ಎಂಆರ್‌ಪಿಎಲ್ ಹಸಿರು ವಲಯ ಭೂ ಸ್ವಾಧೀನ ಪರಿಹಾರಕ್ಕೆ ಒಮ್ಮತ

mng--19 July MRPL
Published on

ಮಂಗಳೂರು: ಎಂಆರ್‌ಪಿಎಲ್ ಹಸಿರು ವಲಯ ನಿರ್ಮಾಣ ಸಂಬಂಧಿಸಿ 27 ಎಕರೆ ಭೂಸ್ವಾಧೀನಕ್ಕೆ ನಿರ್ವಸಿತರಿಗೆ ಸೂಕ್ತ ಪರಿಹಾರ ಒದಗಿಸಲು ನಿರ್ಧರಿಸಲಾಗಿದೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಲೋಕಸಭಾ ಸದಸ್ಯ ಕ್ಯಾ. ಬ್ರಿಜೇಶ್ ಚೌಟ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಯಿತು.

ಪ್ರತಿ ಎಕರೆಗೆ 8 ಲಕ್ಷ ರೂ. ಪರಿಹಾರ, ಉದ್ಯೋಗ ಬದಲು ಪ್ರತಿ ಕುಟುಂಬಕ್ಕೆ 20 ಲಕ್ಷ ರೂ. ನಗದು ಮತ್ತು ನಿವೇಶನ ಸೇರಿದಂತೆ ಪರಿಹಾರ ನೀಡಲು ಎಂಆರ್‌ಪಿಎಲ್ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಹಲವು ವರ್ಷಗಳಿಂದ ಬಾಕಿ ಇರುವ ಈ ವಿಷಯವನ್ನು ಎಲ್ಲರಿಗೂ ತೃಪ್ತಿಕರವಾಗಿ ಇತ್ಯರ್ಥ ಪಡಿಸಬೇಕು. ನಿರ್ವಸಿತರ ಸಮಸ್ಯೆಯ ತೀವ್ರತೆ ತನಗೆ ಅರಿವಿದ್ದು, ಉತ್ತಮ ಪ್ಯಾಕೇಜ್ ದೊರಕಬೇಕು ಎಂದು ಸಂಸದರು ಹೇಳಿದರು.

ಇಲ್ಲಿನ 27 ಎಕರೆಯಲ್ಲಿ 408 ಡೋರ್ ನಂಬರ್ ಗಳಿದ್ದು, ಸಮೀಕ್ಷೆಯಂತೆ 93.96 ಕೋಟಿ ರೂ. ಭೂಸ್ವಾಧೀನ ಮತ್ತಿತರ ವೆಚ್ಚವಾಗುವ ಸಾಧ್ಯತೆ ಇದೆ ಎಂದು ಸಮೀಕ್ಷೆ ನಡೆಸಿದ ಕೆಪಿಟಿ ಸಂಸ್ಥೆ ವರದಿ ನೀಡಿದೆ.

ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಮಾತನಾಡಿ, ಎಂಆರ್‌ಪಿಎಲ್ ಸಲ್ಲಿಸಿರುವ ಪ್ಯಾಕೇಜ್ ಬಗ್ಗೆ ಶೀಘ್ರದಲ್ಲೇ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದು ಹೇಳಿದರು.

ಶಾಸಕ ಉಮಾನಾಥ ಕೋಟ್ಯಾನ್, ಎಂಆರ್‌ಪಿಎಲ್ ಎಂ.ಡಿ. ಶ್ಯಾಂಪ್ರಸಾದ್, ಕೆಐಎಡಿಬಿ ಭೂಸ್ವಾಧೀನಾಧಿಕಾರಿ ರಾಜು, ನಿರ್ವಸಿತರ ಮುಖಂಡರಾದ ಮುನೀರ್ ಕಾಟಿಪಳ್ಳ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net