆ. ದಿನೇದಿನೆ ಪರೀಕ್ಷೆ ಬರುವ ಗಂಟಲು ದ್ರವ ಮಾದರಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ವರದಿ ಬರುವುದು ವಿಳಂಬವಾಗುತ್ತಿದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು. ವಿಕ್ಟೋರಿಯಾ ಲ್ಯಾಬ್ಗೆ ಭಾನುವಾರ ಒಂದೇ ದಿನ 1,600 ಗಂಟಲು ದ್ರವ ಮಾದರಿ ಬಂದಿದೆ ಎಂದು ಬಿಎಂಸಿಆರ್ಐ ಡೀನ್ ಡಾ. ಜಯಂತಿ ತಿಳಿಸಿದ್ದಾರೆ.