More

    ಪ್ರಕೃತಿ ಮಡಿಲಲ್ಲಿ ಅರಳುವ ಚಿತ್ರಗಳು

    ಹರಿಪ್ರಸಾದ್ ನಂದಳಿಕೆ ಶಿರ್ವ

    ಚಿತ್ರಕಲಾ ಕೇಂದ್ರದಲ್ಲಿ ಕುಳಿತು ವಿವಿಧ ಕಲಾಕೃತಿಗಳನ್ನು ಚಿತ್ರ ಕಲಾವಿದರು ಬಿಡಿಸುವುದು ಸಾಮಾನ್ಯ. ಆದರೆ ಇಲ್ಲೊಂದು ಕಡೆಯಲ್ಲಿ ಪ್ರಕೃತಿಯಲ್ಲಿ, ರಸ್ತೆ ಬದಿಯಲ್ಲಿ ಹಾಗೂ ವಿವಿಧ ಸ್ಥಳದಲ್ಲಿ ಕುಳಿತು ಮಕ್ಕಳು ಸುಂದರ ಚಿತ್ರಗಳನ್ನು ಬಿಡುಸುತ್ತಿದ್ದು ಚಿತ್ರಕಲೆ ಪ್ರಿಯರ ಮನ ಗೆದ್ದಿದೆ.

    ಶಿರ್ವ ಸಮೀಪದ ಪಾಂಬೂರಿನಲ್ಲಿ 2012ರಲ್ಲಿ ಸ್ಥಾಪನೆಯಾದ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನವಾದ ’ಪರಿಚಯ’ ಸಂಸ್ಥೆಯ ಆಶ್ರಯದಲ್ಲಿ ನಿಸರ್ಗ ಚಿತ್ರಣ ವಸತಿ ಶಿಬಿರ ನಡೆಯುತ್ತಿದ್ದು, ಮಂಗಳೂರಿನ ಮಹಾಲಸಾ ದೃಶ್ಯಕಲಾ ಮಹಾವಿದ್ಯಾಲಯದ ಸುಮಾರು 30 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ಶಿರ್ವ ಸುತ್ತಮುತ್ತಲಿನ ಪರಿಸರದಲ್ಲಿ ಪ್ರಕೃತಿಯ ಮಡಿಲಲ್ಲಿ ಕುಳಿತು ವಿದ್ಯಾರ್ಥಿಗಳು ಚಿತ್ರಕಲೆ ಬಿಡಿಸುತ್ತಿದ್ದು, ಕ್ಷಣಾರ್ಧದಲ್ಲಿ ನಾನಾ ರೀತಿಯ ಚಿತ್ರಣಗಳು ಸಿದ್ದವಾಗುತ್ತಿವೆ.

    ಹತ್ತು ದಿನದ ಶಿಬಿರ

    ಪಾಂಬೂರಿನ ರಂಗಪರಿಚಯ ವೇದಿಕೆಯಲ್ಲಿ ಚಿತ್ರ ಪರಿಚಯ ನಿಸರ್ಗ ಚಿತ್ರಣ ವಸತಿ ಶಿಬಿರ 11ರಂದು ಉದ್ಘಾಟನೆಗೊಂಡಿದ್ದು, 21ರವರೆಗೆ ಹತ್ತು ದಿನಗಳ ಕಾಲ ಅಲ್ಲಲ್ಲಿ ನಡೆಯಲಿದೆ. ತಮ್ಮದೇ ಪರಿಕರಗಳನ್ನ ಬಳಸಿ ಶಿಕ್ಷಕರ ಮಾರ್ಗದರ್ಶನದಲ್ಲಿ ಮಕ್ಕಳು ಬಣ್ಣಬಣ್ಣದ ಚಿತ್ರ ಬಿಡಿಸುತ್ತಿದ್ದಾರೆ.

    ಸಾಂಸ್ಕೃತಿಕ ಕಾರ್ಯಕ್ರಮ

    ದಿನಪೂರ್ತಿ ಚಿತ್ರ ಬಿಡಿಸುವುದಲ್ಲಿ ಮಗ್ನರಾಗಿರುವ ಶಿಬಿರಾರ್ಥಿಗಳಿಗೆ ದಿನವೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದೆ. ನಾದ ಮಣಿನಾಲ್ಕೂರು ಅವರಿಂದ ಬದುಕು ಕಲಿಸುವ ಹಾಡುಗಳು ಮತ್ತು ಮಾತುಗಳ ಜತೆಗೆ ಕತ್ತಲೆ ಹಾಡು, ಕಲಾಸಕ್ತಿಯ ಜೀವನ ಶೈಲಿ ಆರೋಗ್ಯಕ್ಕೆ ಪೂರಕ, ಹಾಸ್ಯದೊಂದಿಗೆ ಜೀವನ ಮೌಲ್ಯಗಳು, ಹಕ್ಕಿ ಪರಿಚಯ, ತಾಳಮದ್ದಲೆ, ಹ್ಯಾಂಗ್ ಆನ್ ಕನ್ನಡ ನಾಟಕ ಹಾಗೂ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಪುರಸ್ಕೃತ ಕನ್ನಡ ಸಿನಿಮಾಗಳ ಪ್ರದರ್ಶನ ಸಹಿತ ಹಲವು ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

    ಪ್ರತಿ ವರ್ಷವೂ ಶಿಬಿರ

    ಮಹಾಲಸಾ ದೃಶ್ಯಕಲಾ ಮಹಾವಿದ್ಯಾಲಯದ ವತಿಯಿಂದ ಪ್ರತಿ ವರ್ಷ ಹಲವು ಕಡೆಗಳಲ್ಲಿ ನಿಸರ್ಗ ಹಾಗೂ ಇತರ ಪ್ರೇಕ್ಷಣೀಯ ಸ್ಥಳಗಳ ಚಿತ್ರಕಲಾ ಶಿಬಿರ ನಡೆಯುತ್ತಿದ್ದು, ಈಗಾಗಲೇ ಉತ್ತರ ಕನ್ನಡ, ಹಂಪಿ, ಚಿತ್ರದುರ್ಗ, ಬೇಲೂರು, ಹಳೆಬೀಡು ಹೀಗೆ ನಾನಾ ಪರಿಸರದಲ್ಲಿ ವಿದ್ಯಾರ್ಥಿಗಳು ಚಿತ್ರ ಶಿಬಿರದಲ್ಲಿ ಭಾಗವಹಿಸಿ ಸುಂದರ ಚಿತ್ರಗಳನ್ನು ಬಿಡಿಸುವಲ್ಲಿ ಸೈ ಎನಿಸಿಕೊಂಡಿದ್ದಾರೆ.

    ಪರಿಚಯ ಸಂಸ್ಥೆಯ ವತಿಯಿಂದ ಉಡುಪಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ನಿಸರ್ಗ ಚಿತ್ರಣ ಶಿಬಿರ ನಡೆಯುತ್ತಿದೆ. ಪ್ರತಿ ದಿನ ಎರಡು ಚಿತ್ರಗಳನ್ನು ಮಕ್ಕಳು ಸಿದ್ಧಪಡಿಸುತ್ತಿದ್ದು, ಬಣ್ಣಬಣ್ಣದ ವಿವಿಧ ಕಲಾಕೃತಿಗಳು ಮಕ್ಕಳ ಕುಂಚದಲ್ಲಿ ಅರಳುತ್ತಿದೆ.
    -ವಿಲ್ಸನ್ ಸೋಜಾ, ಚಿತ್ರಕಲಾವಿದ


    ಚಿತ್ರಕಲೆಯ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸಲು ಇಂತಹ ಶಿಬಿರಗಳು ಪೂರಕ. ಮಕ್ಕಳಿಗೆ ನಿಸರ್ಗ ಚಿತ್ರಕಲಾ ಶಿಬಿರದ ಜತೆಯಲ್ಲಿ ಪ್ರತಿ ನಿತ್ಯ ರಂಗಪರಿಚಯದಲ್ಲಿ ಸಾಂಸ್ಕೃತಿಕ ಹಾಗೂ ಉಪನ್ಯಾಸ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.
    -ಪ್ರಕಾಶ್ ನೊರೋನ್ಹಾ, ಪರಿಚಯ ಪ್ರತಿಷ್ಠಾನ ಕಾರ್ಯದರ್ಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts