

ಬಳ್ಳಾರಿ: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿರುವ ಘಟನೆ ಬಳ್ಳಾರಿಯ ಹೊಸಪೇಟೆಯಲ್ಲಿ ಮಂಗಳವಾರ ನಡೆದಿದೆ.
ಶ್ರೇಯಾ ಮೃತ ವಿದ್ಯಾರ್ಥಿನಿ. ಈಕೆ ಹೊಸಪೇಟೆ ನಗರದ ಅನಂತಶಯನ ಗುಡಿ ಬಳಿಯ ಕೆ.ಎಸ್.ಪಿ.ಎನ್. ಕಾಲೇಜಿನ ಓದುತ್ತಿದ್ದಳು. ಫಲಿತಾಂಶ ನೋಡಲು ಕಾಲೇಜಿಗೆ ತೆರಳಿದ್ದ ಶ್ರೇಯಾ, ಫೇಲ್ ಆಗಿದ್ದಕ್ಕೆ ಮನನೊಂದು ಚಲಿಸುತ್ತಿದ್ದ ರೈಲಿನಡಿ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು.
ಆಕೆಯೊಂದಿಗಿದ್ದ ಗೆಳತಿ ರೂಪಾ ತಡೆಯುವ ಪ್ರಯತ್ನ ಮಾಡಿದ್ದಾದರೂ, ಹಳಿ ಮೇಲೆ ಬಿದ್ದ ಪರಿಣಾಮ ಶ್ರೇಯಾ ತಲೆಗೆ ಗಂಭೀರವಾಗಿ ಗಾಯವಾಗಿತ್ತು. ರೂಪಾ ಕೈಗೂ ಏಟು ಬಿದ್ದಿತ್ತು.
ರೈಲ್ವೆ ಹಳಿಯ ಮೇಲೆ ಬಿದ್ದಿದ್ದ ವಿದ್ಯಾರ್ಥಿನಿಯನ್ನು ನೋಡಿದ ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರು. ರೂಪಾ ಸಹ ಆಸ್ಪತ್ರೆಗೆ ದಾಖಲಾಗಿದ್ದಳು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶ್ರೇಯಾ ಮೃತಪಟ್ಟಿದ್ದಾಳೆ. ಇಬ್ಬರು ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿದ್ದರು. ಈ ಸಂಬಂಧ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)