ಸಜೀಪನಡು ಗ್ರಾಪಂ ಸದಸ್ಯ ಪ್ರತಿಭಟನೆ

03
Published on

ಬಂಟ್ವಾಳ: ಸಜೀಪನಡು ಗ್ರಾಮದಲ್ಲಿ ದಾರಿದೀಪ ದುರಸ್ತಿ, ಚರಂಡಿ ಹೂಳೆತ್ತುವ ಬಗ್ಗೆ ಮಾಡಿದ ಮನವಿಗೆ ಪಂಚಾಯಿತಿ ನಿರ್ಲಕ್ಷೃ ಧೋರಣೆ ಅನುಸರಿಸಿದೆ ಎಂದು ಆರೋಪಿಸಿ ಪಂಚಾಯಿತಿ ಸದಸ್ಯ ಮಹಮ್ಮದ್ ನಾಸೀರ್ ಗ್ರಾಪಂ ಕಚೇರಿ ಮುಂದೆ ಏಕಾಂಗಿಯಾಗಿ ಪ್ರತಿಭಟನೆ ಆರಂಭಿಸಿದ್ದಾರೆ.

ಪಂಚಾಯಿತಿಯ ಜಗಲಿಯಲ್ಲಿಯೇ ಚಾಪೆ ಹಾಸಿ ಧರಣಿ ಆರಂಭಿಸಿರುವ ಮಹಮ್ಮದ್ ನಾಸೀರ್ ಬೇಡಿಕೆ ಈಡೇರುವವರೆಗೂ ಧರಣಿ ಮುಂದುವರಿಸುವುದಾಗಿ ತಿಳಿಸಿದ್ದಾರೆ.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಜೀಪನಡು ಗ್ರಾಪಂ ವ್ಯಾಪ್ತಿಯಲ್ಲಿರುವ ದಾರಿದೀಪ ದುರಸ್ತಿ ಹಾಗೂ ಚರಂಡಿ ಹೂಳೆತ್ತುವ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗಿದೆ. ಇಲ್ಲಿನ ದಾರಿದೀಪ ವ್ಯವಸ್ಥೆ ತೀರಾ ಕೆಟ್ಟದಾಗಿದೆ. ಇತ್ತೀಚೆಗೆ ದೇರಾಜೆ ಪರಿಸರದಲ್ಲಿ ಅಹಿತಕರ ಘಟನೆ ನಡೆದಿದ್ದು, ಪೊಲೀಸ್ ಠಾಣೆಯಿಂದ ಸೂಚನೆ ಬಂದ ಬಳಿಕ 3 ದಾರಿದೀಪಗಳನ್ನು ದುರಸ್ತಿ ಮಾಡಲಾಗಿದೆ. ಇತರ ಭಾಗಗಳಲ್ಲೂ ಬೀದಿದೀಪ ದುರಸ್ತಿಪಡಿಸುವಂತೆ 2 ಬಾರಿ ಅಧ್ಯಕ್ಷರು ಹಾಗೂ ಪಿಡಿಒ ಅವರಿಗೆ ಮನವಿ ನೀಡಿದರೂ ಗಣನೆಗೆ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.

ದಾರಿ ದೀಪ ದುರಸ್ತಿ ಆಗದ ಕಾರಣ ರಾತ್ರಿ ವೇಳೆ ಮದರಸಗಳಿಂದ ಹಾಗೂ ಟ್ಯೂಷನ್‌ನಿಂದ ಬರುವ ಮಕ್ಕಳಿಗೆ ತೊಂದರೆಯಾಗುತ್ತಿದೆ. ಒಂದೆಡೆ ಮಳೆಗಾಲ, ಇನ್ನೊಂದೆಡೆ ಕತ್ತಲು ತುಂಬಿದ ಪರಿಸರದಲ್ಲಿ ರಸ್ತೆಯಲ್ಲಿ ನೀರು ನಿಂತು ಸಾರ್ವಜನಿಕರಿಗೆ ನಡೆದಾಡಲು ಸಾಧ್ಯವಾಗುತ್ತಿಲ್ಲ. ಪಂಚಾಯಿತಿ ದುರಾಡಳಿತ ಹಾಗೂ ನಿರ್ಲಕ್ಷೃದ ವಿರುದ್ಧ ಜಿಪಂ ಮುಖ್ಯ ಕಾರ್ಯದರ್ಶಿ ಹಾಗೂ ತಾಪಂ ಕಾರ್ಯನಿರ್ವಹಣಾಧಿಕಾರಿಯವರ ಗಮನಕ್ಕೂ ತರಲಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net