More

    ಶಿರಸಿ ಮಾರಿಕಾಂಬಾ ಜಾತ್ರೆ:-ಡಾ.ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್‌ನಿಂದ ವಿಶೇಷ ಸಂಚಿಕೆ ಬಿಡುಗಡೆ

    ಶಿರಸಿ: ಪುರಿಯ ಜಗನ್ನಾಥ ಅಷ್ಟಕದಲ್ಲಿ ಯಶೋದೆ ಶಿರಸಿ ಎಂಬ ಪ್ರಸ್ತಾಪ ಬರುತ್ತದೆ. ಬನವಾಸಿ ಮಧುಕೇಶ್ವರ ದೇವಸ್ಥಾನದ ಮೇಲೆ ಇರುವ ನಾಗಮಂಡಲ ಕಲೆ ಮಾರಿಕಾಂಬಾ ದೇವಸ್ಥಾನದಲ್ಲಿಯೂ ಇದೆ. ಮಾರಿಕಾಂಬಾ ದೇವಾಲಯದ ಇತಿಹಾಸದ ಕುರಿತು ಅಧ್ಯಯನಗಳು ಇನ್ನಷ್ಟು ಆಗಬೇಕಿದೆ ಎಂದು ಸ್ಕೊಡ್ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ವೆಂಕಟೇಶ ನಾಯ್ಕ ಹೇಳಿದರು.
    ಯಲ್ಲಾಪುರದ ವಿಶ್ವದರ್ಶನ ಶಿಕ್ಷಣ ಸಮೂಹದ ಡಾ ವಿಜಯ ಸಂಕೇಶ್ವರ ಮಿಡಿಯಾ ಸ್ಕೂಲ್ ವಿದ್ಯಾರ್ಥಿಗಳು ಹೊರತಂದ ಶಿರಸಿ ಮಾರಿಕಾಂಬಾ ಜಾತ್ರೆ ವಿಶೇಷ ಸಂಚಿಕೆಯನ್ನು ನಗರದ ನೆಮ್ಮದಿ ಕುಟೀರದಲ್ಲಿ ಸೋಮವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
    ಶಿರಸಿ ಸುತ್ತ 50 ಕ್ಕೂ ಅಧಿಕ ಮಾರಿಕಾಂಬಾ ದೇವಸ್ಥಾನಗಳಿವೆ. ಶಿರಸಿಯ ಮಾರಿಕಾಂಬಾ ದೇವಸ್ಥಾನದ ಎದುರು ಆಂಜನೇಯ ದೇವಸ್ಥಾನವಿದ್ದು, ಇದು ಅಪರೂಪದ ಸಂಗತಿ. ಮಾರಿಕಾಂಬಾ ದೇವಸ್ಥಾನವನ್ನು ಕೇವಲ ಧಾರ್ಮಿಕವಾಗಿ ನೋಡಲು ಸಾಧ್ಯವಿಲ್ಲ. ಸೇವಾಲಾಲ ಜಯಂತಿಯ ವೇಳೆ ಭಕ್ತರ ಸಮೂಹವೇ ಮಾರಿಕಾಂಬಾ ದೇವಾಲಯಕ್ಕೆ ಬರುತ್ತಾರೆ. ಮಾರಿಕಾಂಬಾ ದೇವಾಲಯ ಅನೇಕ ಸಮುದಾಯಗಳ ಆರಾಧನಾ ಕೇಂದ್ರವಾಗಿದೆ. ಜಿಲ್ಲೆಯಲ್ಲಿ ಅರಣ್ಯ ಪ್ರದೇಶವೇ ಜಾಸ್ತಿ ಇರುವ ಕಾರಣ ಉದ್ಯಮ, ಅಭಿವೃದ್ಧಿಗೆ ತೊಂದರೆ ಆಗುತ್ತಿದೆ. ಧಾರ್ಮಿಕ ಪ್ರವಾಸೋದ್ಯಮವನ್ನು ಯಾವುದೇ ಅಡೆ ತಡೆ ಇಲ್ಲದೇ ಅಭಿವೃದ್ಧಿಗೊಳಿಸಲು ಜಾಸ್ತಿ ಅವಕಾಶವಿದೆ ಎಂದರು.
    ಪತ್ರಿಕೋದ್ಯಮದಲ್ಲಿ ದೊಡ್ಡ ಭವಿಷ್ಯ ಇದೆ ಎಂಬ ಕಲ್ಪನೆಯೊಂದಿಗೆ ನಾನೂ ಸಹ ಒಮ್ಮೆ ಪತ್ರಿಕೋದ್ಯಮಕ್ಕೆ ಇಳಿದಿದ್ದೆ. ಮಾಧ್ಯಮ ಕ್ಷೇತ್ರಕ್ಕೆ ಅಧ್ಯಯನ, ತಾಳ್ಮೆ, ಸಮೀಕ್ಷೆ ಮಾಡುವ ಮನಸ್ಥಿತಿ ಬೇಕು. ಇಂದಿನ ಮಾಧ್ಯಮಗಳಿಗೆ ಸಾಮಾಜಿಕ ಜಾಲ ತಾಣದೊಂದಿಗಿನ ಪೈಪೋಟಿ, ಸವಾಲು ಜಾಸ್ತಿ ಇದೆ. ಇದೆಲ್ಲದ ನಡುವೆಯೂ ಮುದ್ರಣ ಮಾಧ್ಯಮಗಳು ಸಮಾಜಕ್ಕೆ ನೀಡುವ ಕೊಡುಗೆ ಅಪಾರ. ಸಮಾಜದ ಅಂಕು ಡೊಂಕುಗಳನ್ನು ಸಮಾಜದ ಮುಂದಿಡುವಿಕೆಯನ್ನು ಮಾಧ್ಯಮಗಳು ಒಂದು ದಿನ ಸ್ಥಗಿತಗೊಳಿಸಿದರೂ ಪರಿಣಾಮ ನಿರೀಕ್ಷಿಸಲು ಸಾಧ್ಯವಿಲ್ಲ. ಜಿಲ್ಲೆಯಲ್ಲಿಯೇ ಪತ್ರಿಕೋದ್ಯಮ ಶಿಕ್ಷಣ ಆರಂಭಿಸಿದ ಡಾ.ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ ಮಾಧ್ಯಮ ಕ್ಷೇತ್ರಕ್ಕೆ ಭರವಸೆ ಮೂಡಿಸಿದೆ ಎಂದರು.
