More

    ರಾಷ್ಟ್ರಪತಿ ವಿರುದ್ಧವೇ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ!

    ರಾಜ್ಯದಿಂದ ಕಳಿಸಿದ ಮಸೂದೆಗೆ ಅಂಕಿತ ಹಾಕುತ್ತಿಲ್ಲ ಎಂದು ಕೇರಳ ಸರ್ಕಾರದ ದೂರು

    ನವದೆಹಲಿ: ಕೇರಳ ವಿಧಾನಸಭೆಯು ಅಂಗೀಕಾರ ನೀಡಿರುವ ನಾಲ್ಕು ಮಸೂದೆಗಳಿಗೆ ರಾಷ್ಟ್ರಪತಿ ದ್ರೌಪದಿ ಮುಮು ಅವರು ಅಂಕಿತ ಹಾಕುತ್ತಿಲ್ಲ ಎಂದು ಪಿಣರಾಯಿ ವಿಜಯನ್ ಸರ್ಕಾರ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು, ಇದೊಂದು ಅಪರೂಪದ ಬೆಳವಣಿಗೆ ಎಂದು ವಿಶ್ಲೇಷಿಸಲಾಗಿದೆ.

    ವಿಶ್ವವಿದ್ಯಾಲಯ ಕಾನೂನುಗಳ (ತಿದ್ದುಪಡಿ) (ನಂ.2) ಮಸೂದೆ-2021, ಕೇರಳ ಸಹಕಾರ ಸಂಘಗಳ (ತಿದ್ದುಪಡಿ) ಮಸೂದೆ-2022, ವಿಶ್ವವಿದ್ಯಾಲಯ ಕಾನೂನುಗಳ (ತಿದ್ದುಪಡಿ) ಮಸೂದೆ-2022 ಹಾಗೂ ವಿಶ್ವವಿದ್ಯಾಲಯ ಕಾನೂನುಗಳ (ತಿದ್ದುಪಡಿ) (ನಂ.3) ಮಸೂದೆ-2022ಕ್ಕೆ ರಾಷ್ಟ್ರಪತಿ ಯಾವುದೇ ಕಾರಣಗಳನ್ನು ಉಲ್ಲೇಖಿಸದೆ ಅಂಕಿತ ಹಾಕದಿರುವುದನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೇರಳ ಸರ್ಕಾರ ಮನವಿ ಮಾಡಿದೆ. ರಾಜ್ಯಪಾಲರು ಈ ನಾಲ್ಕು ಮಸೂದೆಗಳು ಸೇರಿ ಒಟ್ಟು ಏಳು ಮಸೂದೆಗಳನ್ನು ರಾಷ್ಟ್ರಪತಿಯವರ ಪರಿಶೀಲನೆಗೆ ಇರಿಸಿಕೊಂಡ ಕ್ರಮವನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದೆ. ರಾಜ್ಯಪಾಲರು ಆಗಾಗ್ಗೆ ಮಾಧ್ಯಮಗಳ ಮೂಲಕ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿಯನ್ನು ಸಾರ್ವಜನಿಕವಾಗಿ ಟೀಕಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

    ಸಂವಿಧಾನದ ಉಲ್ಲಂಘನೆ: 

    ರಾಜ್ಯದ ವ್ಯಾಪ್ತಿಗೆ ಬರುವ ವಿಷಯಗಳಿಗೆ ಸಂಬಂಧಿಸಿದ ಈ ಮಸೂದೆಗಳಿಗೆ ಯಾವ ನಿರ್ದಿಷ್ಟ ಕಾರಣವೂ ಇಲ್ಲದೆ ಅಂಕಿತ ಹಾಕದಂತೆ ರಾಷ್ಟ್ರಪತಿಯವರಿಗೆ ಕೇಂದ್ರ ಸರ್ಕಾರ ನೀಡಿರುವ ಸಲಹೆಯು ಸಂವಿಧಾನದ 14ನೇ ವಿಧಿಯ 200 ಮತ್ತು 201ರ ಉಲ್ಲಂಘನೆಯಾಗಿದೆ. ಅಲ್ಲದೆ ಕಲ್ಯಾಣ ಯೋಜನೆಗಳನ್ನು ನಿರಾಕರಿಸುವ ಮೂಲಕ 21ನೇ ವಿಧಿ ಅಡಿಯಲ್ಲಿ ರಾಜ್ಯದ ಜನರ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ ಎಂದು ಕೇರಳ ಸರ್ಕಾರ ಅರ್ಜಿಯಲ್ಲಿ ಉಲ್ಲೇಖಿಸಿದೆ.

    ಯಾರ್ಯಾರು ಪ್ರತಿವಾದಿಗಳು?:

    ಸಿಪಿಐ(ಎಂ) ನೇತೃತ್ವದ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ ಸರ್ಕಾರವು, ರಾಷ್ಟ್ರಪತಿಯವರ ಕಾರ್ಯದರ್ಶಿ, ಕೇರಳ ರಾಜ್ಯಪಾಲ ಆಸಿಫ್ ಮೊಹಮ್ಮದ್ ಖಾನ್, ಅವರ ಹೆಚ್ಚುವರಿ ಕಾರ್ಯದರ್ಶಿ ಮತ್ತು ಕೇಂದ್ರ ಸರ್ಕಾರವನ್ನು ಪ್ರತಿವಾದಿಗಳು ಎಂದು ಅರ್ಜಿಯಲ್ಲಿ ಹೆಸರಿಸಲಾಗಿದೆ. ಕೇರಳ ಸರ್ಕಾರದ ಪರವಾಗಿ ಹಿರಿಯ ವಕೀಲ ಸಿ.ಕೆ.ಶಶಿ ಸುಪ್ರೀಂ ಕೋರ್ಟ್​ನಲ್ಲಿ ವಾದ ಮಂಡಿಸಲಿದ್ದಾರೆ.

    ರಾಜ್ಯಪಾಲರ ವಿರುದ್ಧವೂ ದೂರು ನೀಡಿದ್ದ ಸರ್ಕಾರ:

    ವಿಧಾಸಭೆಯಲ್ಲಿ ಪಾಸ್ ಆದ 8 ಮಸೂದೆಗಳನ್ನು ಅಂಗೀಕರಿಸದೆ ರಾಜ್ಯಪಾಲರು ಬಾಕಿಯಿಟ್ಟಿದ್ದು, ನಿರಂಕುಶ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ನ. 2ರಂದು ಕೇರಳ ಸರ್ಕಾರ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು. ಅಲ್ಲದೆ ಮಸೂದೆಗಳ ವಿಲೇವಾರಿಗೆ ರಾಜ್ಯಪಾಲರಿಗೆ ಕಾಲಮಿತಿ ನಿಗದಿಪಡಿಸಲು ನಿರಾಕರಿಸಿದ ಕೇರಳ ಹೈಕೋರ್ಟ್ ತೀರ್ಪಿನ ವಿರುದ್ಧವೂ ಮೇಲ್ಮನವಿ ಸಲ್ಲಿಸಲಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ಶಾಸಕಾಂಗ ಅಂಗೀಕರಿಸಿದ ಮಸೂದೆಗಳನ್ನು ತಡೆಯಲು ರಾಜ್ಯಪಾಲರು ಅಧಿಕಾರ ಬಳಸುವಂತಿಲ್ಲ. ಆಕ್ಷೇಪಾರ್ಹ ಸಂಗತಿಗಳು ಕಂಡು ಬಂದರೆ ಹಿಂದಕ್ಕೆ ಕಳುಹಿಸಬೇಕು ಎಂದು ಸುಪ್ರೀಂ ಸೂಚಿಸಿತ್ತು.

    ಶ್ರೀಲೀಲಾ ಜತೆ ನಟಿಸಲು ಸ್ಟಾರ್​ ನಟರಿಗೆ ಚಿಂತೆ! ಇದು ಮುಂದುವರಿದ್ರೆ ‘ಕಿಸ್’​ ಬೆಡಗಿಗೆ ಸಂಕಷ್ಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts