ಸರ್ಕಾರಿ ಬಸ್ ಓಡಾಟ ನಿಂತು ಸಂಕಷ್ಟ

ksrtc bus
Published on

ಕುಂದಾಪುರ: ಸರ್ಕಾರದ ‘ಶಕ್ತಿ’ ಯೋಜನೆ ಮೂಲಕ ಸರ್ಕಾರಿ ಬಸ್‌ಗಳಿಗೆ ಬೇಡಿಕೆ ಹೆಚ್ಚಿದ್ದು, ಬಸ್ ಸೌಕರ್ಯವಿಲ್ಲದ ಪ್ರದೇಶಗಳಿಗೆ ಸರ್ಕಾರಿ ಬಸ್ ಬೇಕು ಎಂಬ ಕೂಗು ಕೇಳಿ ಬಂದಿದೆ. ಆದರೆ ಖಾಸಗಿ ಬಸ್ ಮಾಲೀಕರ ನ್ಯಾಯಾಲಯದ ತಡೆಯಾಜ್ಞೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಬಸ್ ಸಂಚಾರವೂ ಸ್ಥಗಿತಗೊಂಡಿದೆ.

ಖಾಸಗಿ ಬಸ್ ಮಾಲೀಕರು ನ್ಯಾಯಾಲಯದ ತಡೆಯಾಜ್ಞೆ ತಂದಿರುವ ಹಿನ್ನೆಲೆಯಲ್ಲಿ ಕುಂದಾಪುರದಿಂದ ತ್ರಾಸಿ- ಮೊವಾಡಿ- ಪಡುಕೋಣೆ- ಬಡಾಕೆರೆಯಾಗಿ ನಾಡ, ಕೋಣ್ಕಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸರ್ಕಾರಿ ಬಸ್ ನಿಂತಿದೆ. ನ್ಯಾಯಾಲಯದ ತಡೆಯಾಜ್ಞೆ ತೆರವುಗೊಳಿಸಿ ಬಸ್ ಸಂಚಾರವನ್ನು ಪುನರಾರಂಭಿಸುವಂತೆ ಈ ಭಾಗದ ಜನರು ಮನವಿ ಮಾಡಿದ್ದಾರೆ.

ಮತ್ತೆ ಬಸ್ ಆರಂಭಿಸಿ

ಕುಂದಾಪುರದಿಂದ ತ್ರಾಸಿ- ಮೊವಾಡಿ- ಪಡುಕೋಣೆ- ಬಡಾಕೆರೆಯಾಗಿ ನಾಡ, ಕೋಣ್ಕಿ ಮಾರ್ಗದಲ್ಲಿ ಯಾವುದೇ ಖಾಸಗಿ ಬಸ್ ಸಂಚರಿಸುವುದಿಲ್ಲ. ಹೀಗಾಗಿ ಈ ಮಾರ್ಗದಲ್ಲಿ ಸರ್ಕಾರಿ ಬಸ್ ಸೌಲಭ್ಯ ಒದಗಿಸುವಂತೆ ಸ್ಥಳೀಯ ವಿವಿಧ ಸಂಘಟನೆಗಳು ಹಾಗೂ ನಾಗರಿಕರು ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಮನವಿ ಮಾಡುತ್ತಲೇ ಬಂದಿದ್ದರು. ಈ ಭಾಗದ ಜನರ ಹೋರಾಟ ಹಾಗೂ ಪ್ರಯತ್ನದ ಫಲವಾಗಿ ಆರಂಭಗೊಂಡಿದ್ದ ಸರ್ಕಾರಿ ಬಸ್ ಸಂಚಾರದಿಂದ ಈ ಭಾಗದ ಹತ್ತಾರೂ ಊರಿಗೆ ಪ್ರಯೋಜನವಾಗುತ್ತಿತ್ತು. ಈ ಭಾಗದಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಪ್ರತಿ ನಿತ್ಯ ಪ್ರಯಾಣಿಸುತ್ತಾರೆ. ಆದರೆ ಈಗ ಬಸ್ ಇಲ್ಲದೆ ಕಾಲ್ನಡಿಗೆ ಅಥವಾ ಇನ್ಯಾವುದಾದರೂ ಬಾಡಿಗೆ ವಾಹನವನ್ನು ಅವಲಂಬಿಸುವಂತಾಗಿದೆ.

ಜನರು ಕುಂದಾಪುರ, ಬೈಂದೂರು ಮತ್ತಿತರ ಕಡೆಗಳಿಗೆ ಹೋಗಬೇಕಾದರೆ 3- 4 ಕಿ.ಮೀ. ನಡೆದುಕೊಂಡು ಹೋಗಿ ಬಸ್ ಹಿಡಿಯಬೇಕಿದೆ. ಮುಖ್ಯವಾಗಿ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಸೇರಿದಂತೆ ಇದೇ ಮಾರ್ಗವಾಗಿ ಸಂಚರಿಸುವ ನೂರಾರು ಮಂದಿ ಪ್ರತಿ ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ.

ಖಾಸಗಿ ಬಸ್ ಸಂಚಾರವೂ ಇಲ್ಲ

ಕುಂದಾಪುರದ ಹಳ್ಳಿ ಹಳ್ಳಿಗಳಿಗೆ ಖಾಸಗಿ ಬಸ್ ಸೇವೆ ಇದೆ. ಆದರೆ ಈ ಮಾರ್ಗದಲ್ಲಿ ಒಂದೇ ಒಂದು ಖಾಸಗಿ ಬಸ್ ಸಂಚರಿಸದಿರುವುದು ಆಶ್ಚರ್ಯ ಎನ್ನಬಹುದು. ಈ ಮಾರ್ಗದಲ್ಲಿ ಖಾಸಗಿ ಬಸ್ ಸಂಚಾರವೂ ಇಲ್ಲ. ಇದ್ದ ಒಂದು ಕೆಎಸ್‌ಆರ್‌ಟಿಸಿ ಬಸ್ ಸಂಚಾರವೂ ಸ್ಥಗಿತಗೊಂಡಿದ್ದು ಸಾರ್ವಜನಿಕರು ಸಂಕಷ್ಟ ಪಡುವಂತಾಗಿದೆ.

ಹೋರಾಟದ ಫಲವಾಗಿ ಈ ಭಾಗದಲ್ಲಿ ಸಂಚರಿಸುತ್ತಿದ್ದ ಸರ್ಕಾರಿ ಬಸ್ ನಿಲ್ಲಿಸಲು ಪ್ರಯತ್ನಿಸಿರುವುದು ಅನ್ಯಾಯ. ಇದರ ಬಗ್ಗೆ ಸೂಕ್ತ ಗಮನ ಹರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಾಲೇಜಿಗೆ ಹೋಗಲು ಅನುಕೂಲವಾಗುವಂತೆ ಸರ್ಕಾರಿ ಬಸ್‌ಗಳು ಸಂಚರಿಸುವಂತೆ ಮಾಡಬೇಕು. ಇಲ್ಲಿನ ಅಗತ್ಯವನ್ನು ಮನಗಂಡು ಸ್ಥಗಿತಗೊಂಡಿರುವ ಸರ್ಕಾರಿ ಬಸ್ ಸಂಚಾರವನ್ನು ಪುನರಾರಂಭಿಸಬೇಕು. - ಸುರೇಶ್ ಕಲ್ಲಾಗರ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ https://www.vijayavani.net/unscientific-work-on-the-highway https://www.vijayavani.net/awareness-summer-camp-concludes

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net