    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಮಾತನಾಡಿ, ಪ್ರಾಮಾಣಿಕತೆಗೆ, ನಿರಂತರ ಪರಿಶ್ರಮಕ್ಕೆ ಪತ್ರಿಕೋದ್ಯಮ ಮಾದರಿಯಾಗಿದೆ. ಜಿಲ್ಲೆಯ ಪತ್ರಕರ್ತರು ರಾಜ್ಯದಲ್ಲಿಯೇ ಭಿನ್ನವಾಗಿರುವುದರಿಂದ ಪತ್ರಿಕೆಗಳ ಪ್ರಮುಖ ಹುದ್ದೆಗಳಲ್ಲಿ ನಮ್ಮ ಜಿಲ್ಲೆಯವರಿದ್ದಾರೆ ಎಂದರು.
    ಪ್ರಾಸ್ತಾವಿಕ ಮಾತನಾಡಿದ ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ ಪ್ರಾಚಾರ್ಯ ನಾಗರಾಜ ಇಳೆಗುಂಡಿ, ಕಲೆ, ಸಂಸ್ಕೃತಿ, ಸಾಹಿತ್ಯ, ರಂಗ ಚಟುವಟಿಕೆಯಲ್ಲಿ ಶಿರಸಿ ಪ್ರಸಿದ್ಧಿಯಾಗಿದೆ. ಮಾರಿಕಾಂಬೆಯ ಸಾನ್ನಿಧ್ಯದಿಂದಾಗಿ ಕಾಲ ಕಾಲಕ್ಕೆ ಇಲ್ಲಿಂದ ಪ್ರತಿಭೆ ಬರುವಂತಾಗಿದೆ. ಕನ್ನಡ ಪತ್ರಿಕೋದ್ಯಮಕ್ಕೆ ಸಾರಿಗೆ ಉದ್ಯಮದ ಸಾಮ್ರಾಟ ಡಾ. ವಿಜಯ ಸಂಕೇಶ್ವರ ಅವರ ಕೊಡುಗೆ ಅಪಾರ. ಸುಸಂಸ್ಕೃತ ಪತ್ರಿಕೋದ್ಯಮ ರೂಪಿಸಬೇಕು ಎಂಬ ಉದ್ದೇಶದಿಂದ ಡಾ. ವಿಜಯ ಸಂಕೇಶ್ವರ ಮಿಡಿಯಾ ಸ್ಕೂಲ್ ಕೆಲಸ ಮಾಡುತ್ತಿದೆ ಎಂದರು.
    ಹಿರಿಯ ರಂಗಕರ್ಮಿ ರಾಮಕೃಷ್ಣ ಭಟ್ ದುಂಡಿ ಜಾತ್ರೆಯ ಸಾಂಸ್ಕೃತಿಕ ಮಹತ್ವದ ಕುರಿತು ಉಪನ್ಯಾಸ ನೀಡಿ, ಜಾತ್ರೆಗಳು ಸಾಂಸ್ಕೃತಿಕ ಭಾವೈಕ್ಯತೆಗೆ ಸಾಕ್ಷಿಯಾಗುತ್ತವೆ. ಎಲ್ಲ ಸ್ಥರದ ಜನತೆ ಜಾತ್ರಾ ಸಂಭ್ರಮದಲ್ಲಿ ಭಾಗಿಯಾಗುತ್ತಾರೆ ಎಂದರು. ಬಳಿಕ ಜಾತ್ರಾ ವಿಶೇಷತೆಗಳ ಬಗ್ಗೆ ಸಂವಾದದಲ್ಲಿ ಪಾಲ್ಗೊಂಡರು.
    ವಿದ್ಯಾನಗರ ರುದ್ರಭೂಮಿ ಅಭಿವೃದ್ಧಿ ಸಮಿತಿ ಟ್ರಸ್ಟಿ ವಿ.ಪಿ.ಹೆಗಡೆ ವೈಶಾಲಿ, ಬರಹಗಾರ ಬೀರಣ್ಣ ನಾಯಕ ಮೊಗಟಾ, ವಿಜಯವಾಣಿ ಪತ್ರಿಕೆಯ ವಿನಯ ಹೆಗಡೆ ಇತರರಿದ್ದರು. ವಿದ್ಯಾರ್ಥಿಗಳಾದ ಶೋಭಾ ಗೌಡ ಪ್ರಾರ್ಥಿಸಿದರು. ನಾಗರಾಜ ಪಟಗಾರ ಸ್ವಾಗತಿಸಿದರು. ಪಲ್ಲವಿ ಮರಾಠಿ ಕಾರ್ಯಕ್ರಮ ನಿರೂಪಿಸಿದರು.

    ಇದನ್ನೂ ಓದಿ: ರಸ್ತೆಯಲ್ಲಿ ಹಣ್ಣು, ಕಾಯಿ ಜತೆ ಮದ್ಯ ಮಾರಿದ ಮಹಿಳೆಯರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts