More

    ಬರ ಪರಿಹಾರ ಕಾನೂನು ಸಮರ| ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ರಾಜ್ಯ ಸರ್ಕಾರದ ದಿಟ್ಟ ನಡೆ

    ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್​ಗೆ ಸಿಎಂ ಮೊರೆ

    ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಸರ್ಕಾರ ಹೊಸ ಅಸ್ತ್ರ ಪ್ರಯೋಗಿಸಿದೆ. ಬರ ಪರಿಹಾರ ನೀಡಿಕೆ ವಿಳಂಬ ಖಂಡಿಸಿ ಕೇಂದ್ರದ ವಿರುದ್ಧ ಕಾನೂನಾತ್ಮಕ ಸಮರ ಸಾರಿರುವ ಕಾಂಗ್ರೆಸ್ ಸರ್ಕಾರ ಇದೀಗ ಸುಪ್ರೀಂಕೋರ್ಟ್ ಕದತಟ್ಟಿದೆ.

    ‘ನನ್ನ ತೆರಿಗೆ ನನ್ನ ಹಕ್ಕು’ ಎಂಬ ಘೋಷಣೆ ಅಡಿ ಕೇಂದ್ರದ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದ ಸಿಎಂ ಸಿದ್ದರಾಮಯ್ಯ ಇದೀಗ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಬೆನ್ನತ್ತಿದ್ದಾರೆ. ಕರ್ನಾಟಕದ ಅಭಿವೃದ್ಧಿಗಾಗಿ ಕೂಡಲೇ ಕೇಂದ್ರದಿಂದ ಹಣ ಕೊಡಿಸಿ ಅಂತ ಸುಪ್ರೀಂಕೋರ್ಟ್​ಗೆ ರಿಟ್ ಅರ್ಜಿ ಹಾಕಿದ್ದಾರೆ. ಆ ಮೂಲಕ ಕೇಂದ್ರದಿಂದ ಬರ ಪರಿಹಾರ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮೊದಲ ಪ್ರಕರಣವಾಗಿ ಸಿದ್ದರಾಮಯ್ಯ ಸರ್ಕಾರ ದಾಖಲೆ ಬರೆದಿದೆ. ಈ ಅರ್ಜಿ ಮುಂದಿನ ವಾರ ಕೋರ್ಟ್ ನಲ್ಲಿ ವಿಚಾರಣೆಗೂ ಬರುವುದರಿಂದ ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟುಹಾಕಿದೆ. ಇತ್ತೀಚೆಗಷ್ಟೇ ವಿಧಾನಮಂಡಲದ ಉಭಯ ಸದನಗಳಲ್ಲೂ ಕೇಂದ್ರದ ವಿರುದ್ಧ ನಿರ್ಣಯ ಅಂಗೀಕರಿಸಲಾಗಿತ್ತು.

    ಭಿಕ್ಷೆ ಬೇಡುತ್ತಿಲ್ಲ: ಶನಿವಾರ ತುರ್ತು ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವ ಕೃಷ್ಣಬೈರೇಗೌಡ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. ನಮ್ಮ ಪಾಲನ್ನು ಇವತ್ತು, ನಾಳೆ ಕೊಡುತ್ತಾರೆ ಎಂದು ಐದು ತಿಂಗಳು ಕಾದಿದ್ದಾಯ್ತು. ಬೇರೆ ದಾರಿ ಇಲ್ಲದೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದೇವೆ. ಬರದ ಸಂದರ್ಭದಲ್ಲಿ, ತುರ್ತು ಸಂದರ್ಭಗಳಲ್ಲಿ ಜನರಿಗೆ ತುರ್ತಾಗಿಯೇ ಸ್ಪಂದಿಸಬೇಕು ಎನ್ನುವ ಉದ್ದೇಶದಿಂದಲೇ ವಿಪತ್ತು ನಿರ್ವಹಣಾ ಕಾನೂನು ಮಾಡಲಾಗಿದೆ. ಆದರೆ ಕೇಂದ್ರ ಕಾನೂನು ಬದ್ಧವಾಗಿ ನಮಗೆ ಬರಬೇಕಾದ ಹಣದಲ್ಲಿ ಒಂದೇ ಒಂದು ಪೈಸೆಯನ್ನೂ ಕೊಟ್ಟಿಲ್ಲ ಎಂದು ದೂರಿದರು.

    ರಾಜ್ಯದಲ್ಲಿ 240 ತಾಲೂಕುಗಳಲ್ಲಿ 223 ತಾಲೂಕುಗಳನ್ನು ಬರಗಾಲ ಅಂತ ಘೊಷಿಸಿದ್ದೇವೆ. ನಾಲ್ಕು ಬಾರಿ ಮೌಲ್ಯಮಾಪನ ಮಾಡಿದ್ದೇವೆ. 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ ನಷ್ಟ ಆಗಿದೆ. 3 ಬಾರಿ ಸತತವಾಗಿ ಕೇಂದ್ರಕ್ಕೆ ಮನವಿ ಪತ್ರ ಸಲ್ಲಿಸಿದೆವು. ಇದುವರೆಗೂ ಕೇಂದ್ರ ಸರ್ಕಾರ ನಯಾ ಪೈಸೆಯನ್ನೂ ಕೊಟ್ಟಿಲ್ಲ ಎಂದು ಹೇಳಿದರು.

    ಕೇಂದ್ರ ತಂಡ ವರದಿ ಕೊಟ್ಟರೂ ನಮಗೆ ಕೇಂದ್ರ ಸರ್ಕಾರ ಸ್ಪಂದಿಸದಿದ್ದಾಗ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ದೆಹಲಿಗೆ ಹೋದರೂ ಕೇಂದ್ರ ಸಚಿವರ ಭೇಟಿಗೆ ಅವಕಾಶವನ್ನೇ ಕೊಡಲಿಲ್ಲ. ಬಳಿಕ ಡಿ. 19 ರಂದು ನಾನು ಮತ್ತು ಕೃಷ್ಣಬೈರೇಗೌಡ ಮತ್ತೆ ದೆಹಲಿಗೆ ಹೋಗಿ ಪ್ರಧಾನ ಮಂತ್ರಿಯವರನ್ನು ಭೇಟಿ ಮಾಡಿ ಮನವಿ ಮಾಡಿದೆವು. ನಂತರ ಡಿ. 20ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮನವಿ ಮಾಡಿದೆವು. ಆದರೂ ನಮಗೆ ಪರಿಹಾರ ಕೊಡಲಿಲ್ಲ. ಬಳಿಕ ನಾನು ಬೆಂಗಳೂರಿನಲ್ಲೇ ಪ್ರಧಾನಿ ಮೋದಿಯವರನ್ನು ಖುದ್ದಾಗಿ ಭೇಟಿ ಮಾಡಿ ಮನವಿ ಮಾಡಿದೆ. ಆದರೂ ಪರಿಹಾರ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ರಾಜ್ಯ ಸರ್ಕಾರದ ವಾದವೇನು?

    1 ಇದು ಭಿಕ್ಷೆಯಲ್ಲ, ಕೇಂದ್ರದ ಜವಾಬ್ದಾರಿ. ಅನ್ಯಾಯಕ್ಕಾಗಿ ಕಾನೂನು ಮೊರೆ

    2 ಕೇರಳ ಬೇರೆ ಉದ್ದೇಶಕ್ಕೆ ಕೋರ್ಟ್​ಗೆ ಹೋಗಿದೆ, ನಮಗೂ ಅವಕಾಶವಿದೆ

    3 ನಮ್ಮ ನಾಡಿಗಾಗಿ ಕೋರ್ಟ್​ಗೆ ಹೋಗದೆ ಬೇರೆ ದಾರಿಯೇ ಇರಲಿಲ್ಲ

    4 ರೈತರಿಗೆ ಅನ್ಯಾಯವಾಗಿದೆ, ನ್ಯಾಯ ಕೊಡಿಸುವ ಹೊಣೆ ನಮ್ಮ ಮೇಲಿದೆ

    5 ಕೇಂದ್ರ ಸರ್ಕಾರ ವಿಪತ್ತು ನಿರ್ವಹಣೆ ಮಾರ್ಗಸೂಚಿ ಉಲ್ಲಂಘಿಸಿದೆ

    6 ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಯ ಪ್ರಕಾರವೇ ನಡೆದುಕೊಳ್ಳಬೇಕು

    ಬರ ಕದನ, ಇದೇ ಮೊದಲ ಪ್ರಕರಣ:

    ರಾಜ್ಯ ಸರ್ಕಾರವೊಂದು ಬರ ಪರಿಹಾರಕ್ಕಾಗಿ ಸುಪ್ರಿಂಕೋರ್ಟ್ ಕದತಟ್ಟಿದ್ದು ಇದೇ ಮೊದಲು. ಪತ್ರ ವ್ಯವಹಾರ, ಕೇಂದ್ರದೊಂದಿಗೆ ಸಮಾಲೋಚನೆ ಸಾಮಾನ್ಯ ಪ್ರಕ್ರಿಯೆ, ಅದನ್ನೂ ಮೀರಿ ನ್ಯಾಯಾಲಯ ಮಧ್ಯ ಪ್ರವೇಶಿಸುಂತೆ ಕೋರಿರುವುದು ಇದೇ ಮೊದಲು. ಕೇರಳ ಸರ್ಕಾರ ಸಾಲದ ಮಿತಿ ಹೆಚ್ಚಿಸಲು, ಆರ್ಥಿಕ ನೆರವು ಯಾಚಿಸಿ ಕೋರ್ಟ್​ಗೆ ಹೋಗಿತ್ತು. ಹಿರಿಯ ಅಧಿಕಾರಿಗಳ ಪ್ರಕಾರ ಸಾಮಾನ್ಯವಾಗಿ ಪ್ರಕ್ರಿಯೆಗಳೆಲ್ಲ ಮುಗಿದು ಫೆಬ್ರವರಿ, ಮಾರ್ಚ್ ವೇಳೆಗೆ ಪರಿಹಾರ ಬರುತ್ತದೆ. ಕಳೆದ ಬಾರಿಯೂ ಮಾರ್ಚ್​ನಲ್ಲೇ ಪರಿಹಾರ ಬಂದಿದ್ದು ಎಂದು ಸಿಎಂ ತಿಳಿಸಿದರು.

    ರಾಜ್ಯ ಕೊಟ್ಟಿದ್ದೇನು?

    ಕುಡಿವ ನೀರು, ಮೇವಿಗೆ 327 ಕೋಟಿ ರೂ.

    40 ಕೋಟಿ ರೈತರಿಗೆ ತಲಾ 2 ಸಾವಿರ ರೂ.

    ರೈತರಿಗೆ ಒಟ್ಟಾರೆ 650 ಕೋಟಿ ಬಿಡುಗಡೆ

    ಒಟ್ಟಾರೆ 1017 ಕೋಟಿ ಕೊಟ್ಟಿದ್ದ ರಾಜ್ಯ ಸರ್ಕಾರ

    ಇನ್​ಪುಟ್ ಸಬ್ಸಿಡಿಗೆ 4663 ಕೋಟಿ ಅವಶ್ಯ

    ಸಿದ್ದರಾಮಯ್ಯ ಸಿಡಿಮಿಡಿ: 

    4663 ಕೋಟಿ ರೂ. ರೈತರ ಇನ್​ಪುಟ್ ಸಬ್ಸಿಡಿಯನ್ನು ರಾಜ್ಯ ಸರ್ಕಾರವೇ ನೀಡಿ ಬಳಿಕ ಕೇಂದ್ರದಿಂದ ಪಡೆದುಕೊಳ್ಳಬಹುದಲ್ಲವೇ? ರಾಜ್ಯದ ಹಣಕಾಸು ಪರಿಸ್ಥಿತಿ ಕಷ್ಟಕರವಾಗಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಸಿಡಿಮಿಡಿಗೊಂಡ ಸಿದ್ದರಾಮಯ್ಯ, ನಾವು ತೆರಿಗೆ ಕಟ್ಟಿದ್ದೇವೆ. ಭಿಕ್ಷೆ ಬೇಡುತ್ತಿಲ್ಲ. ನರೇಗಾಗೂ 150 ದಿನ ವಿಸ್ತರಿಸಿಲ್ಲ ಎಂದು ಕೇಂದ್ರದ ವಿರುದ್ಧ ಹರಿಹಾಯ್ದರು.

    ಸರ್ಕಾರ ಬರ ನೆರವಿಗಾಗಿ ಸುಪ್ರೀಂನಲ್ಲಿ ಕಾನೂನು ಹೋರಾಟಕ್ಕೆ ಮುಂದಾಗಿರುವುದು ರಾಜ್ಯದ ಇತಿಹಾಸದಲ್ಲಿ ಕರಾಳ ದಿನ. ಇದೊಂದು ರಾಜಕೀಯ ಪ್ರೇರಿತ ನಡೆೆ.

    | ಆರ್.ಅಶೋಕ್, ವಿಧಾನಸಭೆ ಪ್ರತಿಪಕ್ಷ ನಾಯಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts