ವಿಜಯವಾಡ: ದೇಶದೆಲ್ಲೆಡೆ ಚುನಾವಣಾ ಕಾವು ಜೋರಾಗಿದೆ. ಆಡಳಿತ ಮತ್ತು ವಿರೋಧ ಪಕ್ಷಗಳೆರಡೂ ಗೆಲುವಿನ ಗುರಿಯೊಂದಿಗೆ ತಂತ್ರ ಮತ್ತು ಪ್ರತಿತಂತ್ರಗಳಲ್ಲಿ ನಿರತವಾಗಿವೆ. ಮತ್ತೊಂದೆಡೆ ಮತದಾನ ನಡುವೆ ಕೇಂದ್ರ ಚುನಾವಣಾ ಆಯೋಗ ಹೈ ಅಲರ್ಟ್ ಆಗಿದೆ. ಚುನಾವಣಾ ನೀತಿ ಸಂಹಿತೆ ಜಾರಿ ಅಂಗವಾಗಿ ಭ್ರಷ್ಟಾಚಾರ ಹಣ, ಅಕ್ರಮ ಮದ್ಯ ಸಾಗಾಟದ ಮೇಲೆ ನಿಗಾ ಇಡಲಾಗಿದೆ. ದೇಶಾದ್ಯಂತ ಹಲವು ಕಡೆ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ. ಅಧಿಕಾರಿಗಳು ವ್ಯಾಪಕ ತಪಾಸಣೆ ನಡೆಸುತ್ತಿದ್ದಾರೆ. ಭಾರೀ ಪ್ರಮಾಣದ ನಗದು, ಚಿನ್ನಾಭರಣಗಳನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಇತ್ತೀಚೆಗಷ್ಟೇ ಆಂಧ್ರ ಪ್ರದೇಶದ ಅನಂತಪುರ ಜಿಲ್ಲಾ ಪೊಲೀಸರು ಹೈದರಾಬಾದ್-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಪಾಸಣೆ ನಡೆಸುವಾಗ ಪಾಮಿಡಿ ಮಂಡಲದ ಗಜರಂಪಳ್ಳಿ ಬಳಿ 4 ಕಂಟೈನರ್‌ಗಳಲ್ಲಿ 2 ಸಾವಿರ ಕೋಟಿ ರೂ. ನಗದು ಸಾಗಿಸುತ್ತಿದ್ದುದನ್ನು ಪತ್ತೆ ಮಾಡಿದರು. ಪ್ರತಿ ಕಂಟೈನರ್ನಲ್ಲಿ 500 ಕೋಟಿ ರೂ. ನಂತೆ 4 ಕಂಟೈನರ್‌ಗಳಲ್ಲಿ 2 ಸಾವಿರ ಕೋಟಿ ರೂ. ಸಾಗಿಸಲಾಗುತ್ತಿತ್ತು. ಯಾವುದೇ ದಾಖಲೆಗಳಿಲ್ಲದ ಹಿನ್ನೆಲೆಯಲ್ಲಿ ಹಣವನ್ನು ವಶಕ್ಕೆ ಪಡೆಯಲಾಗಿತ್ತು.
ಕೇರಳದ ಕೊಚ್ಚಿಯಿಂದ ನಾಲ್ಕು ಕಂಟೈನರ್ಗಳ ಮೂಲಕ ಸಾಗಿಸಲಾಗುತ್ತಿತ್ತು. ಕೂಡಲೇ ಈ ವಿಷಯವನ್ನು ಜಿಲ್ಲಾಧಿಕಾರಿ, ಚುನಾವಣಾಧಿಕಾರಿ ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ತನಿಖೆ ನಡೆಸಿದಾಗ ಅಷ್ಟು ಪ್ರಮಾಣದ ಹಣವನ್ನು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಠೇವಣಿ ಇಡಲು ತೆಗೆದುಕೊಂಡು ಹೋಗುತ್ತಿದ್ದರು ಎಂದು ತಿಳಿದುಬಂದಿದೆ.
ಸಿಬ್ಬಂದಿಯಿಂದ ವಿವರ ಪಡೆದ ಪೊಲೀಸರಿಗೆ ಕೇರಳದ ಕೊಚ್ಚಿಯಿಂದ ಹೈದರಾಬಾದ್‌ಗೆ ಎರಡು ಸಾವಿರ ಕೋಟಿ ಹಣ ಸಾಗಣೆಯಾಗುತ್ತಿದೆ ಎಂದು ತಿಳಿದುಬಂದಿದೆ. ಆರ್‌ಬಿಐನಲ್ಲಿ ಠೇವಣಿ ಇಡಲು ಈ ಮೊತ್ತವನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಆರ್ಬಿಐ ಸಿಬ್ಬಂದಿ ಪೊಲೀಸರಿಗೆ ವಿವರಿಸಿದರು ಎಂದು ತಿಳಿದುಬಂದಿದೆ.
ಆದಾಯ ತೆರಿಗೆ ಅಧಿಕಾರಿಗಳು ಮತ್ತು ಚುನಾವಣಾಧಿಕಾರಿಗಳು ವಿಚಾರಣೆ ನಡೆಸಿದ ನಂತರ ಕಂಟೈನರ್ಗಳನ್ನು ಬಿಟ್ಟುಕೊಡಲಾಯಿತು. ಆದರೆ ಕಂಟೈನರ್ ಗಳಲ್ಲಿ 2 ಸಾವಿರ ಕೋಟಿ ಸಾಗಣೆ ಮಾಡಿರುವ ವಿಚಾರ ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಗಿದೆ. (ಏಜೆನ್ಸೀಸ್)
ಜೂನಿಯರ್ ಸಮಂತಾ ಆಶು ರೆಡ್ಡಿ ಹಾಟ್ ಅವತಾರ ವೈರಲ್! ಇದು ಅತಿಯಾಯ್ತು ಅಂದ್ರು ಫ್ಯಾನ್ಸ್
ಕೊಹ್ಲಿ ಸ್ಟ್ರೈಕ್ ರೇಟ್ ಬಗ್ಗೆ ಪತ್ರಕರ್ತ ಕೇಳಿದ ಪ್ರಶ್ನೆಗೆ ರೋಹಿತ್ ಶರ್ಮ ಕೊಟ್ಟ ಪ್ರತಿಕ್ರಿಯೆ ವೈರಲ್!