ಕೆಂಪುಕಲ್ಲು, ಮರಳು ಅಲಭ್ಯತೆಯಿಂದ ನಿರ್ಮಾಣ ಕಾರ್ಯ ಸ್ಥಗಿತ

471242372_1110100020902286_3671032563281831681_n
Published on


ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಕೆಂಪು ಕಲ್ಲು ಹಾಗೂ ಮರಳು ಲಭ್ಯವಾಗದೆ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ. ಇದರಿಂದಾಗಿ ನಿರ್ಮಾಣ ಕ್ಷೇತ್ರದ ಕಾರ್ಮಿಕರು, ಉದ್ಯಮಿಗಳು ಆರ್ಥಿಕವಾಗಿ ತೊಂದರೆಗೀಡಾಗಿದ್ದಾರೆ. ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ನೀಡಿರುವ ಭರವಸೆಯಂತೆ ಸಮಸ್ಯೆ ಬಗೆಹರಿಸದಿದ್ದರೆ ಪ್ರತಿಭಟನೆ ಅನಿವಾರ್ಯ ಎಂದು ದ.ಕ. ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಹಾಬಲ ಕೊಟ್ಟಾರಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಘದ ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ಮರಳು ಹಲವು ವರ್ಷಗಳಿಂದ ಲಭ್ಯವಾಗದೆ ಗುತ್ತಿಗೆದಾರರು ಸಂಕಷ್ಟಕ್ಕೀಡಾಗಿದ್ದಾರೆ. ಈಗ ಕಾನೂನಿನ ನೆಪವೊಡ್ಡಿ ಕೆಂಪು ಮುರಕಲ್ಲಿನ ಗಣಿಗಾರಿಕೆ ನಿರ್ಬಂಧಿಸಿರುವ ಕಾರಣ ಮತ್ತಷ್ಟು ಸಮಸ್ಯೆಯಾಗಿದೆ ಎಂದರು.
ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿ ರೂಪಿಸುವ ಬಗ್ಗೆ ಹಲವು ವರ್ಷಗಳಿಂದ ಸರ್ಕಾರದ ಪ್ರತಿನಿಧಿಗಳು ಹೇಳುತ್ತಾ ಬಂದಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ. ಗುತ್ತಿಗೆದಾರರು ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ರಾಜ್ಯದ ಬೊಕ್ಕಸಕ್ಕೆ ತೆರಿಗೆ ರೂಪದಲ್ಲಿ ದುಡಿಮೆಯ ಪಾಲನ್ನು ಭರಿಸುತ್ತಿದ್ದೇವೆ. ಈಗ ಕಾರ್ಮಿಕರು ಕೆಲಸವಿಲ್ಲದೆ ಉಪವಾಸ ಬೀಳುವ ಪರಿಸ್ಥಿತಿ ಬಂದಿದೆ.
ಸಮಸ್ಯೆ ಬಗ್ಗೆ ಜಿಲ್ಲಾಡಳಿತ ಹಾಗೂ ಸರ್ಕಾರದ ಗಮನ ಸೆಳೆಯಲಾಗಿದ್ದು, ಸಚಿವ ಸಂಪುಟ ಸಭೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ಸಮಸ್ಯೆ ಶೀಘ್ರ ಬಗೆಹರಿಸದಿದ್ದರೆ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಅವರು ಹೇಳಿದರು.
ಜಿಲ್ಲಾಡಳಿತ ಸ್ಯಾಂಡ್ ಬಜಾರ್ ಆ್ಯಪ್ ಮೂಲಕ ಮರಳು ಪಡೆಯಲು ಹೇಳುತ್ತಿದೆ. ಆದರೆ ಆ್ಯಪ್‌ನಲ್ಲಿ ಮರಳು ಲಭ್ಯವಾಗುತ್ತಿಲ್ಲ. ಗಣಿ ಇಲಾಖೆಯವರು ಈ ಬಗ್ಗೆ ಸ್ಪಂದಿಸುತ್ತಿಲ್ಲ. ಆ್ಯಪ್ ಮೂಲಕ ಸಿಗುವ ಮರಳಿನ ದರ ದುಬಾರಿಯಾಗಿದ್ದು, ಮರಳಿನ ಗುಣಮಟ್ಟ ಮನೆ ನಿರ್ಮಾಣಕ್ಕೆ ಪೂರಕವಾಗಿಲ್ಲ ಎಂದು ಸಂಘದ ಉಪಾಧ್ಯಕ್ಷ ಸತೀಶ್ ಕುಮಾರ್ ಹೇಳಿದರು.
ಕೆಂಪು ಕಲ್ಲು ಗಣಿಗಾರಿಕೆ ಈ ಹಿಂದೆ ಅಕ್ರಮವಾಗಿ ನಡೆಯುತ್ತಿದ್ದರೆ ಸಂಬಂಧಪಟ್ಟ ಅಧಿಕಾರಿಗಳೇ ಕಾರಣ. ಈಗ ಏಕಾಏಕಿಯಾಗಿ ಸಂಪೂರ್ಣವಾಗಿ ಕಲ್ಲು ಕೋರೆಗಳನ್ನು ಬಂದ್ ಮಾಡಿಸಿದರೆ ನಿರ್ಮಾಣ ಕಾಮಗಾರಿಯ ಜತೆಗೆ ಕಾರ್ಮಿಕರ ಪರಿಸ್ಥಿತಿ ಏನು ಎಂದು ಕಾರ್ಯದರ್ಶಿ ಅಶೋಕ್ ಕುಲಾಲ್ ಪ್ರಶ್ನಿಸಿದರು.
ಸಂಘದ ಜತೆ ಕಾರ್ಯದರ್ಶಿ ಲಕ್ಷ್ಮೀಪ್ರಸಾದ್, ಕೋಶಾಧಿಕಾರಿ ಸುರೇಶ್ ಜೆ., ಸದಸ್ಯರಾದ ಚಂದನ್, ಕೇಶವ ಚನ್ನಪ್ಪ
ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net