More

    ಅರಿಷಡ್ವರ್ಗಗಳಿಗೆ ಬೀಗ ಹಾಕುವುದೇ ಯಶಸ್ಸಿನ ಕೀಲಿಕೈ

    ಅರಿಷಡ್ವರ್ಗಗಳಿಗೆ ಬೀಗ ಹಾಕುವುದೇ ಯಶಸ್ಸಿನ ಕೀಲಿಕೈ| ಡಾ. ಡಿ. ವೀರೇಂದ್ರ ಹೆಗ್ಗಡೆ, (ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)

    ಬೆಟ್ಟ ಹತ್ತುವವನಿಗೆ ತಾನು ಬೆಟ್ಟ ಹತ್ತಬಲ್ಲೆ ಎಂಬ ನಂಬಿಕೆಯೇ ಇಲ್ಲದಿದ್ದರೆ ಬೆಟ್ಟ ಹತ್ತುವ ಪ್ರಯತ್ನವನ್ನೂ ಮಾಡಲಾರ. ನಂಬಿಕೆಯಿದ್ದರೆ ಕಾಲು ಇಲ್ಲದವರೂ ಕೂಡ ಕಷ್ಟಪಟ್ಟು ಬೆಟ್ಟ ಹತ್ತಬಲ್ಲರು. ನಮ್ಮ ನಿತ್ಯ ದಿನಚರಿಯಲ್ಲಾಗಲಿ, ಕೆಲಸ-ಕಾರ್ಯಗಳಲ್ಲಾಗಲಿ ನಂಬಿಕೆಯೇ ಮುಖ್ಯ. ಕೈಗೊಂಡ ಕಾರ್ಯದಲ್ಲಿ ಯಶಸ್ವಿಯಾಗುತ್ತೇನೆ, ಸಾಧಿಸಿ ತೋರಿಸುತ್ತೇನೆ ಎಂಬ ನಂಬಿಕೆ ಇದ್ದಲ್ಲಿ ಯಾವುದೇ ಸತ್ಕಾರ್ಯವನ್ನು ಸುಲಭವಾಗಿ ಮಾಡಬಹುದು.

    ಕೀಲಿ ಕೈ ಎಂಬುದು ನಮ್ಮೆಲ್ಲರಿಗೂ ಚಿರಪರಿಚಿತವಾದ್ದೇ. ತಿಜೋರಿ, ಪೆಟ್ಟಿಗೆ, ಕೋಟೆ-ಕೊತ್ತಲಗಳಿಗೆ ಹಾಕಿದ ಬೀಗವನ್ನು ತೆರೆಯಲು ಕೀಲಿ ಕೈ ಬೇಕೇ ಬೇಕು. ಅದರಲ್ಲೂ ಆಯಾ ಬೀಗಗಳ ಕೀಲಿ ಕೈ ಬೇಕೇ ಹೊರತು ಬೇರೆ ಯಾವುದೇ ಕೀಲಿ ಕೈಯಿಂದ ಸಾಧ್ಯವಿಲ್ಲ. ಬೆರಳಿನಷ್ಟು ಚಿಕ್ಕ ಗಾತ್ರದಿಂದ ಹಿಡಿದು ಬೃಹತ್ ಗಾತ್ರದವರೆಗಿನ ನಾನಾ ವಿನ್ಯಾಸದ ಬೀಗಗಳು ಹಾಗೂ ಅದರ ಕೀಲಿಕೈಗಳನ್ನು ನಾವು ಕಾಣಬಹುದು.

    ಹಿಂದಿನ ಕಾಲದಲ್ಲಿ ಎಲ್ಲಾ ಬೀಗ ಮತ್ತು ಕೀಗಳನ್ನು ಕೈಯಿಂದಲೇ ತಯಾರಿಸಲಾಗುತ್ತಿತ್ತು. ಪ್ರತಿಯೊಂದೂ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದ್ದವು. ಕೆಲವೊಂದನ್ನು ಕೀ ಹಾಕಿ ತಿರುವಿದರೆ ಮಾತ್ರ ತೆರೆಯಲು ಸಾಧ್ಯವಾಗುತ್ತಿರಲಿಲ್ಲ. ಬೀಗದಲ್ಲಿರುವ ನಿರ್ದಿಷ್ಟ ಗುಂಡಿ, ಗುರುತು ಅಥವಾ ಚಿನ್ಹೆಯನ್ನು ಒತ್ತಿ ಬೀಗದ ಕೀಯನ್ನು ತಿರುಗಿಸಬೇಕಿತ್ತು. ಕೆಲವೊಂದು ಬೀಗಗಳ ವಿನ್ಯಾಸಗಳು ಅತ್ಯಂತ ಸೂಕ್ಷ್ಮವಾಗಿದ್ದವು. ಕೀಲಿ ಎಲ್ಲಿ ಹಾಕುವುದೆಂದೇ ಗೊತ್ತಾಗುತ್ತಿರಲಿಲ್ಲ. ಅಂತಹ ಬೀಗಗಳನ್ನು ವಿನ್ಯಾಸ ಮಾಡುವ ಗ್ರಾಮೀಣ ಪ್ರತಿಭೆಗಳು ನಮ್ಮಲ್ಲಿ ಸಾಕಷ್ಟು ಜನರಿದ್ದರು. ಆದರೆ ಕಂಪನಿಗಳು ಇತ್ತೀಚಿಗೆ ಬೃಹತ್ ಮಟ್ಟದಲ್ಲಿ ಬೀಗ ತಯಾರು ಮಾಡಲು ಆರಂಭಿಸಿದ ಬಳಿಕ ಸಾಂಪ್ರದಾಯಿಕವಾಗಿ ತಯಾರಾಗುವ ಬೀಗಗಳಿಗೆ ಮನ್ನಣೆ ಕಡಿಮೆಯಾಗಿ ಕಂಪನಿ ಬೀಗಗಳೇ ಪ್ರಖ್ಯಾತಿಯನ್ನು ಪಡೆದುಕೊಂಡವು.

    ನಮ್ಮ ಧರ್ಮಸ್ಥಳದ ಮಂಜೂಷಾ ವಸ್ತು ಸಂಗ್ರಹಾಲಯದಲ್ಲಿ ವಿವಿಧ ತರಹದ ಬೀಗಗಳನ್ನು ನೋಡಬಹುದಾಗಿದೆ. ಹುಡುಕುತ್ತಾ ಹೊರಟರೆ ಬೀಗ ಮತ್ತು ಅದು ಬೆಳೆದು ಬಂದ ಹಾದಿಯ ಬಗ್ಗೆ ಸಾಕಷ್ಟು ಮಾಹಿತಿಗಳು ಲಭ್ಯವಾಗುತ್ತವೆ. ಅಚ್ಚರಿಯನ್ನು ಮೂಡಿಸುತ್ತವೆ. ಕಬ್ಬಿಣ, ತಾಮ್ರ ಮುಂತಾದವುಗಳಿಂದ ಮಾಡಿದ ವಿವಿಧ ಆಕಾರದ ಬೀಗಗಳನ್ನು ಕಾಣಬಹುದಾಗಿದ್ದು, ಸೂಕ್ಷ್ಮ ಕೆತ್ತನೆ ಹಾಗೂ ಚಿತ್ರಗಳನ್ನು ಬೀಗದ ಮೇಲೆ ಮೂಡಿಸಿರುವುದನ್ನು ಕಾಣಬಹುದು.

    ಬೀಗ ಮತ್ತು ಕೀಯದ್ದು ಅವಿನಾಭಾವ ಸಂಬಂಧವಾಗಿದೆ. ಬೀಗ ಅಥವಾ ಕೀಯಲ್ಲಿ ಯಾವುದಾದರೂ ಒಂದು ಇಲ್ಲದಿದ್ದರೂ ಇನ್ನೊಂದು ಪ್ರಯೋಜನಕ್ಕೆ ಬಾರದು. ಪ್ರಪಂಚದ ಯಾವುದೇ ಮೂಲೆಗೆ ಹೋದರೂ ವಿವಿಧ ರೀತಿಯ ಬೀಗ ಹಾಗೂ ಅದರ ಕೀಲಿ ಕೈಯನ್ನು ಕಾಣಬಹುದು. ಆದರೆ ಅಪವಾದ ಎಂಬಂತೆ ಪುಣೆಯ ಶನಿಸಿಂಗಣಾಪುರದಲ್ಲಿ ಯಾವುದೇ ಮನೆಗೂ ಬಾಗಿಲುಗಳೇ ಇಲ್ಲ. ಬಾಗಿಲುಗಳು ಇದ್ದರೆ ತಾನೇ ಬೀಗ ಹಾಕುವುದು? ಹಾಗಾಗಿ ಅಲ್ಲಿ ಮನೆ ಮಾತ್ರವಲ್ಲದೆ ಅಂಗಡಿ ಮುಂಗಟ್ಟುಗಳು, ಆಸ್ಪತ್ರೆ, ಪೊಲೀಸ್ ಠಾಣೆಗಳಲ್ಲೂ ಬಾಗಿಲು, ಬೀಗಗಳ ಬಳಕೆ ಇಲ್ಲವಾಗಿದೆ. ಎಲ್ಲರೂ ತಮ್ಮ ಹಣ, ಬಂಗಾರ, ಅಮೂಲ್ಯ ವಸ್ತುಗಳನ್ನು ಭದ್ರತೆಯ ದೃಷ್ಟಿಯಿಂದ ಬ್ಯಾಂಕ್​ನಲ್ಲಿ ಇಡುತ್ತಾರೆ. ಆದರೆ ಜಗತ್ತಿನಲ್ಲಿ ಬೀಗ ಹಾಕದೇ ಇರುವ ಬ್ಯಾಂಕ್​ನ್ನು ಶನಿಸಿಂಗಣಾಪುರದಲ್ಲಿ ಮಾತ್ರ ಕಾಣಬಹುದು.

    ಬೀಗ ಯಾವಾಗಿನಿಂದ ಬಳಕೆಗೆ ಬಂತು ಎಂಬ ಮಾಹಿತಿ ಸ್ಪಷ್ಟವಾಗಿ ಲಭ್ಯವಿಲ್ಲ. ಬೀಗ ಮತ್ತು ಕೀಯ ಚರಿತ್ರೆ ಸುಮಾರು 6 ಸಾವಿರ ವರ್ಷಗಳಷ್ಟು ಹಿಂದಿನದು ಎನ್ನಲಾಗುತ್ತದೆ. ಪ್ರಾಚೀನ ಅಸ್ಸೀರಿಯಾದ ರಾಜಧಾನಿ ನಿನುವಾದಲ್ಲಿ ಬೀಗ ಮತ್ತು ಕೀಗಳು ಪತ್ತೆಯಾಗಿವೆ. ಕ್ರಿ.ಪೂ. 4000ದಲ್ಲಿ ಬೀಗದ ಕೀಗಳು ಈಜಿಪ್ಟ್​ನಲ್ಲಿ ಬಳಕೆಯಲ್ಲಿದ್ದವು. ಬೀಗ ಮತ್ತು ಕೀಯನ್ನು ಮರದಿಂದ ಮಾಡಲಾಗಿತ್ತು. ಕ್ರಿ.ಪೂ. 1000ರಲ್ಲಿ ಗ್ರೀಸ್ ಮತ್ತು ರೋಮ್ಲ್ಲಿ ಸುಧಾರಿತ ಬೀಗದ ಕೀಗಳು ರೂಪುಗೊಂಡಿದ್ದವು ಎಂಬಿತ್ಯಾದಿ ವಿವರಗಳನ್ನು ಪತ್ರಿಕೆಯಲ್ಲಿ ಓದಿದ ನೆನಪು.

    ಬಹುಶಃ ಬೀಗ ಬಳಕೆಯು ಆರಂಭದಲ್ಲಿ ಸಂಪತ್ತುಗಳನ್ನು ಸಂರಕ್ಷಿಸಲು ಬಳಕೆಗೆ ಬಂದಿರಬಹುದು. ಈಗ ಸಂಪತ್ತುಗಳ ರಕ್ಷಣೆ ಮಾತ್ರವಲ್ಲದೆ ರಕ್ಷಣೆ, ಭದ್ರತೆ, ಮಾಹಿತಿ- ಗೌಪ್ಯತೆ ಕಾಪಾಡುವಿಕೆ, ಹೀಗೆ ವಿವಿಧ ಕಾರಣಗಳಿಗಾಗಿ ವಿವಿಧ ರೀತಿಯ ಬೀಗಗಳು ಬಳಕೆಯಲ್ಲಿವೆ. ಪ್ರಾರಂಭದಲ್ಲಿ ಮರದಿಂದ ಬೀಗವನ್ನು ತಯಾರು ಮಾಡಲಾಗಿತ್ತಂತೆ. ಅಂದಿನಿಂದ ಇಂದಿನವರೆಗೂ ಬೀಗ ಮತ್ತು ಕೀಲಿ ಕೈಗಳು ಆಕಾರ ಮತ್ತು ಕಾರ್ಯನಿರ್ವಹಣೆಯಲ್ಲಿ ಸಾಕಷ್ಟು ಬದಲಾವಣೆಗೊಂಡಿವೆ. ಒಂದೆರಡು ದಶಕಗಳ ಹಿಂದೆ ಮನೆ ಬಾಗಿಲಿನ ಚಿಲಕಕ್ಕೆ ಬೀಗ ಹಾಕಿ ಹೋಗುತ್ತಿದ್ದರು. ಈಗಲೂ ಅಂತಹ ವ್ಯವಸ್ಥೆ ಇದೆ. ಆದರೆ ಈಗ ತಂತ್ರಜ್ಞಾನ ಬಳಕೆ ಹೆಚ್ಚಿರುವ ಸಂದರ್ಭದಲ್ಲಿ ಬಾಗಿಲಿಗೆ ಬೀಗವೂ ಬೇಡ, ಕೀಯೂ ಬೇಡ. ಬಾಗಿಲು ಹಾಕಿ ಮೊದಲೇ ಅಳವಡಿಸಲಾಗಿರುವ ಲಾಕ್​ಸಿಸ್ಟಂಗೆ ಪಾಸ್​ವರ್ಡ್ ಹಾಕಿದರೆ ಮುಗಿಯಿತು. ಮತ್ತೆ ತೆರೆಯಬೇಕೆಂದರೆ ಪಾಸ್​ವರ್ಡ್ ಹಾಕಬೇಕಾಗುತ್ತದೆ. ಒಂದು ವೇಳೆ ಕಳ್ಳರೇನಾದರೂ ಬಾಗಿಲು ಒಡೆಯಲು ಯತ್ನಿಸಿದರೂ ತಕ್ಷಣ ಮನೆ ಮಾಲೀಕನ ಮೊಬೈಲ್ ಫೋನ್​ಗೆ ಸಂದೇಶ ಹೋಗುವಂಥ ವ್ಯವಸ್ಥೆಯೂ ಈಗಿದೆ.

    ಹಿಂದೆಲ್ಲ ಶಾನುಭೋಗರು, ಪಟೇಲರು, ಜಮೀನುದಾರರು ಊರಿನ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ಹಾಗಾಗಿ ಅವರ ಮನೆಯಲ್ಲಿ ಆಳು-ಕಾಳು ಸಂಪತ್ತು ಇದ್ದೇ ಇರುತ್ತಿತ್ತು. ಮನೆಯ ಯಜಮಾನರು ಊರ ವ್ಯವಹಾರಗಳನ್ನು ನೋಡಿಕೊಂಡರೆ ಮನೆಯೊಡತಿ ಮನೆಯ ಜವಾಬ್ದಾರಿಯನ್ನೆಲ್ಲ ಹೊತ್ತು ಎಲ್ಲ ಕೆಲಸ ಕಾರ್ಯಗಳನ್ನು ನಿಭಾಯಿಸುತ್ತಿದ್ದರು. ಮನೆಯಲ್ಲಿ ಇರುವ ಹಣ, ಬಂಗಾರ, ಆಸ್ತಿಪತ್ರ ಹೀಗೆ ಬೆಲೆಬಾಳುವ ವಸ್ತುಗಳನ್ನೆಲ್ಲ ಯಜಮಾನನು ಮಲಗುವ ಮಂಚದಲ್ಲಿ ಪೆಟ್ಟಿಗೆಯಂತಹ ತಿಜೋರಿಯಲ್ಲಿ ಇಡುತ್ತಿದ್ದರು. ಆ ತಿಜೋರಿ ಹೇಗಿರುತ್ತಿತ್ತು ಎಂದರೆ ಅದನ್ನು ತೆರೆದಾಗ ಮೇಲ್ನೋಟಕ್ಕೆ ಒಂದು ಕೋಣೆಯ ಸಣ್ಣ ಪೆಟ್ಟಿಗೆ ಎಂದು ಗೋಚರಿಸುತ್ತಿತ್ತು. ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಪೆಟ್ಟಿಗೆಯೊಳಗೆ ಮರೆಮಾಚಲ್ಪಟ್ಟ ಹಲವಾರು ಕೋಣೆಗಳಿದ್ದು ಅವುಗಳನ್ನು ತೆರೆಯಲು ಸಣ್ಣ ಸಣ್ಣ ಕೀಲಿಗಳಿರುತ್ತಿದ್ದವು.

    ಮನೆಯಲ್ಲಿ ಇರುವ ಅಷ್ಟೊಂದು ಮಹಿಳೆಯರಲ್ಲಿ ಮನೆಯ ಒಡತಿಯನ್ನು ಯಾರೆಂದು ಬಹು ಸುಲಭವಾಗಿ ಕಂಡು ಹಿಡಿಯಬಹುದಾಗಿತ್ತು. ಯಾಕೆಂದರೆ ಅವರ ಸೊಂಟದಲ್ಲಿ ಬೀಗದ ಕೀಲಿ ಕೈಗಳ ಗೊಂಚಲೊಂದು ಸದಾ ನೇತಾಡುತ್ತಿತ್ತು. ಮನೆಯ ಮುಖ್ಯ ದ್ವಾರದಿಂದ ಹಿಡಿದು ತಿಜೋರಿಯವರೆಗಿನ ಕೀಲಿ ಕೈಗಳು ಅದರಲ್ಲಿರುತ್ತಿದ್ದವು. ಆ ಕೀಗೊಂಚಲನ್ನು ಅಪ್ಪಿ ತಪ್ಪಿಯೂ ಬೇರೆ ಕಡೆ ಇಡುತ್ತಿರಲಿಲ್ಲ. ಆಗಾಗ ಕೀ ಹುಡುಕಾಡುವುದು ಬೇಡ ಅಥವಾ ಬೇರೆ ಕಡೆ ಇಟ್ಟರೆ ಯಾರಾದರೂ ಅದನ್ನು ಒಯ್ಯಬಹುದು, ದುರ್ಬಳಕೆ ಮಾಡಬಹುದು ಎಂಬ ದೃಷ್ಟಿಯಿಂದ ಸದಾ ಸೊಂಟದಲ್ಲಿ ಸಿಕ್ಕಿಸಿಕೊಳ್ಳುವ ಪರಿಪಾಠ ಬೆಳೆದಿರಬಹುದು. ಮನೆ ಉಸ್ತುವಾರಿ ನೋಡಿಕೊಳ್ಳಲು ತನಗೆ ಇನ್ನು ಆಗುವುದಿಲ್ಲ ಎಂದಾಗ ಮನೆಯ ಹಿರಿ ಸೊಸೆಗೋ ಅಥವಾ ಜವಾಬ್ದಾರಿಯುತ ಸೊಸೆಗೋ ಬೀಗದ ಕೀ ಗೊಂಚಲನ್ನು ನೀಡಿ ಜವಾಬ್ದಾರಿ ಹಸ್ತಾಂತರ ಮಾಡುತ್ತಿದ್ದರು.

    ನನ್ನ ತಾಯಿ ಮಾತೃಶ್ರೀ ರತ್ನಮ್ಮ ಹೆಗ್ಗಡೆಯವರ ಬಳಿಯೂ ಸಣ್ಣ ಕೀಲಿ ಗೊಂಚಲಿತ್ತು. ಅದನ್ನವರು ಸದಾ ತಮ್ಮ ಸೊಂಟದಲ್ಲೇ ಸಿಕ್ಕಿಸಿಕೊಂಡಿರುತ್ತಿದ್ದರು. ಮನೆಯ ಬೀರು, ಕೋಣೆ ಮುಂತಾದವುಗಳ ಕೀಲಿ ಕೈಗಳಿರುತ್ತಿದ್ದವು. ಕ್ಷೇತ್ರಕ್ಕೆ ಬರುವ ಎಲ್ಲರನ್ನೂ ಉಪಚರಿಸುತ್ತಿದ್ದ ಅವರು ಅಗತ್ಯವುಳ್ಳವರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದರು. ‘ಯಾರಿಗೇ ಆಗಲಿ ಒಂದು ಹೊತ್ತಿನ ಊಟವನ್ನು ನೀಡುವುದಕ್ಕಿಂತ ಜೀವನ ಪರ್ಯಂತ ತಮ್ಮ ಊಟವನ್ನು ತಾವೇ ಗಳಿಸುವಂತಾಗಬೇಕು, ಅದಕ್ಕಾಗಿ ನೆರವು ನೀಡುವುದು ಸೂಕ್ತ’ ಎಂಬ ಆಶಯವನ್ನು ವ್ಯಕ್ತಪಡಿಸುತ್ತಿದ್ದರು. ಈ ಕೀಲಿ ಗೊಂಚಲುಗಳೆಲ್ಲ ಬಹು ವಿನ್ಯಾಸದಿಂದ ಕೂಡಿರುತ್ತವೆ. ಕೆಲವರು ಮರದ ಕೆತ್ತನೆಯುಳ್ಳ ಆಕೃತಿ, ಕೆಲವರು ಬಟ್ಟೆಯಿಂದ ಮಾಡಿದ ಚಿತ್ರಿಕೆ ಹೀಗೆ ಅವರ ಹವ್ಯಾಸ, ಅಭಿರುಚಿಗೆ ತಕ್ಕಂತೆ ಕೀ ಗೊಂಚಲಿಗೆ ಜೋಡಿಸಿಕೊಳ್ಳುತ್ತಾರೆ.

    ಆಧುನಿಕ ಕಾಲಘಟ್ಟದಲ್ಲಿ ಬೀಗದ ಚಿತ್ರಣ ಮತ್ತು ಬಳಕೆಯೂ ಸಾಕಷ್ಟು ಬದಲಾಗಿದೆ. ಹಿಂದೆಲ್ಲ ಮನೆ, ಕಚೇರಿ, ಅಂಗಡಿಗಳಲ್ಲಿ ಮಾತ್ರವೇ ಬಳಕೆಯಲ್ಲಿದ್ದ ಬೀಗಗಳನ್ನು ಇದೀಗ ಬಹುತೇಕ ದಿನ ಬಳಕೆ ವಸ್ತುಗಳಲ್ಲೂ ಅಳವಡಿಸಿಕೊಂಡಿದ್ದೇವೆ. ಇದೀಗ ಎಲ್ಲರ ಕೈಯಲ್ಲೂ ಮೊಬೈಲ್ ಫೋನ್​ಗಳಿರುವುದು ಸಾಮಾನ್ಯ ಸಂಗತಿ. ಅವುಗಳಲ್ಲಿ ಬಹುತೇಕರ ಮೊಬೈಲ್​ಗಳಿಗೆ ಲಾಕ್ ಹಾಕಲಾಗಿರುತ್ತದೆ. ಮೊಬೈಲ್​ನಲ್ಲಿರುವ ವಿಷಯ, ಕಡತ, ಇತ್ಯಾದಿಗಳ ಸಂರಕ್ಷಣೆಗೆ ಲಾಕ್ ವ್ಯವಸ್ಥೆ ಅಗತ್ಯವೂ ಆಗಿದೆ. ಕಚೇರಿಗಳೂ ಸಾಕಷ್ಟು ಸುಧಾರಿತಗೊಂಡಿದ್ದು, ಪ್ರತಿಯೊಬ್ಬ ಸಿಬ್ಬಂದಿಗೂ ಐಡಿ ಕಾರ್ಡ್ ನೀಡಲಾಗುತ್ತದೆ. ಅದನ್ನು ಹೊಂದಿದ್ದರೆ ಮಾತ್ರ ಕಚೇರಿಯನ್ನು ಪ್ರವೇಶಿಸಲು ಸಾಧ್ಯ. ಇಲ್ಲದಿದ್ದರೆ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹಿಂದಿರುಗಿ ಹೋಗಬೇಕಾಗುತ್ತದೆ. ಕಾರ್, ಬೈಕ್ ಮುಂತಾದ ವಾಹನಗಳಿಗೆ ಕೀಗಳಿವೆ. ಕೆಲವೊಂದು ವಿದ್ಯುತ್ ಯಂತ್ರಗಳಿಗೂ ಅವಘಡ ಸಂಭವಿಸಬಾರದೆಂದು ಲಾಕ್​ಗಳನ್ನು ಜೋಡಿಸಲಾಗುತ್ತದೆ. ಅತ್ಯಾಧುನಿಕ ಕಾರ್​ಗಳಲ್ಲಂತೂ ಸುರಕ್ಷತಾ ದೃಷ್ಟಿಯಿಂದ ಸಾಕಷ್ಟು ಲಾಕ್ ವ್ಯವಸ್ಥೆ ಮಾಡಲಾಗಿದೆ. ಸೀಟ್ ಬೆಲ್ಟ್ ಧರಿಸಿದರೆ ಮಾತ್ರ ವಾಹನ ಚಾಲೂ ಆಗುವುದು. ಮಕ್ಕಳನ್ನು ದೃಷ್ಟಿಯಲ್ಲಿರಿಸಿಕೊಂಡು ಚೈಲ್ಡ್ ಲಾಕ್ ಸಿಸ್ಟಮ್ ಇವೆ. ಈಗೀಗ ಕೀಲಿಕೈ ಇದ್ದರೆ ಸಾಕು ಅದನ್ನು ಹಾಕಬೇಕೆಂದೇನೂ ಇಲ್ಲ. ಬ್ಲೂಟೂತ್ ಮೂಲಕ ಕಾರಿನ ಬಾಗಿಲು ತೆರೆಯುವ ತಂತ್ರಜ್ಞಾನ ಬೆಳೆದಿದೆ. ಕೀಲಿಕೈ ಹತ್ತಿರಕ್ಕೆ ಕೊಂಡೊಯ್ದರೆ ಸಾಕು, ತನ್ನಿಂತಾನೇ ಬಾಗಿಲು ತೆರೆಯುವ ವ್ಯವಸ್ಥೆ, ಹಾಗೆಯೇ ರಿಮೋಟ್ ಮೂಲಕ ಆನ್, ಆಫ್ ಮಾಡುವ ವ್ಯವಸ್ಥೆಗಳೂ ಇವೆ.

    ನಮ್ಮ ಟಿ.ವಿ.ಗಳಲ್ಲಿ ಪೇರೆಂಟ್ ಲಾಕ್ ಸಿಸ್ಟಮ್ ಎಂಬುದು ಇದೆ. ಅಂದರೆ ಅದರಲ್ಲಿ ಮಕ್ಕಳಿಗೆ ಬೇಡವಾದ, ಅತಿರೇಕ ಎನ್ನಿಸುವ ಚಾನೆಲ್​ಗಳನ್ನು ಲಾಕ್ ಮಾಡಿ ಇಡಬಹುದಾಗಿದೆ. ವಾರ್ತೆಗಳು, ಚಲನಚಿತ್ರ, ನ್ಯಾಶನಲ್ ಜಿಯೋಗ್ರಫಿ, ಕಾರ್ಟೂನ್ ಹೀಗೆ ಬೇಕಾದ ಚಾನೆಲ್​ಗಳನ್ನು ಇರಿಸಿಕೊಳ್ಳಬಹುದು. ಈಗ ಹೇಗೂ ಪರೀಕ್ಷಾ ಸಮಯ. ಹೆಚ್ಚಿನ ಮಕ್ಕಳಿಗೆ ಮೊಬೈಲ್ ಮುಟ್ಟದಿದ್ದರೆ ಹೊಟ್ಟೆಗೆ ಸೇರದು, ನಿದ್ದೆಯೂ ಬಾರದು ಎಂದು ಮಕ್ಕಳ ಪೋಷಕರು ಅವಲತ್ತುಕೊಳ್ಳುತ್ತಾರೆ. ಅದಕ್ಕಾಗಿ ಮೊಬೈಲ್​ಗೆ ಲಾಕ್ ಹಾಕಿಬಿಡುತ್ತಾರೆ. ಈ ಚಾಲಾಕಿ ಮಕ್ಕಳು ಮೆಲ್ಲನೇ ಅಪ್ಪ-ಅಮ್ಮನಿಗೆ ಗೊತ್ತಾಗಂತೆ ಹೇಗೆ ಲಾಕ್ ಹಾಕಿದ್ದಾರೆ ಎಂದು ತಿಳಿದುಕೊಂಡು ಅವರು ಆ ಕಡೆ ಹೋದೊಡನೆ ಮೊಬೈಲ್ ಹಿಡಿದು ಕೂರುತ್ತಾರೆ.

    ಒಬ್ಬರು ಚಾಪೆಯಡಿ ತೂರಿದರೆ ಇನ್ನೊಬ್ಬರು ರಂಗೋಲಿಯಡಿ ತೂರಿಕೊಳ್ಳುವವರು ಇರುವಂತೆ ಮನೆಗೆ ಬೀಗ ಹಾಕಿದರೂ ಅದನ್ನು ಕೀ ಇಲ್ಲದೆಯೇ ತೆರೆದು ಅಥವಾ ಒಡೆದು ಕನ್ನ ಹಾಕುವ ಚಾಣಾಕ್ಷ ಕಳ್ಳರಿದ್ದಾರೆ. ಎಷ್ಟೇ ಆಧುನಿಕ ತಂತ್ರಜ್ಞಾನ ಬಳಸಿಕೊಂಡರೂ ತಮ್ಮ ಚಾಣಾಕ್ಷ ಬುದ್ಧಿಯಿಂದ ದರೋಡೆ, ಮೋಸ, ವಂಚನೆ ಮಾಡುವವರು ಇದ್ದಾರೆ. ನಿತ್ಯವೂ ರಕ್ಷಣೆ, ಭದ್ರತೆ ದೃಷ್ಟಿಯಿಂದ ಹಲವಾರು ಸಂಶೋಧನೆಗಳು ನಡೆಯುತ್ತಲೇ ಇವೆ. ಅಭಿವೃದ್ಧಿ ಆಗುತ್ತಲೇ ಇದೆ. ಇಂದಿನ ವಿಜ್ಞಾನ ತಂತ್ರಜ್ಞಾನ ಬಹಳಷ್ಟು ಮುಂದುವರೆದಿರುವುದು ಹೆಮ್ಮೆಯ ವಿಚಾರ. ಆದರೆ ತಂತ್ರಜ್ಞಾನಗಳಿಂದ ಎಷ್ಟು ಪ್ರಯೋಜನವಿದೆಯೋ ಅಷ್ಟೇ ಅಪಾಯವೂ ಇದೆ ಎಂಬುದನ್ನು ಮರೆಯಬಾರದು. ಯಾಕೆಂದರೆ ದೇಶದ ರಕ್ಷಣೆಗೆ ಮದ್ದು ಗುಂಡು, ಬಾಂಬ್​ಗಳನ್ನು ಇಟ್ಟುಕೊಳ್ಳುವುದು ಸರಿ. ಆದರೆ ಅದೇ ಮದ್ದು ಗುಂಡುಗಳು ವಿಧ್ವಂಸಕರ ಕೈ ಸೇರಿದರೆ ಏನಾಗಬಹುದು ಎಂದು ಆಲೋಚಿಸಿದರೆ ಭಯವಾಗುತ್ತದೆ. ಹಾಗೆ ಯೇ ಈ ತಂತ್ರಜ್ಞಾನಗಳು ಅಭಿವೃದ್ಧಿಗೊಂಡು ಸಾಕಷ್ಟು ಉತ್ತಮ ಕೆಲಸಗಳಾಗಲಿ. ಬದಲಾಗಿ ಅನರ್ಹರಿಗೆ ದೊರೆತು ಯಾವುದೇ ಕೆಟ್ಟ ಘಟನೆಗಳು ನಡೆಯದಿರಲಿ.

    ನಾನು ಹೇಳುವುದೆಂದರೆ ವಿಜ್ಞಾನ-ತಂತ್ರಜ್ಞಾನವನ್ನು ನಾವು ಬಳಸಿಕೊಳ್ಳಬೇಕು. ಬದಲಾಗಿ ತಂತ್ರಜ್ಞಾನ, ವಿಜ್ಞಾನದ ಅಡಿಯಾಳಾಗಬಾರದು. ಎಐ (ಆರ್ಟಿಫಿಶಿಯಲ್ ಇಂಟಲಿಜೆನ್ಸ್) ವರವೂ ಹೌದು ಶಾಪವೂ ಹೌದು. ವೈದ್ಯಕೀಯ, ಶಿಕ್ಷಣ, ರಕ್ಷಣೆ, ಉದ್ಯಮ ಹೀಗೆ ವಿವಿಧ ಕೇತ್ರಗಳಲ್ಲಿ ಸಾಕಷ್ಟು ಜನರಿಗೆ ಪ್ರಯೋಜನವಾಗುವುದಾದರೂ ಇದೇ ತಂತ್ರಜ್ಞಾನವನ್ನು ಬಳಸಿಕೊಂಡು ಅನಾಹುತ ಸೃಷ್ಟಿಸುವ, ಅಶ್ಲೀಲ-ಅನೈತಿಕತೆಯನ್ನು ಹುಟ್ಟು ಹಾಕುವ, ಸುಳ್ಳು ಸುದ್ದಿ ಹರಡುವ, ಅಪವಾದ ಹೊರಿಸುವ ಹೀಗೆ ಹಲವು ಬಗೆಯ ಕಾನೂನು ಬಾಹಿರ ಕಾರ್ಯಗಳೂ ನಡೆಯುತ್ತವೆ. ಇತ್ತೀಚೆಗಷ್ಟೇ ಡೀಪ್ ಫೇಕ್ ತಂತ್ರಜ್ಞಾನದಿಂದ ಅಮೆರಿಕದ ಉನ್ನತ ಹುದ್ದೆಗಳಲ್ಲಿ ಇರುವವರೂ ಮುಜುಗರಕ್ಕೀಡಾದ ಸುದ್ದಿಯೊಂದು ವರದಿಯಾಗಿತ್ತು.

    ತಂತ್ರಜ್ಞಾನದಿಂದಾಗಿ ಪ್ರಪಂಚದ ಮೂಲೆ ಮೂಲೆಗಳಿಂದ ಸುದ್ದಿಗಳು, ವಿವರ, ಮಾಹಿತಿಗಳು ಕೈಯಲ್ಲಿರುವ ಮೊಬೈಲ್​ನಲ್ಲಿ ಸಿಗುತ್ತವೆ. ತಾನು ಮೊದಲು ಸುದ್ದಿ ಕೊಡಬೇಕು ಎಂಬ ಧಾವಂತದಿಂದಾಗಿ ಬಹುತೇಕರು ನಿಜ ಸಂಗತಿಯನ್ನು ತಿಳಿದುಕೊಳ್ಳದೆ ಸುದ್ದಿ ಪ್ರಕಟಿಸುವುದುಂಟು. ಈ ಕಾರಣದಿಂದಾಗಿ ಯಾವುದು ಸತ್ಯ, ಯಾವುದು ಮಿಥ್ಯ ಎಂದು ತಿಳಿಯದೆ ಜನರು ಗೊಂದಲಕ್ಕೀಡಾಗುವುದುಂಟು. ಸುಳ್ಳು ಸುದ್ದಿಗಳಿಗೆ, ತಂತ್ರಜ್ಞಾನದ ದುರ್ಬಳಕೆಗೆ ಬೀಗ ಜಡಿಯಬೇಕಿದೆ. ಯಾಕೆಂದರೆ ಇವುಗಳ ಕಾರಣದಿಂದಾಗಿಯೇ ನಂಬಿಕೆ, ವಿಶ್ವಾಸಗಳು ಕಡಿಮೆಯಾಗುತ್ತಿದ್ದು, ಮಾನವೀಯ ಸಂಬಂಧ, ಮೌಲ್ಯಗಳು ಸೀಮಿತಗೊಳ್ಳುತ್ತಿರುವುದು. ನಮ್ಮೆಲ್ಲರ ಬದುಕು ನಿಂತಿರುವುದು ನಂಬಿಕೆಯ ಮೇಲೆ. ಈ ನಂಬಿಕೆಯ ಕೀಲಿ ಕೈಯನ್ನು ಯಾವತ್ತೂ ಕಳೆದುಕೊಳ್ಳಬಾರದು. ಯಾಕೆಂದರೆ ಬೆಟ್ಟ ಹತ್ತುವವನಿಗೆ ತಾನು ಬೆಟ್ಟ ಹತ್ತಬಲ್ಲೆ ಎಂಬ ನಂಬಿಕೆಯೇ ಇಲ್ಲದಿದ್ದರೆ ಬೆಟ್ಟ ಹತ್ತುವ ಪ್ರಯತ್ನವನ್ನೂ ಮಾಡಲಾರ. ನಂಬಿಕೆಯಿದ್ದರೆ ಕಾಲು ಇಲ್ಲದವರೂ ಕೂಡ ಕಷ್ಟಪಟ್ಟು ಬೆಟ್ಟ ಹತ್ತಬಲ್ಲರು. ನಮ್ಮ ನಿತ್ಯ ದಿನಚರಿಯಲ್ಲಾಗಲಿ, ಕೆಲಸ-ಕಾರ್ಯಗಳಲ್ಲಾಗಲಿ ನಂಬಿಕೆಯೇ ಮುಖ್ಯ. ಕೈಗೊಂಡ ಕಾರ್ಯದಲ್ಲಿ ಯಶಸ್ವಿಯಾಗುತ್ತೇನೆ, ಸಾಧಿಸಿ ತೋರಿಸುತ್ತೇನೆ ಎಂಬ ನಂಬಿಕೆ ಇದ್ದಲ್ಲಿ ಯಾವುದೇ ಸತ್ಕಾರ್ಯವನ್ನು ಸುಲಭವಾಗಿ ಮಾಡಬಹುದು.

    ನಮ್ಮಲ್ಲಿ ಹೆಚ್ಚಾಗಿ ವಟ ವಟ ಎಂದು ಮಾತನಾಡುವವರಿಗೆ ಅವನ ಬಾಯಿಗೆ ಬೀಗ ಹಾಕಬೇಕು ಎನ್ನುತ್ತಾರೆ. ಯಾಕೆಂದರೆ ಒಂದು ಕ್ಷಣವೂ ಸುಮ್ಮನಿರದೆ ಮಾತನಾಡುತ್ತಾ ಕಿರಿಕಿರಿಯುಂಟು ಮಾಡುತ್ತಾನೆ ಎಂದರ್ಥ. ಹಾಗೆಯೇ ನಮ್ಮ ಅಭಿವೃದ್ಧಿಗೆ ಅಡ್ಡಿ ಮಾಡುವ ಎಲ್ಲ ಅರಿಷಡ್ವರ್ಗಗಳಿಗೆ ಬೀಗ ಹಾಕಿ ಬದುಕಿನ ಯಶಸ್ಸಿನ ಕೀಲಿ ಕೈ ಮೂಲಕ ನೆಮ್ಮದಿಯ ಬದುಕನ್ನು ರೂಪಿಸಿಕೊಳ್ಳುವ ಮನಸ್ಸು ನಮ್ಮದಾಗಲಿ.

    ಶ್ರೀಲೀಲಾ ಜತೆ ನಟಿಸಲು ಸ್ಟಾರ್​ ನಟರಿಗೆ ಚಿಂತೆ! ಇದು ಮುಂದುವರಿದ್ರೆ ‘ಕಿಸ್’​ ಬೆಡಗಿಗೆ ಸಂಕಷ್ಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts