More

    ರಸ್ತೆಯಲ್ಲಿ ಹಣ್ಣು, ಕಾಯಿ ಜತೆ ಮದ್ಯ ಮಾರಿದ ಮಹಿಳೆಯರು!

    ಕಾರವಾರ: ಹೂವು, ಹಣ್ಣು, ತೆಂಗಿನಕಾಯಿ, ಅರಿಶಿನ, ಕುಂಕುಮ, ಊದಿನಕಡ್ಡಿ, ಕರ್ಪೂರ, ವಿಸ್ಕಿ…. ಮೊದಲಿನ ಏಳು ವಸ್ತುಗಳು ಪೂಜೆಗೆ ಬಳಸುವಂಥವು ಎಂದು ಎಲ್ಲರಿಗೂ ತಿಳಿದಿದೆ. ಆದರೆ, `ವಿಸ್ಕಿ’ ಇಲ್ಲಿ ಗುಂಪಿಗೆ ಸೇರದ ಪದ. ಈ ಪವಿತ್ರ ವಸ್ತುಗಳ ಜತೆಗೆ ಮದ್ಯದ ಹೆಸರು ಏಕೆ ಬಂತು ಎಂದು ಕೇಳಬಹುದು. ಕಾರವಾರದ ಜಾತ್ರೆಯೊಂದಕ್ಕೆ ಭಕ್ತರು ಭಾನುವಾರ ಈ ಪೂಜೆಯ ವಸ್ತುಗಳ ಜತೆಗೆ ಮದ್ಯವನ್ನೂ ಕೊಂಡೊಯ್ದರು. ದೇವಸ್ಥಾನದ ಮುಂದೆ, ಹೂವು, ಹಣ್ಣಿನ ಜತೆ ಗೋವಾ ಮದ್ಯವೂ ಮಾರಾಟವಾಯಿತು.
    ಹೌದು, ಕಾರವಾರದ ಕೋಡಿಬಾಗದ ಕಾಳಿ ನದಿಯ ದಡದಲ್ಲಿರುವ ಖಾಪ್ರಿ ದೇವರ ಜಾತ್ರೆಯ ಅಂಗವಾಗಿ ಸಾವಿರಾರು ಭಕ್ತರು ದೇವರಿಗೆ ಗೋವಾ ಮದ್ಯವನ್ನು ಹರಕೆಯಾಗಿ ಅರ್ಪಿಸಿದರು. ಮಾತ್ರವಲ್ಲ ಸಿಗರೇಟು, ಕೋಳಿ ಮಾಂಸ ಹೀಗೆ ವಿವಿಧ ವಿಭಿನ್ನ ಹರಕೆಗಳು ಜಾತ್ರೆಯಲ್ಲಿ ಗಮನ ಸೆಳೆದವು.
    ಪ್ರತಿ ವರ್ಷ ಪಾಲ್ಗುಣ ಮಾಸದಲ್ಲಿ ನಡೆಯುವ ಖಾಫ್ರಿ ದೇವರ ಜಾತ್ರೆ ಎಲ್ಲಕ್ಕಿಂತ ಭಿನ್ನವಾಗಿದೆ. ಜಾತ್ರೆಗೆ ಹಿಂದುಗಳ ಜತೆಗೆ ಕ್ರಿಶ್ಚಿಯನ್, ಮುಸ್ಲಿಂ ಭಕ್ತರು ಆಗಮಿಸುತ್ತಾರೆ. ದೇವಸ್ಥಾನದ ಹೊರಗೆ ಭಕ್ತರು ಮೇಣದ ಬತ್ತಿ ಬೆಳಗುತ್ತಾರೆ. ಒಳಗೆ ತುಲಾಭಾರ ಹರಕೆ ಒಪ್ಪಿಸುತ್ತಾರೆ. ಭಕ್ತರು ಕುರಿ, ಕೋಳಿ ಬಲಿ ಕೊಡುತ್ತಾರೆ. ಸಕ್ಕರೆ, ಕಲ್ಲು ಸಕ್ಕರೆ, ಬೆಲ್ಲ ಅರ್ಪಿಸುತ್ತಾರೆ. ಕೇವಲ ಕಾರವಾರ ಮಾತ್ರವಲ್ಲದೇ ಗೋವಾದಿಂದಲೂ ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಾರೆ.
    ಏಕೆ ಈ ಆಚರಣೆ..?
    ಸುಮಾರು 300 ವರ್ಷಗಳಿಗೂ ಹಿಂದೆ ಖಾಪ್ರಿ ಎಂಬ ಹೆಸರಿನ ನಿಗ್ರೋ ಜನಾಂಗದ ವ್ಯಕ್ತಿಯೊಬ್ಬರು ಕೋಡಿಬಾಗದಲ್ಲಿದ್ದರು. ಎಲ್ಲರಿಗೂ ಅವರು ಸಹಾಯ ಮಾಡುತ್ತಿದ್ದರು. ಅವರು ನಿಧನರಾದ ನಂತರ ಅವರನ್ನು ದಫನ್ ಮಾಡಲಾಯಿತು. ಆದರೆ, ಖಾಪ್ರಿ ಕೆಲವೇ ದಿನದಲ್ಲಿ ಕಾರವಾರದ ನಾಯ್ಕ ಕುಟುಂಬದ ಹಿರಿಯ ಕನಸಿನಲ್ಲಿ ಕಾಣಿಸಿಕೊಂಡರು. ದಫನ್ ಮಾಡಿದ ಜಾಗ ಪರಿಶೀಲಿಸಿದಾಗ ಅವರಲ್ಲಿರಲಿಲ್ಲ. ಅಲ್ಲಿಂದ ಹಲವು ಪವಾಡಗಳು ಪ್ರಾರಂಭವಾದವು. ಖಾಫ್ರಿ ಹೆಸರಿನಲ್ಲಿ ಜನರು ಬೇಡಿಕೊಂಡಿದ್ದು ನಡಯಲಾರಂಭಿಸಿದವು. ಇದರಿಂದ ಜನರು ಅವರನ್ನು ದೇವರು ಎಂದು ಪೂಜಿಸಿ ದೇವಸ್ಥಾನ ಕಟ್ಟಿದರು. ಖಾಪ್ರಿ ಅವರಿಗೆ ಇಷ್ಟವಾಗಿದ್ದ ಮದ್ಯ, ಸಿಗರೇಟು, ಮಾಂಸ ಮುಂತಾದವುಗಳನ್ನು ಇಲ್ಲಿ ಹರಕೆ ಅರ್ಪಿಸುವ ರೂಢಿ ಬೆಳೆಯಿತು ಎನ್ನುತ್ತಾರೆ ಸ್ಥಳೀಯರು.

    ಇದನ್ನೂ ಓದಿ: ಗಂಡನ ಮೇಲಿನ ಸಿಟ್ಟು ಸಣ್ಣ ಮಗುವಿನ ಜತೆ ಬಾವಿಗೆ ಜಿಗಿದ ಮಹಿಳೆ

    ನಮ್ಮ ಕುಟುಂಬ ಐದು ತಲೆಮಾರಿನಿಂದ ಇದೇ ದೇವರ ಪೂಜೆ ಮಾಡುತ್ತಿದೆ. ಜಾತ್ರೆಯ ಸಮಯದಲ್ಲಿ ಅಲ್ಲದೆ, ಪ್ರತಿ ಬುಧವಾರ ಹಾಗೂ ಭಾನುವಾರ ಕೂಡ ದೇವರಿಗೆ ಸಾರಾಯಿ, ಸಿಗರೇಟಿನ ಹರಕೆ ಸಲ್ಲಿಸಲಾಗುತ್ತದೆ. ಹರಕೆ ಅರ್ಪಿಸಿ ಭಕ್ತಿಯಿಂದ ಬೇಡಿಕೊಂಡಲ್ಲಿ ಇಷ್ಟಾರ್ಥ ಸಿದ್ಧಿಸುವುದು ಎಂಬುದು ಜನರ ನಂಬಿಕೆಯಾಗಿದೆ.
    ವಿನಾಯಕ ನಾಯ್ಕ
    ಅರ್ಚಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts