ಸುಡು ಬಿಸಿಲಲ್ಲೇ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರೋಡ್ ಶೋ: ವಿಟ್ಲ ಪೇಟೆಯಲ್ಲಿ ತಗ್ಗದ ಉತ್ಸಾಹ

padmaraj road show 1
ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರದ ಕಾಂಗ್ರ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಮಂಗಳವಾರ ವಿಟ್ಲ ಪೇಟೆಯಲ್ಲಿ ರೋಡ್ ಶೋ ನಡೆಸಿದರು. ಅಶೋಕ್‌ಕುಮಾರ್ ರೈ, ಶಕುಂತಳಾ ಶೆಟ್ಟಿ, ರಮಾನಾಥ ವಿಟ್ಲ ಮೊದಲಾದವರು ಜತೆಗಿದ್ದರು.
Published on

ವಿಟ್ಲ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್.ಪೂಜಾರಿ ಮಂಗಳವಾರ ವಿಟ್ಲ ಪೇಟೆಯಲ್ಲಿ ಸುಡುಬಿಸಿಲಿನಲ್ಲಿ ರೋಡ್ ಶೋ ನಡೆಸಿದರು.

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಆರಂಭ

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮುಂಭಾಗದಿಂದ ರೋಡ್ ಶೋ ಆರಂಭಿಸಿ ವಿಟ್ಲ ನಾಲ್ಕು ರಸ್ತೆಗಳಲ್ಲಿ ಸಂಚರಿಸಿ ವಿಟ್ಲ ಬಸ್ ನಿಲ್ದಾಣದಲ್ಲಿ ಸಮಾಪನಗೊಳಿಸಿದರು. ವಿಟ್ಲ ಸಂತೆ ಮಾರುಕಟ್ಟೆಗೆ ತೆರಳಿ ಮತಯಾಚನೆ ಮಾಡಿದರು. ಬಿಸಿಲಿನ ನಡುವಿನಲ್ಲೂ ಜನರು ಉತ್ಸಾಹದಲ್ಲಿ ಪಾಲ್ಗೊಂಡಿದ್ದರು.
ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ವಿಟ್ಲ ಅರಮನೆ, ವಿಟ್ಲ ಕೇಂದ್ರ ಜುಮ್ಮಾ ಮಸೀದಿ, ವಿಟ್ಲ ಶೋಕಮಾತಾ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.

ಗಲಭೆ ಮೂಲಕ ಬಡವರ ಮಕ್ಕಳನ್ನು ಜೈಲಿಗಟ್ಟಿದ ಬಿಜೆಪಿ

ಜಿಲ್ಲೆಯ ಅಭಿವೃದ್ಧಿಗೆ ಕಾಂಗ್ರೆಸ್ ಮೂಲಕಾರಣವಾಗಿದ್ದು, ಜಿಲ್ಲೆಯನ್ನು ಉನ್ನತಿಯತ್ತ ಕೊಂಡೊಯ್ಯುವ ಕಾರ್ಯವನ್ನು ಬಿಜೆಪಿ ಮಾಡಿಲ್ಲ. ಗಲಭೆಗಳ ಮೂಲಕ ಆರ್ಥಿಕವಾಗಿ ಹಿಂದುಳಿದ ಮಕ್ಕಳನ್ನು ಜೈಲಿಗಟ್ಟುವ ಕೆಲಸವನ್ನು ಮಾಡಿ, ಜಿಲ್ಲೆಗೆ ಕೋಮು ಸೂಕ್ಷ್ಮ ಪ್ರದೇಶವೆಂಬ ಹಣೆಪಟ್ಟಿಯನ್ನು ಕಟ್ಟಿ ಯಾವ ಉದ್ಯಮವೂ ಬರದಂತೆ ಮಾಡಲಾಗಿದೆ. ಕಾಂಗ್ರೆಸ್ ಜನತೆಗೆ ನೀಡಿದ ಎಲ್ಲ ಆಶ್ವಾಸನೆಗಳನ್ನು ಈಡೇರಿಸುವ ಜತೆಗೆ ಅಭಿವೃದ್ಧಿ ಕೆಲಸಗಳನ್ನು ಮಾಡಿ ತೋರಿಸಿದೆ. ಚುನಾವಣೆಯಲ್ಲಿ ಜಯ ಗಳಿಸಿದ ನಂತರ ಉದ್ಯೋಗ ಸೃಷ್ಟಿ, ಆರೋಗ್ಯ ಸೇವೆಗೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಉಸ್ತುವಾರಿ ರಮಾನಾಥ ವಿಟ್ಲ, ಕಾವು ಹೇಮನಾಥ ಶೆಟ್ಟಿ, ಜಯಪ್ರಕಾಶ್ ಬದಿನಾರು, ವಿಟ್ಲ - ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಪಿ., ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ಕೆಪಿಸಿಸಿ ಸದಸ್ಯ ಎಂ.ಎಸ್. ಮಹಮ್ಮದ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಪ್ರವೀಣ್ ಚಂದ್ರ ಆಳ್ವ, ವಿಜಯ ಕುಮಾರ್ ಆಳ್ವ, ವೇದನಾಥ ಸುವರ್ಣ, ಮಸೀದಿ ಸದರ್ ಅಬ್ದುಲ್ಲಾ ದಾರಿಮಿ, ವಿಟ್ಲ ಜಮಾತ್ ಅಧ್ಯಕ್ಷ ಮಹಮ್ಮದ್ ಅಶ್ರ್ ಪೊನ್ನೊಟ್ಟು, ಕಮಿಟಿ ಸದಸ್ಯ ರಶೀದ್ ವಿಟ್ಲ, ಅಜೀಜ್ ಹಳೇಮನೆ, ಮಹಮ್ಮದ್ ಇಕ್ಬಾಲ್, ವಿ.ಕೆ. ಹಂಝ, ನಜೀರ್ ಮಠ, ಚರ್ಚ್ ಧರ್ಮಗುರು ಐವನ್ ಮೈಕಲ್ ರೋಡ್ರಿಗಸ್, ವಿಜಯ್ ಪಾಯಸ್, ಥೋಮಸ್ ಮಸ್ಕರೇನಸ್, ಲೂಯಿಸ್ ಮಸ್ಕರೇನಸ್, ಜೆಸಿಂತಾ ರೊಡ್ರಿಗಸ್ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net