

ಹಾವೇರಿ: ಪಬ್‌ಜಿ ವಿಡಿಯೋ ಗೇಮ್ ಆಡಬೇಡ ಎಂದಿದ್ದಕ್ಕೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಬಾಲಕನೊಬ್ಬ ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ತಾಲೂಕಿನ ಸಂಗೂರು ಗ್ರಾಮದಲ್ಲಿ ಸಂಭವಿಸಿದೆ.
ತೇಜಸ್ ಶಿಡ್ಲಾಪುರ (17) ಆತ್ಮಹತ್ಯೆಗೆ ಶರಣಾದ ಬಾಲಕ. ಅತಿಯಾಗಿ ಪಬ್‌ಜಿ ಆಡುತ್ತಿದ್ದ ಈತನಿಗೆ ಪೋಷಕರು ಬುದ್ಧಿವಾದ ಹೇಳಿದ್ದಾರೆ. ಆಗಲೂ ಕೇಳದ್ದಕ್ಕೆ ಮೊಬೈಲ್‌ಗೆ ಇಂಟರ್‌ನೆಟ್ ಹಾಕಿಸಿರಲಿಲ್ಲ. ಇದರಿಂದ ಬೇಸತ್ತ ಬಾಲಕ ಆ. 31ರಂದು ತೋಟಕ್ಕೆ ಹೋಗಿ ಅಲ್ಲಿ ಬೆಳೆಗಳಿಗೆ ಸಿಂಪಡಿಸಲು ಇಟ್ಟಿದ್ದ ಕ್ರಿಮಿನಾಶಕ ಸೇವಿಸಿದ್ದ.
ದಾರಿಹೋಕರಿಂದ ವಿಷಯ ತಿಳಿದ ಪಾಲಕರು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಗುರುವಾರ ಮೃತಪಟ್ಟಿದ್ದಾನೆ. ಈ ಕುರಿತು ಹಾವೇರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಬ್‌ಜಿ ಸೇರಿದಂತೆ ಚೀನಾದ ಅನೇಕ ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ನಿಷೇಧಿಸಿದೆ. ಇದು ಅದಕ್ಕೂ ಮೊದಲು ನಡೆದ ಘಟನೆಯಾಗಿದೆ.