ಅವೈಜ್ಞಾನಿಕ ಕಾಮಗಾರಿಗೆ ಬೇಸತ್ತ ಸಾರ್ವಜನಿಕರು

blm-3
Published on

ಶಿರ್ವ: ಬೆಳ್ಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡುಬೆಳ್ಳೆ ಪೇಟೆ ಪ್ರದೇಶ ಉಡುಪಿ- ಕಾರ್ಕಳ- ಸುಬ್ರಹ್ಮಣ್ಯ ಸಂಪರ್ಕಿಸುವ ರಾಜ್ಯ ಹೆದ್ದಾರಿಯಾಗಿದ್ದು, ಅವೈಜ್ಞಾನಿಕ ಕಾಮಗಾರಿಯಿಂದಾಗಿ ಧೂಳುಮಯವಾಗಿದೆ. ಒಂದೂವರೆ ತಿಂಗಳಿನಿಂದ ಅರ್ಧಂಬರ್ಧ ಕಾಮಗಾರಿ ನಡೆದು ಇನ್ನೂ ಪೂರ್ತಿಗೊಳ್ಳದ ಕಾರಣ ಸಾರ್ವಜನಿಕರು, ರಿಕ್ಷಾ ಚಾಲಕರು, ವ್ಯಾಪಾರಿಗಳು ಶನಿವಾರ ಪ್ರತಿಭಟನೆ ನಡೆಸಿದರು.

ಶಿವಾಜಿ ಎಸ್.ಸುವರ್ಣ ಮಾತನಾಡಿ, 6 ತಿಂಗಳಿಂದ ರಸ್ತೆ ಡಾಂಬರೀಕರಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಪೇಟೆ ಸಂಪೂರ್ಣ ಧೂಳಿನಿಂದ ಆವರಿಸಿದೆ. ಟ್ರಾಫಿಕ್ ಜಾಮ್ ಆಗುತ್ತಿದ್ದು ಅಪಘಾತಕ್ಕೆ ಕಾರಣವಾಗುತ್ತಿದೆ. ವಿಪರೀತ ಧೂಳಿನಿಂದಾಗಿ ವಾಹನ ಸವಾರರು, ಪಾದಚಾರಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೂಡಲೇ ಗುತ್ತಿಗೆದಾರರಿಗೆ ಸೂಚನೆ ನೀಡಿ ರಸ್ತೆ ಡಾಂಬರೀಕರಣ ಪೂರ್ತಿಗೊಳಿಸಬೇಕು ಎಂದು ಆಗ್ರಹಿಸಿದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಮೂಡುಬೆಳ್ಳೆ ಕೇಂದ್ರ ಸ್ಥಳವಾಗಿರುವುದರಿಂದ ಅತ್ಯುತ್ತಮ ಚರಂಡಿಯೊಂದಿಗೆ ಸಮರ್ಪಕ ರಸ್ತೆ ನಿರ್ಮಾಣವಾಗಬೇಕಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಶೀಘ್ರ ಕಾಮಗಾರಿ ಪ್ರಾರಂಭಿಸಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು ಎಂದರು.

ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿ ಸೋಮನಾಥ್ ಗುತ್ತಿಗೆದಾರರಿಗೆ ಸೂಚನೆ ನೀಡಿ ತಕ್ಷಣ ಕಾಮಗಾರಿ ಆರಂಭಿಸಿ ಶೀಘ್ರ ಮುಗಿಸುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಕೂಡಲೇ ಕಾಮಗಾರಿ ಮುಗಿಸದಿದ್ದಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದು ಸಾರ್ವಜನಿಕರು ಎಚ್ಚರಿಕ್ನೆ ನೀಡಿದರು. ರಿಕ್ಷಾ ಚಾಲಕರು ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು. ಅಂಗಡಿ ಮಾಲೀಕರು, ವ್ಯಾಪಾರಸ್ಥರೂ, ಕೆಲಹೊತ್ತು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಬೆಳ್ಳೆ ಚರ್ಚ್‌ನ ಧರ್ಮಗುರು ಜೋರ್ಜ್ ಡಿಸೋಜ, ಪಾಲನಾ ಮಂಡಳಿ ಉಪಾಧ್ಯಕ್ಷ ಪ್ರೀತೇಶ್ ಡೇಸಾ, ಸ್ಥಳೀಯರಾದ ವಿನ್ಸೆಂಟ್ ಫರ್ನಾಂಡಿಸ್, ಚಾರ್ಲ್ಸ್ ಕ್ವಾಡ್ರಸ್, ರಂಜನಿ ಹೆಗ್ಡೆ, ಐಡಾಗಿಬ್ಬ ಡಿಸೋಜ, ನೆವಿಲ್ ಡಿಸೋಜ, ಎ.ಜಿ.ಡಿಸೋಜ, ನಿರಂಜನ್ ರಾವ್ ಬೆಳ್ಳೆ, ರಿತೇಶ್ ಡಿಸೋಜ, ಸುಧಾಕರ ಅಮೀನ್, ರಿಚ್ಚಾರ್ಡ್ ರೋಡ್ರಿಗಸ್, ಸ್ಥಳೀಯ ನಾಗರಿಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net