More

    ಅಡ್ವೆ ಕೋಟಿ-ಚೆನ್ನಯ ಕಂಬಳ ಸಂಪನ್ನ: ಕನೆ ಹಲಗೆಯಲ್ಲಿ ನೀರು ಚಿಮ್ಮಿಸದ ಕೋಣಗಳು

    ಹೇಮನಾಥ್ ಪಡುಬಿದ್ರಿ
    ಜೋಡುಕರೆ ಕಂಬಳದಲ್ಲಿ ಹಲವಾರು ಹೊಸತನಕ್ಕೆ ನಾಂದಿ ಹಾಡಿದ್ದ ಅಡ್ವೆ ನಂದಿಕೂರು ಕೋಟಿ-ಚೆನ್ನಯ ಜೋಡುಕರೆ ಕಂಬಳದ 31ನೇ ವರ್ಷದ ಕಂಬಳೋತ್ಸವದಲ್ಲಿ ಇತ್ತೀಚಿನ ಹತ್ತು ವರ್ಷಗಳಲ್ಲೇ ಅಧಿಕ ಎಂಬಂತೆ 9 ಜೊತೆ ಕೋಣಗಳು ಕನೆ ಹಲಗೆ ವಿಭಾಗದಲ್ಲಿ ಸ್ಫರ್ಧೆಯಲ್ಲಿ ಪಾಲ್ಗೊಂಡು ಒಂದೇ ಒಂದು ಜೊತೆ ಕೋಣ ನಿಶಾನೆಗೆ ನೀರು ಚಿಮ್ಮಿಸದೆ ದಾಖಲೆಗೆ ಸೇರಿತು.

    ಎಡವಿ ಬಿದ್ದರೂ ಗುರಿ ಮುಟ್ಟಿದ ಕಂಬಳ ಓಟಗಾರ

    164 ಜೊತೆ ಕೋಣಗಳು ಭಾಗವಹಿಸಿದ್ದ ಕಂಬಳದಲ್ಲಿ ಹಗ್ಗಹಿರಿಯ ವಿಭಾಗದಲ್ಲಿ ನಂದಳಿಕೆ ಶ್ರೀಕಾಂತ ಭಟ್ಟರ ಎ ಮತ್ತು ಬಿ ಕೋಣಗಳು ಪ್ರಥಮ ಮತ್ತು ದ್ವಿತೀಯ ಬಹುಮಾನ ಪಡೆದುದಲ್ಲದೆ ಈವರೆಗಿನ ಕಂಬಳ ಸ್ಪರ್ಧೆಯಲ್ಲಿ ಈ ವಿಭಾಗದಲ್ಲಿ ಅತೀ ಹೆಚ್ಚು ಬಹುಮಾನಕ್ಕೆ ಪಾತ್ರವಾಗಿವೆ. ಈ ಕೋಣಗಳನ್ನು ಓಡಿಸಿದ ಓಟಗಾರ ಬಂಬ್ರಾಣಬೈಲು ವಂದಿತ್ ಶೆಟ್ಟಿ, ಸೆಮಿಪೈನಲ್‌ನಲ್ಲಿ ಎ ಮತ್ತು ಬಿ ಕೋಣಗಳನ್ನು ಓಡಿಸಿ ಪೈನಲ್ ತಲುಪಿಸಿದರಲ್ಲದೆ, ಪೈನಲ್ ಸೇರಿದಂತೆ 3 ಬಾರಿ ಓಟದಲ್ಲಿ ಎಡವಿ ಬಿದ್ದರೂ ಗುರಿ ಸಾಧನೆ ಮಾಡಿ ದಾಖಲೆ ಬರೆದರು.

