ಬೆಂಗಳೂರಿನಲ್ಲಿ ಕಂಬಳ ಭವನ ನಿರ್ಮಾಣಕ್ಕೆ ಪ್ರಸ್ತಾವನೆ: ಸಂಘಟಕ, ಶಾಸಕ ಅಶೋಕ್ ಕುಮಾರ್ ಮಾಹಿತಿ

mogaru sanmana
ಅಡ್ವೆಯಲ್ಲಿ ನಡೆದಿದ್ದ 31ನೇ ವರ್ಷದ ಹೊನಲು ಬೆಳಕಿನ ಕೋಟಿ-ಚೆನ್ನಯ ಜೋಡುಕರೆ ಕಂಬಳೋತ್ಸವದಲ್ಲಿ ಹಗ್ಗ ಹಿರಿಯ ಕೋಣಗಳ ಯಜಮಾನ ಮೊಗರು ಪಾಕಬೆಟ್ಟು ಭಾಸ್ಕರ ಲಕ್ಕಣ್ಣ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕೊಳಚೂರು ಕೊಂಡೆಟ್ಟು ಸುಕುಮಾರ್ ಶೆಟ್ಟಿ, ಕೂಳೂರು ಪೊಯ್ಯೆಲು ಪಿ.ಆರ್.ಶೆಟ್ಟಿ, ನಂದಳಿಕೆ ಶ್ರೀಕಾಂತ ಭಟ್, ಎರ್ಮಾಳು ರೋಹಿತ್ ಹೆಗ್ಡೆ, ಬೋಳದಗುತ್ತು ಸತೀಶ್ ಶೆಟ್ಟಿ ಮತ್ತಿತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಬೆಂಗಳೂರಿನಲ್ಲಿ 5ಎಕರೆ ಜಮೀನು ಪಡೆಯಲು ಹಾಗೂ ಕಂಬಳ ಭವನ ನಿರ್ಮಾಣ ಯೋಜನೆ ಹಾಕಿಕೊಳ್ಳಲಾಗಿದ್ದು, ಶೀಘ್ರವೇ ಈ ಕುರಿತು ಮುಖ್ಯಮಂತ್ರಿಗಳಿಗೂ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಬೆಂಗಳೂರು ಕಂಬಳದ ಯಶಸ್ವೀ ಸಂಘಟಕ, ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಅಡ್ವೆ ನಂದಿಕೂರು ಜೋಡುಕರೆ ಕಂಬಳ ಸಮಿತಿಯ ಆಶ್ರಯದಲ್ಲಿ ಶನಿವಾರ ಅಡ್ವೆಯಲ್ಲಿ ಆಯೋಜಿಸಲಾಗಿದ್ದ 31ನೇ ವರ್ಷದ ಹೊನಲು ಬೆಳಕಿನ ಕೋಟಿ-ಚೆನ್ನಯ ಜೋಡುಕರೆ ಕಂಬಳೋತ್ಸವದಲ್ಲಿ ವಿಶೇಷ ಸನ್ಮಾನ ಸ್ವೀಕರಿಸಿ ಮಾತನಾಡಿದರು.

20-20 ಮಾದರಿಯಲ್ಲಿ ಕಂಬಳ ಆಯೋಜನೆ

ರೈತಾಪಿ ವರ್ಗದ ಸ್ವಾಭಿಮಾನದ ಕ್ರೀಡೆಯಾಗಿರುವ ಕಂಬಳಕ್ಕೆ ವಿವಿಧ ರೂಪ ಕೊಡುವ ಕೆಲಸ ಮಾಡಬೇಕು. ಐಪಿಎಲ್‌ನ 20-20 ಕ್ರಿಕೆಟ್ ಮಾದರಿಯಲ್ಲಿ ಇದನ್ನು ಆಯೋಜನೆ ಮಾಡುವ ಬಗ್ಗೆಯೂ ಸಲಹೆ ಬಂದಿದೆ. ವರ್ಷದೊಳಗೆ ತುಳುವನ್ನು ಹೆಚ್ಚುವರಿ ಭಾಷೆಯನ್ನಾಗಿಸಲು ಕರಾವಳಿ ಭಾಗದ ಶಾಸಕರು ಸಂಘಟಿತರಾಗಿ ಪ್ರಯತ್ನಿಸುತ್ತೇವೆ ಎಂದರು.

ಕಂಬಳ ಸಾಧಕರಿಗೆ ಗೌರವಾರ್ಪಣೆ

ಹಗ್ಗ ಹಿರಿಯ ಕೋಣಗಳ ಯಜಮಾನ ಮೊಗರು ಪಾಕಬೆಟ್ಟು ಭಾಸ್ಕರ ಲಕ್ಕಣ್ಣ ಶೆಟ್ಟಿ ಅವರನ್ನು ಹಗ್ಗ ಹಿರಿಯ ಕೋಣಗಳು ಕರೆಗೆ ಇಳಿಯುವ ಸಮಯದಲ್ಲಿ ಕೋಣಗಳ ಯಜಮಾನರ ಉಪಸ್ಥಿತಿಯಲ್ಲಿ ಅಭಿನಂದಿಸಲಾಯಿತು. ಬೆಂಗಳೂರಿನಲ್ಲಿ ತುಳು ಸಂಘಟನೆಯನ್ನು ಪರಿಚಯಿಸಿ, ಬೆಂಗಳೂರು ಕಂಬಳ ಸಮಿತಿಯ ಗೌರವಾಧ್ಯಕ್ಷರಾಗಿ ಕಂಬಳವನ್ನು ಯಶಸ್ವಿಗೊಳಿಸಿದ ಉದ್ಯಮಿ ಬಂಜಾರ ಪ್ರಕಾಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು, ಮಾಜಿ ಸಚಿವ ಬಿ.ರಮಾನಾಥ ರೈ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಮಿಥುನ್ ರೈ, ಮುನಿಯಾಲ್ ಉದಯ ಕುಮಾರ್ ಶೆಟ್ಟಿ, ಅದಾನಿ ಯುಪಿಸಿಎಲ್ ಕಾರ್ಯ ನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ರಾಜ್ಯ ಬಿಜೆಪಿ ಕಾರ್ಯದರ್ಶಿ ಕ್ಯಾ.ಬ್ರಿಜೇಶ್ ಚೌಟ, ಸಾಯಿರಾಧಾ ಗ್ರೂಪ್ಸ್‌ನ ಆಡಳಿತ ನಿರ್ದೇಶಕ ಮನೋಹರ ಶೆಟ್ಟಿ, ಜಿಲ್ಲಾ ಕಂಬಳ ಸಮಿತಿ ಗೌರವಾಧ್ಯಕ್ಷ ಭಾಸ್ಕರ ಸುಬ್ಬಯ್ಯ ಕೋಟ್ಯಾನ್, ಮುಂಬಯಿ ಉದ್ಯಮಿಗಳಾದ ಕರುಣಾಕರ ಶೆಟ್ಟಿ, ಅಶೋಕ್ ಶೆಟ್ಟಿ, ಪೂನ ಬಂಟರ ಸಂಘದ ಅಧ್ಯಕ್ಷ ಇನ್ನಾ ಕುರ್ಕಿಲ್‌ಬೆಟ್ಟು ಬಾಳಿಕೆ ಸಂತೋಷ್ ಶೆಟ್ಟಿ, ಚಂದ್ರಹಾಸ್ ಶೆಟ್ಟಿ ಪುಚ್ಚೊಟ್ಟು ಬೀಡು, ಸಂತೋಷ್ ಕುಮಾರ್ ಶೆಟ್ಟಿ ಪಲ್ಲವಿ, ಎಸ್.ಕೆ.ಸಾಲ್ಯಾನ್ ಬೆಳ್ಮಣ್ ಮತ್ತಿತರರು ಪಾಲ್ಗೊಂಡಿದ್ದರು. ಕಟೀಲು ಸಾಯಿನಾಥ್ ಶೆಟ್ಟಿ ನಿರೂಪಿಸಿದರು.
ಸಮಾರೋಪ ಸಮಾರಂಭದಲ್ಲಿ ಉಡುಪಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಭಾಗವಹಿಸಿ ಶುಭ ಹಾರೈಸಿದರು. ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ಎಂ.ಎಸ್, ಕ್ರೈಂ ಎಸ್‌ಐ ಸುದರ್ಶನ ದೊಡ್ಡಮನಿ, ಉಡುಪಿ ಎಪಿಎಂಸಿ ಮಾಜಿ ಅಧ್ಯಕ್ಷ ಲಕ್ಷ್ಮಣ ಎಲ್.ಶೆಟ್ಟಿವಾಲ್, ಕಂಬಳ ಸಮಿತಿ ಕಾರ್ಯಾಧ್ಯಕ್ಷ ಕೊಳಚೂರು ಕೊಂಡೆಟ್ಟು ಸುಕುಮಾರ್ ಶೆಟ್ಟಿ ಹಾಗೂ ಪದಾಧಿಕಾರಿಗಳು ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net