

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಹಿಂದಿನ ಮಳೆಗಾಲದ ಸಂದರ್ಭ ಹಾಳಾಗಿದ್ದ ರಾಷ್ಟ್ರೀಯ ಹೆದ್ದಾರಿ 66ರ ಸಂಪೂರ್ಣ ನವೀಕರಣ ಈ ಬಾರಿಯೂ ಅನುಮಾನವಾಗಿದ್ದು, ಹಲವೆಡೆ ಕೈಗೊಂಡಿರುವ ಅವೈಜ್ಞಾನಿಕ ಕಾಮಗಾರಿಗಳಿಂದ ಈ ಬಾರಿಯೂ ಅನಾಹುತಗಳಾಗುವ ಭೀತಿ ಎದುರಾಗಿದೆ.
ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಅವ್ಯವಸ್ಥೆಯಿಂದ ಕೂಡಿದೆ. ಹಲವು ವರ್ಷಗಳಿಂದ ಈ ಕುರಿತು ಅಧಿಕಾರಿಗಳ, ಜನಪ್ರತಿನಿಧಿಗಳ ಗಮನ ಸೆಳೆಯುವ ಪ್ರಯತ್ನ ನಡೆಯುತ್ತಲೇ ಇದ್ದು, ಸಮಸ್ಯೆ ಬಗೆಹರಿಯುವುದು ಮಾತ್ರ ಕನಸಾಗಿಯೇ ಉಳಿದಿದೆ.
ತೇಪೆಗೆ ಸೀಮಿತ ದುರಸ್ತಿ: ಬೈಂದೂರಿನಿಂದ ಕುಂದಾಪುರ ತನಕ ರಾಷ್ಟ್ರೀಯ ಹೆದ್ದಾರಿ ಅಲ್ಲಲ್ಲಿ ಹಾಳಾಗಿದ್ದು, ತೇಪೆ ಹಾಕುವ ಕಾರ್ಯ ಪ್ರತಿ ವರ್ಷವೂ ನಡೆಯುತ್ತಿದೆ. ಹೆದ್ದಾರಿ ಮಧ್ಯದಲ್ಲೇ ಕುಸಿತವಾಗುತ್ತಿದ್ದು, ರಸ್ತೆಯ ಮಧ್ಯದಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ವಾಹನ ಚಾಲನೆ ಸಂದರ್ಭ ಇದರ ಅರಿವು ಇರದೆ ವಾಹನಗಳು ಅಪಘಾತಕ್ಕೀಡಾಗುತ್ತಿವೆ.
ಕುಂದಾಪುರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಬೈಂದೂರು ತನಕ ನಿರ್ಮಾಣಗೊಂಡಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿನ ಹೊಂಡಗಳನ್ನು ಅವೈಜ್ಞಾನಿಕವಾಗಿ ಮುಚ್ಚಲಾಗಿದೆ. ಮಳೆ ಜೋರಾಗಿ ಸುರಿದಾಗ ಈ ತೇಪೆಗಳು ಮತ್ತೊಮ್ಮೆ ಕಿತ್ತುಹೋಗುವ ಅಪಾಯವಿದೆ.
ಜಂಕ್ಷನ್ ಹೆದ್ದಾರಿ ಅಪೂರ್ಣ: ನಾಲ್ಕು ರಸ್ತೆಗಳು ಸೇರುವ ಮುಳ್ಳಿಕಟ್ಟೆ ಮತ್ತು ತ್ರಾಸಿ ಜಂಕ್ಷನ್ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಅಪೂರ್ಣವಾಗಿದೆ. ರಾಷ್ಟ್ರೀಯ ಹೆದ್ದಾರಿ ಚತುಷ್ಪಥಗೊಂಡು ನಾಲ್ಕೈದು ವರ್ಷ ಪೂರ್ಣಗೊಂಡಿದ್ದರೂ, ಈ ಎರಡೂ ಪ್ರಮುಖ ಸ್ಥಳಗಳಲ್ಲಿ ಸರ್ವಿಸ್ ರಸ್ತೆ ನಿರ್ಮಾಣಗೊಂಡಿಲ್ಲ. ಮಳೆಗಾಲ ಆರಂಭಕ್ಕೆ ಬೆರಳೆಣಿಕೆ ದಿನಗಳಷ್ಟೇ ಬಾಕಿ ಇದ್ದು, ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಉಂಟಾದ ಕುಸಿತ ಶೀಘ್ರವೇ ದುರಸ್ತಿಗೊಳ್ಳಬೇಕು. ಅವೈಜ್ಞಾನಿಕವಾಗಿ ಮುಚ್ಚಲಾದ ಹೊಂಡಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ನಾಲ್ಕು ರಸ್ತೆಗಳು ಸೇರುವ, ಜನನಿಬಿಡ ತ್ರಾಸಿ ಜಂಕ್ಷನ್ ಮತ್ತು ಮುಳ್ಳಿಕಟ್ಟೆ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ರಾಷ್ಟ್ರೀಯ ಹೆದ್ದಾರಿಯಲ್ಲಿ ಉಂಟಾದ ಹೊಂಡಗಳನ್ನು ಅವೈಜ್ಞಾನಿಕವಾಗಿ ಮುಚ್ಚಲಾಗಿದೆ. ಹೊಂಡ ಬಿದ್ದ ಕಡೆಗಳಲ್ಲಿ ಕೇವಲ ತೇಪೆ ಹಾಕುವ ಕೆಲಸ ಮಾತ್ರ ನಡೆದಿದೆ. ಹೆದ್ದಾರಿ ಮಧ್ಯದಲ್ಲಿ ಕುಸಿತವಾಗಿರುವುದನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಪರಿಹಾರ ಮಾಡಬೇಕು. ರಾಘವೇಂದ್ರ, ಮುಳ್ಳಿಕಟ್ಟೆ ನಿವಾಸಿ ಮಳೆಗಾಲ ಸಮೀಪಿಸುತ್ತಿದ್ದರೂ ಕೆಲವು ಅತ್ಯಂತ ಪ್ರಮುಖ ಸ್ಥಳದಲ್ಲಿ ಕಾಮಗಾರಿ ಅಪೂರ್ಣವಾಗಿದೆ. ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಪೂರ್ಣಗೊಂಡು ಸುಮಾರು ಐದು ವರ್ಷ ಕಳೆದಿದ್ದರೂ ಸಂಪೂರ್ಣ ಮರು ಡಾಂಬರೀಕರಣ ಮಾಡಿಲ್ಲ. ಹಳೇಕಾಲದ ಮಾದರಿಯಲ್ಲಿ ಹೊಂಡ ಮುಚ್ಚುವ ಕೆಲಸ ಮಾತ್ರ ನಡೆದಿದೆ. ಮಾರ್ಕ್ ಡಿಅಲ್ಮೇಡಾ, ತ್ರಾಸಿ
*ಅಗತ್ಯ ಇರುವಕಡೆ ನಿರ್ಮಾಣಗೊಂಡಿಲ್ಲ ಸರ್ವೀಸ್ ರಸ್ತೆ *ಹಲವೆಡೆ ಅಪೂರ್ಣ ಡಾಂಬರೀಕರಣ *ಬಿರುಸಿನ ಮಳೆಗೆ ರಸ್ತೆ ಕುಸಿಯುವ ಭೀತಿ *ಅವೈಜ್ಞಾನಿಕ ಕಾಮಗಾರಿಗಳಿಂದ ಅವಘಡಗಳ ಆತಂಕ