ವೇದದ ಮಹತ್ವ ಬಗ್ಗೆ ಸಾರ್ವಜನಿಕರಿಗೆ ಅರಿವು:ಸಮ್ಮೇಳನಕ್ಕೆ ಚಾಲನೆ

veda
Published on

ಬೆಂಗಳೂರು: ವೇದಗಳ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಸಾಕ್ಷಿ ಟ್ರಸ್ಟ್, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಸೇರಿ ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಶ್ರೀ ಅರೋಬಿಂದೊ ಕಪಾಲಿಶಾಸಿ ವೇದಸಂಸ್ಕೃತಿ ಸಂಸ್ಥೆ, ಆಯೋಜಿಸಿರುವ ಮೂರು ದಿನಗಳ ‘ಲಿವಿಂಗ್ ವೇದ’ ಸಮ್ಮೇಳನಕ್ಕೆ ಶುಕ್ರವಾರ ಚಾಲನೆ ದೊರೆಯಿತು.

ಜೆ.ಪಿ. ನಗರದ ಶ್ರೀ ಅರೋಬಿಂದೊ ಸಂಕೀರ್ಣದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕನಕಪುರ ರಸ್ತೆಯ ವಡೇರಹಳ್ಳಿಯ ಸುವರ್ಣಮುಖಿ ಆಶ್ರಮದಲ್ಲಿ ಮುಂದಿನ ಎರಡು ದಿನ ಕಾರ್ಯಕ್ರಮಗಳು ಜರುಗಲಿದ್ದು, ಅಂತಾರಾಷ್ಟ್ರೀಯ ವಿದ್ವಾಂಸರು ಪ್ರಬಂಧ ಮಂಡಿಸಲಿದ್ದಾರೆ.

ಶ್ರೀ ಅರೋಬಿಂದೊ ಸೊಸೈಟಿ ಅಧ್ಯಕ್ಷ ಡಾ. ಅಜಿತ್ ಸಬ್ನಿಸ್ ಮಾತನಾಡಿ, ವೇದ ಪ್ರಾಚೀನವಾಗಿದ್ದು, ಇದು ಮನುಕುಲಕ್ಕೆ ಅಗತ್ಯವಾಗಿದೆ. ಭಾರತದ ಸಂಸ್ಕೃತಿಯ ಅಡಿಪಾಯವೂ ಆಗಿದೆ. ಇದಕ್ಕೆ ಯಾವುದೇ ಧರ್ಮ ಅಂಟಿಕೊಂಡಿಲ್ಲ. ವೇದ ಗೌರವಿಸುವವರು ಆಧ್ಯಾತ್ಮಿಕತೆಯಲ್ಲಿ ಗುರುವನ್ನು ಅನುಸರಿಸಬಹುದು. ಆದರೆ, ಇಂದು ಹೆಚ್ಚಾಗಿ ಅಪಾರ್ಥಕ್ಕೆ ಈಡಾಗಿದೆ. ಈ ಕೊರತೆ ನಿವಾರಿಸಲು ಸಮ್ಮೇಳನ ಆಯೋಜಿಸಲಾಗಿದೆ ಎಂದರು.

200 ವರ್ಷಗಳಲ್ಲಿ ಇದನ್ನು ಹೇಗೆ ವ್ಯಾಖ್ಯಾನಿಸಲಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವ ಮೂಲಕ ವೇದದ ಸಮಕಾಲೀನ ಪ್ರಸ್ತುತತೆ ವಿವರಿಸುವುದು ಸಮೇಳನದ ಉದ್ದೇಶವಾಗಿದೆ. ವೇದವನ್ನು ಅರ್ಥ ಮಾಡಿಕೊಳ್ಳುವ ಜತೆಗೆ ಪ್ರಸ್ತುತತೆಯನ್ನು ಕಂಡುಕೊಳ್ಳುವುದು ಮತ್ತು ವಿವಿಧ ಕ್ಷೇತ್ರಗಳಲ್ಲಿ ಜೀವನದ ಉನ್ನತಿಗಾಗಿ ಹೇಗೆ ಅನ್ವಯಿಸಲಿದೆ ಎಂಬುದರ ಬಗ್ಗೆಯೂ ಚಿಂತನ- ಮಂಥನ ನಡೆಸಲಾಗುವುದು ಎಂದು ತಿಳಿಸಿದರು. ಜೆಎನ್‌ಯು ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪ್ರೊ. ಮಕರಂದ ಪರಾಂಪಜೆ, ನಿವೃತ್ತ ಐಎಎಸ್ ಅಧಿಕಾರಿ ಭರತ್ ಲಾಲ್ ಮೀನಾ, ಕರ್ನಾಟಕ ಗುರುಕುಲ ಎಜುಕೇಷನ್‌ನ ಡಾ. ರಾಮಚಂದ್ರ ಕೋಟಮನೆ, ಬೆಂಗಳೂರು ವಿಶ್ವಿವಿದ್ಯಾಲಯದ ವಿಶ್ರಾಂತ ಕುಲಪತಿ ವೇಣುಗೋಪಾಲ್, ಪ್ರಾಧ್ಯಾಪಕ ಡಾ. ನಾರಾಯಣಸ್ವಾಮಿ ವೇದಗಳ ಕುರಿತು ಬೆಳಕು ಚೆಲ್ಲಿದರು.

ವೇದ ಅಂದರೆ ಜ್ಞಾನ ಮತ್ತು ತಿಳಿವಳಿಕೆ. ವೇದಗಳು ಪುರಾತನ ಭಾರತದಲ್ಲಿ ಹುಟ್ಟಿದ ಧಾರ್ಮಿಕ ಗ್ರಂಥ. ವೇದಗಳು ಪ್ರತಿಯೊಬ್ಬ ವ್ಯಕ್ತಿಗೂ ಆಧ್ಯಾತ್ಮಿಕ ಜೀವನವನ್ನು ನಡೆಸಲು ಸ್ಫೂರ್ತಿ ನೀಡುತ್ತದೆ. ಸನಾತನ ಧರ್ಮದ ಅಡಿಪಾಯ. ಭಾರತೀಯ ಗ್ರಂಥವನ್ನು ಇವು ರೂಪಿಸಿವೆ.

-ಸ್ವಾಮಿ ವೀರೇಶಾನಂದ ಸರಸ್ವತಿ, ರಾಮಕೃಷ್ಣ ಮಠ, ತುಮಕೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net