    ಕಂಬಳ ಓಟಗಾರರ ಭರಪೂರ ಸಾಧನೆ

    ಓಟಗಾರನಾಗಿ ಸಾಧನೆ ಮಾಡುತ್ತಿರುವ ಕಕ್ಕೆಪದವು ಪೆಂರ್ಗಾಲು ಕೃತಿಕ್ ನೇಗಿಲು ಹಿರಿಯ ವಿಭಾಗದ ತಮ್ಮ ಮನೆ ಕೋಣಗಳಿಗೆ ದ್ವಿತೀಯ ಜತೆಗೆ ನೇಗಿಲು ಕಿರಿಯ ವಿಭಾಗದಲ್ಲಿ ತೋಡಾರು ಪಂಚಶಕ್ತಿ ಬಾರ್ದಿಲ ಶ್ಲೋಕ್ ರಂಜಿತ್ ಪೂಜಾರಿ ಕೋಣಗಳಿಗೂ ದ್ವಿತೀಯದ ಬಹುಮಾನ ತಂದುಕೊಟ್ಟ ಸಾಧನೆ ಮೆರೆದರು. ಅಡ್ಡ ಹಲಗೆ ಹಿರಿಯ ವಯಸ್ಸಿನ ಓಟಗಾರ ಸಾವ್ಯ ಗಂಗಯ್ಯ ಪೂಜಾರಿ ಬೋಳಾರ ತ್ರಿಶಾಲ್ ಕೆ.ಪೂಜಾರಿ ಹಲಗೆ ಮುಟ್ಟಿ ಪ್ರಥಮದ ಸಾಧನೆ ಮಾಡಿದರೆ, ಭಟ್ಕಳ ಬೈಂದೂರು ಭಾಗದಲ್ಲಿ ಕೋಣಗಳನ್ನು ಓಡಿಸಿ ಸಾಧನೆ ಮಾಡಿದ 20ರ ಹರೆಯದ ಬೈಂದೂರು ಸೂರಾಲು ಪ್ರದೀಶ್ ಅವರು ಜೋಡುಕರೆ ಕಂಬಳದಲ್ಲಿ ಪ್ರಥಮವಾಗಿ ಹಗ್ಗ ಹಿರಿಯ ವಿಭಾಗದಲ್ಲಿ ಪ್ರಥಮ ಪ್ರಯತ್ನದಲ್ಲೇ ಪದವು ಕಾನಡ್ಕ ಫ್ರಾನ್ಸಿಸ್ ಫ್ಲೇವಿ ಡಿಸೋಜ ಕೋಣಗಳನ್ನು ಸೆಮಿಪೈನಲ್‌ವರೆಗೆ ಗುರಿ ತಲುಪಿಸಿ ಸಣ್ಣ ಅಂತರದಲ್ಲಿ ಪೈನಲ್ ತಲುಪುವಲ್ಲಿ ವಂಚಿತರಾದರು.

    ಅಡ್ವೆ ಕೋಟಿ-ಚೆನ್ನಯ ಕಂಬಳ ಫಲಿತಾಂಶ

    ಕನೆಹಲಗೆ ವಿಭಾಗದಲ್ಲಿ ನೀರು ನೋಡಿ ಬಹುಮಾನ ಪ್ರಥಮ-ಬೋಳಾರ ತ್ರಿಶಾಲ್ ಕೆ. ಪೂಜಾರಿ(ಹಲಗೆ ಮುಟ್ಟಿದವರು-ಬೈಂದೂರು ಮಹೇಶ್ ಪೂಜಾರಿ), ದ್ವಿತೀಯ-ಸೂಡ ಹಳೆಮನೆ ಅಜಿತ್ ಕುಮಾರ್ ಶೆಟ್ಟಿ(ಹಲಗೆ ಮುಟ್ಟಿದವರು-ತೆಕ್ಕಟ್ಟೆ ಸುಧೀರ್ ದೇವಾಡಿಗ).
    ಅಡ್ಡ ಹಲಗೆ ಪ್ರಥಮ-ಬೋಳಾರ ತ್ರಿಶಾಲ್ ಕೆ. ಪೂಜಾರಿ(ಹಲಗೆ ಮುಟ್ಟಿದವರು-ಸಾವ್ಯ ಗಂಗಯ್ಯ ಪೂಜಾರಿ), ದ್ವಿತೀಯ-ನಾರಾವಿ ಯುವರಾಜ್ ಜೈನ್(ಹಲಗೆ ಮುಟ್ಟಿದವರು-ಭಟ್ಕಳ ಹರೀಶ್).
    ಹಗ್ಗ ಹಿರಿಯ ಪ್ರಥಮ-ನಂದಳಿಕೆ ಶ್ರೀಕಾಂತ್ ಭಟ್ ಎ(ಓಡಿಸಿದವರು-ಬಂಬ್ರಾಣಬೈಲು ವಂದಿತ್ ಶೆಟ್ಟಿ), ದ್ವಿತೀಯ-ನಂದಳಿಕೆ ಶ್ರೀಕಾಂತ್ ಭಟ್ ಬಿ(ಕಾವೂರು ದೋಟ ಸುದರ್ಶನ್). ಹಗ್ಗ ಕಿರಿಯ: ಪ್ರಥಮ-ಕಲ್ಯ ಮಿತ್ತಬೆಟ್ಟು ಶ್ರೀಧರ ಪೂಜಾರಿ(ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ), ದ್ವಿತೀಯ-ಸುರತ್ಕಲ್ ಪಾಂಚಜನ್ಯ ಯೋಗೀಶ್ ಪೂಜಾರಿ( ಮಾಸ್ತಿಕಟ್ಟೆ ಸ್ವರೂಪ್). ನೇಗಿಲು ಹಿರಿಯ ಪ್ರಥಮ-ಬೋಳದಗುತ್ತು ಸತೀಶ್ ಶೆಟ್ಟಿ ಎ( ನತೇಶ್ ಬಾರಾಡಿ), ದ್ವಿತೀಯ-ಕಕ್ಕೆಪದವು ಪೆಂರ್ಗಾಲು ಕೃತಿಕ್ ಬಾಬು ವೆಂಕಪ್ಪ ಗೌಡ(ಪೆಂರ್ಗಾಲು ಕೃತಿಕ್ ಗೌಡ), ನೇಗಿಲು ಕಿರಿಯ ಪ್ರಥಮ-ಎರ್ಮಾಳ್ ಪುಚ್ಚೊಟ್ಟುಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ(ನಕ್ರೆ ಪವನ್ ಮಡಿವಾಳ), ದ್ವಿತೀಯ-ತೋಡಾರು ಪಂಚಶಕ್ತಿ ಬಾರ್ದಿಲ ಶ್ಲೋಕ್ ರಂಜಿತ್ ಪೂಜಾರಿ(ಪೆಂರ್ಗಾಲು ಕೃತಿಕ್ ಗೌಡ).

    24 ಗಂಟೆಯಲ್ಲಿ ಪೂರ್ಣಗೊಳ್ಳುವಲ್ಲಿ ಮತ್ತೆ ವಿಫಲ

    ಕಂಬಳವನ್ನು 24 ಗಂಟೆಯೊಳಗೆ ಪೂರ್ಣಗೊಳಿಸುವ ಭರವಸೆಯನ್ನು ನೀಡುತ್ತಾ ಬರುತ್ತಿರುವ ಜಿಲ್ಲಾ ಕಂಬಳ ಸಮಿತಿ ನಿರ್ಧಾರ ಈ ಬಾರಿಯ ಕಂಬಳ ಋತುವಿನ ಈ ವರೆಗೆ ನಡೆದ 9 ಕಂಬಳಗಳಲ್ಲೂ ಪೂರ್ಣಗೊಳ್ಳುವಲ್ಲಿ ವಿಫಲವಾಗಿವೆ. 164 ಜೊತೆ ಕೋಣಗಳು ಸ್ಪರ್ಧಿಸಿದ್ದ ಅಡ್ವೆ ನಂದಿಕೂರಿನ ಕಂಬಳ 34 ಗಂಟೆ ತೆಗೆದುಕೊಂಡರೆ, 204 ಜೊತೆ ಕೋಣಗಳು ಭಾಗವಹಿಸಿದ್ದ ನರಿಂಗಾನ ಕಂಬಳ 36 ಗಂಟೆಯಲ್ಲಿ ಮುಕ್ತಾಯವಾಗಿತ್ತು. 170 ಜೊತೆ ಕೋಣಗಳು ಪಾಲ್ಗೊಂಡಿದ್ದ ಮಂಗಳೂರು ಹಾಗೂ 270 ಜೊತೆ ಕೋಣಗಳು ಸ್ಪರ್ಧಿಸಿದ್ದ ಮಿಯಾರು ಲವ-ಕುಶ ಜೋಡುಕರೆ 31 ಗಂಟೆಯಲ್ಲಿ ಪೂರ್ಣಗೊಂಡಿತ್ತು. 278 ಜೊತೆ ಕೋಣಗಳ ಪಾಲು ಪಡೆಯುವಿಕೆಯಲ್ಲಿ ನಡೆದಿದ್ದ ಮೂಡುಬಿದಿರೆ ಕಂಬಳ 38 ಗಂಟೆ, 218 ಜೋಡಿ ಕೋಣಗಳು ಭಾಗವಹಿಸಿದ್ದ ಕಾಂತಾವರ ಬಾರಾಡಿ ಬೀಡು ಕಂಬಳ 7 ಗಂಟೆ ಮಳೆಯ ಅಬ್ಬರದಿಂದ ಸ್ಥಗಿತಗೊಂಡು ವಿಳಂಬವಾಗಿ ಮುಕ್ತಾಯ ಕಂಡಿದೆ. 217 ಜೊತೆ ಕೋಣಗಳು ಪಾಲ್ಗೊಂಡಿದ್ದ ಕಕ್ಕೆಪದವು ಕಂಬಳ 37 ಗಂಟೆ, 160 ಜೋಡಿ ಕೋಣಗಳು ಭಾಗವಹಿಸಿದ್ದ ಮೂಲ್ಕಿ ಅರಸು ಕಂಬಳ 32 ಗಂಟೆ ಹಾಗೂ 157 ಜೊತೆ ಕೋಣಗಳ ಭಾಗವಹಿಸುವಿಕೆಯಲ್ಲಿ ಹೊಸದಾಗಿ ರಾಜದಾನಿ ಬೆಂಗಳೂರಿನಲ್ಲಿ ನಡೆದಿದ್ದ ಕಂಬಳ ದೀರ್ಘವಾಗಿ ಎರಡು ದಿನದಲ್ಲಿ ಮುಕ್ತಾಯಗೊಂಡಿದ್ದನ್ನು ನೆನಪಿಸಿಕೊಳ್ಳಬಹುದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts